ಮಡಿಕೇರಿ, ಅ. 11: ಇಲ್ಲಿನ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್) ದಲ್ಲಿ ತಾ. 13 ರಿಂದ (ನಾಳೆ) ತಾ. 18ರ ತನಕ ಸುಮಾರು ಆರು ದಿನಗಳ ತನಕ ಭಾರತೀಯ ಸೇನೆಗೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಸೈನಿಕ ಕಲ್ಯಾಣ ಇಲಾಖೆಯಿಂದ ಮೈದಾನದಲ್ಲಿ ಸಕಲ ತಯಾರಿ ಆರಂಭಗೊಂಡಿದ್ದು; ಖುದ್ದು ಸೈನ್ಯಾಧಿಕಾರಿ ಬನ್ವರ್ ರಾಮ್ ನೇತೃತ್ವದ ತಂಡ ಇಲ್ಲಿಗೆ ಆಗಮಿಸಿ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.ನಾಳೆಯಿಂದ ಆರು ದಿನಗಳ ತನಕ ನಡೆಯಲಿರುವ ಮೊದಲ ಹಂತದ ನೇಮಕಾತಿ ಪ್ರಕ್ರಿಯೆಯಲ್ಲಿ; ಕೊಡಗು ಸೇರಿದಂತೆ ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಿಂದ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಈಗಾಗಲೇ

(ಮೊದಲ ಪುಟದಿಂದ) ‘ಆನ್‍ಲೈನ್’ ಮುಖಾಂತರ ಅರ್ಜಿಗಳನ್ನು ಸುಮಾರು 12 ಸಾವಿರ ಅಭ್ಯರ್ಥಿಗಳಿಂದ ಪಡೆದಿರುವದಾಗಿ ತಿಳಿದು ಬಂದಿದೆ.

ಹೀಗಾಗಿ ತಾ. 13 ರಿಂದ 18ರ ತನಕ ಪ್ರತಿ ದಿವಸ ಎರಡು ಸಾವಿರದಷ್ಟು ಮಂದಿಯ ನೇಮಕಾತಿ ಸಂಬಂಧ ದೇಹದಾಢ್ರ್ಯ ಪರೀಕ್ಷೆ ಮತ್ತು ಇತರ ಚಟುವಟಿಕೆಗಳನ್ನು ನಡೆಸಲಾಗುವದು ಎಂದು ಸೈನ್ಯದ ಮೂಲಗಳು ತಿಳಿಸಿವೆ. ಕೊಡಗು ಜಿಲ್ಲಾ ಕೇಂದ್ರ ಮೈದಾನ (ಮ್ಯಾನ್ಸ್ ಕಾಂಪೌಂಡ್)ದಲ್ಲಿ ಜರುಗಲಿರುವ ಆಯ್ಕೆ ಪ್ರಕ್ರಿಯೆ ಸಂಬಂಧ ಈಗಾಗಲೇ ಬೆಂಗಳೂರು ಸೈನಿಕ ವಲಯ ಕಚೇರಿಯ ಅಧಿಕಾರಿಗಳೊಂದಿಗೆ ಸಿಬ್ಬಂದಿಯ ತಂಡ ನಾಲ್ಕಾರು ವಾಹನಗಳಲ್ಲಿ ಆಗಮಿಸಿ ಪೂರ್ವ ತಯಾರಿ ನಿರತವಾಗಿದೆ.

ಈ ಸಂಬಂಧ ಕರ್ನಲ್ ಬನ್ವರ್‍ರಾಮ್ ಸಂಗಡಿಗರು ಮೈದಾನದಲ್ಲಿ ಅಭ್ಯರ್ಥಿಗಳ ಸಾಮಥ್ರ್ಯ ಪರೀಕ್ಷೆಗೆ ಪೂರಕ ಸಿದ್ಧತೆಯಲ್ಲಿ ತೊಡಗಿದ್ದು; ಬೆಂಗಳೂರು ವಲಯ ನೇಮಕಾತಿ ಅಧಿಕಾರಿ ಕರ್ನಲ್ ನವರತನ್ ಶಿಬಿಯಾ ಹಾಗೂ ಪ್ರಾದೇಶಿಕ ನಿರ್ದೇಶಕ ಬ್ರಿಗೇಡಿಯರ್ ರಾಯ್ ಮತ್ತು ಸೇನಾ ಆಸ್ಪತ್ರೆಯ ವೈದ್ಯ ಸಿಬ್ಬಂದಿ ಕೂಡ ಆಯ್ಕೆ ಶಿಬಿರಕ್ಕೆ ಆಗಮಿಸಲಿದ್ದಾರೆ.

ಮೈದಾನವೆಲ್ಲಾ ಹೆಂಡ ಬಾಟಲಿ : ಮಡಿಕೇರಿ ದಸರಾ ನಾಡಹಬ್ಬದ ಪ್ರಯುಕ್ತ ವಿಜಯದಶಮಿಯ ರಾತ್ರಿ ಈ ಮೈದಾನದಲ್ಲಿ ಪ್ರವಾಸಿಗಳ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದರಿಂದ ಇಡೀ ಮ್ಯಾನ್ಸ್ ಕಾಂಪೌಂಡ್ ತುಂಬಾ ಹೆಂಡದ ಬಾಟಲಿಗಳೊಂದಿಗೆ; ಪ್ರವಾಸಿಗರು ಕುಡಿದು, ತಿಂದು ತೇಗಿದ್ದಲ್ಲದೆ ಅಲ್ಲಲ್ಲಿ ಎಸೆದಿದ್ದ ರಾಶಿ ರಾಶಿ ಕಸ ಸೈನ್ಯಾಧಿಕಾರಿಗಳಿಗೆ ಎದುರಾಯಿತು.

ಹೀಗಾಗಿ ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ಪೊಲೀಸರ ಸಹಿತ ಸಾರ್ವಜನಿಕರು, ಕ್ರೀಡಾಂಗಣ ದತ್ತ ಆಡಲು ಬರುವವರು ಸೇರಿ ಈ ಕಸವನ್ನು ಒಂದೆಡೆ ಸಂಗ್ರಹಿಸಿ ನಗರಸಭೆ ವಾಹನ ತರಿಸಿ ಅಲ್ಲಿಂದ ಇಂದು ಸಾಗಹಾಕಿದ ದೃಶ್ಯ ಎದುರಾಯಿತು.

ಮೈದಾನದ ಅಲ್ಲಲ್ಲಿ ಹೆಂಡ ಕುಡಿದ ಬಾಟಲಿಗಳನ್ನು ದಸರಾ ಮೋಜಿನಲ್ಲಿ ತೊಡಗಿದ್ದ ಮಂದಿ ಒಡೆದು ಹಾಕಿದ್ದ ತಿಳಿಗೇಡಿ ಕೃತ್ಯವೂ ಗೋಚರಿಸಿತು. ಸೇನಾ ಸಿಬ್ಬಂದಿಯೊಂದಿಗೆ ಇತರರು ಸೇರಿ ಎಲ್ಲವನ್ನು ಸ್ವಚ್ಛಗೊಳಿಸುವಲ್ಲಿ ಕೈಜೋಡಿಸಿದರು. ಒಟ್ಟಿನಲ್ಲಿ ದೇಶ ಕಾಯುವ ಸೈನಿಕರಿಗೆ ತಮ್ಮ ತಂಡದಲ್ಲಿ ಹೊಸ ಮುಖಗಳ ಸೇರ್ಪಡೆ ಸಂಬಂಧ ವೀರ ಸೈನಿಕರ ಬೀಡು, ಕ್ರೀಡೆಯ ತವರು ಜಿಲ್ಲೆ ಎಂಬ ಹೆಗ್ಗಳಿಕೆಯ ಕೊಡಗು ಜಿಲ್ಲಾ ಕೇಂದ್ರ ಮೈದಾನದಲ್ಲಿ ಒಂದು ರೀತಿ ಹೇಸಿಗೆ ಹುಟ್ಟಿಸುವ ದೃಶ್ಯ ಇಂದು ಎದುರಾಯಿತು. ಈ ಬಗ್ಗೆ ನಗರಸಭೆಯ ಗಮನ ಸೆಳೆಯಲಾಗಿ ಇರುವಷ್ಟು ಸಿಬ್ಬಂದಿ, ಬೇರೆ ಬೇರೆ ಬಡಾವಣೆಗಳಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದರಿಂದ ಅನಿವಾರ್ಯ ವೆಂಬಂತೆ, ಸೈನಿಕ ಸಿಬ್ಬಂದಿ, ಕೆಲವಷ್ಟು ಪೊಲೀಸರು, ಸಾರ್ವಜನಿಕರು ಈ ಮೈದಾನದ ಕೊಳಕಿಗೆ ಮುಕ್ತಿ ಕಾಣಿಸಿದರು. -ಶ್ರೀಸುತ