ಮಡಿಕೇರಿ, ಅ. 11: ನಿನ್ನೆ ಸಂಜೆ ನಗರದ ಮಳಿಗೆಯೊಂದರಲ್ಲಿ ಮೊಬೈಲ್‍ಗೆ ಕರೆನ್ಸಿ ಹಾಕುವ ನೆಪದಲ್ಲಿ; ರೂ. 2 ಸಾವಿರ ಮುಖಬೆಲೆಯ ಖೋಟಾನೋಟು ಚಲಾವಣೆಯಲ್ಲಿ ತೊಡಗಿದ್ದ ಆರೋಪಿಗಳಿಬ್ಬರನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಖೋಟಾನೋಟು ಆರೋಪಿ ಗಳಾದ ಕುಂಜಿಲ ಗ್ರಾಮದ ಅಬೂಬಕರ್ ಪುತ್ರ ಅಮೀರ್ ಸೋಹೈಲ್ (20) ಹಾಗೂ ಬೇತ್ರಿ ಸಮೀಪದ ನಾಲ್ಕೇರಿ ಗ್ರಾಮದ ಯೂಸೂಫ್ ಎಂಬವರ ಪುತ್ರ ಯು.ವೈ. ಯೂನೀಸ್ (20) ಬಂಧಿತರಾಗಿದ್ದಾರೆ. ನಾಪೋಕ್ಲು ವ್ಯಾಪ್ತಿಯ ಮತ್ತೋರ್ವ ಹದಿನೇಳರ ಅಪ್ರಾಪ್ತ ಕೂಡ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.ಆರೋಪಿಗಳಿಂದ ರೂ. 2 ಸಾವಿರ ಮುಖಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು; ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು; ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತನನ್ನು ಬಾಲಕರ ಬಾಲಮಂದಿರಕ್ಕೆ ಸೇರಿಸಲು ಕ್ರಮ ಜರುಗಿಸಲಾಗಿದೆ.
ಘಟನೆ ವಿವರ: ನಗರ ಪೊಲೀಸ್ ಠಾಣಾ ಸರಹದ್ದಿನ ಕಾಲೇಜು ರಸ್ತೆಯ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್‍ನಲ್ಲಿ ತಾ. 10 ರಂದು ಪಿರ್ಯಾದಿ ಮುಕುಂದ ಎಂಬವರು; ಕೆಲಸ ನಿರ್ವಹಿಸುತ್ತಿರುವಾಗ ಸಂಜೆ ಸುಮಾರು 4 ಗಂಟೆಗೆ ಒಬ್ಬ ವ್ಯಕ್ತಿಯು; ಏರ್‍ಟೆಲ್ ಕಂಪೆನಿಯ ಮೊಬೈಲ್ ಸಂಖ್ಯೆಗೆ ಕರೆನ್ಸಿ ಹಾಕುವಂತೆ ತಿಳಿಸಿ, 2000 ರೂ. ಮುಖಬೆಲೆಯ ನೋಟನ್ನು ಕೊಟ್ಟಿದ್ದಾನೆ. ಸದರಿ ನೋಟನ್ನು
(ಮೊದಲ ಪುಟದಿಂದ) ನೋಡಿದಾಗ ಸಂಶಯಗೊಂಡು ನೋಟು ನಕಲಿ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಮೇರೆಗೆ ಪೊಲೀಸರು ಸದರಿ ಕರೆನ್ಸಿ ಸೆಂಟರ್‍ಗೆ ಬಂದಿದ್ದು; ಫಿರ್ಯಾದಿಯು ಪೊಲೀಸರಿಗೆ ತೋರಿಸಿ ಕೊಟ್ಟ ಮೇರೆಗೆ ಅಮೀರ್ ಸೋಹೈಲ್‍ನನ್ನು ವಶಕ್ಕೆ ಪಡೆಯಲಾಗಿದೆ. ಪಿರ್ಯಾದಿಯು ನೀಡಿದ ಪುಕಾರನ್ನು ಹೊಂದಿಕೊಂಡು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿದೆ.
ನಗರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಸದರಿ ಪ್ರಕರಣದಲ್ಲಿನ ಉಳಿದ ಆರೋಪಿಗಳ ಪತ್ತೆ ಬಗ್ಗೆ ತಂಡವನ್ನು ರಚಿಸಿದ್ದು, ಸದರಿ ತಂಡವು ಮತ್ತೋರ್ವ ಆರೋಪಿಯನ್ನು ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ವಶಕ್ಕೆ ಪಡೆದುಕೊಂಡು ಸದರಿಯವರು ಗಳಿಂದ 2000 ರೂ. ಮುಖ ಬೆಲೆಯ ಒಟ್ಟು 5 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದಂತೆ; ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ ದಿನೇಶ್‍ಕುಮಾರ್ ಮಾರ್ಗ ದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಗರ ಠಾಣಾ ಉಪ ನಿರೀಕ್ಷಕ ಎಂ.ಕೆ. ಸದಾಶಿವ ಮತ್ತು ಎಎಸ್‍ಐ ಅಕ್ಮಲ್, ಮುಖ್ಯಪೇದೆ ಡಿ.ಎಸ್. ಲೋಕೇಶ್, ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಎ.ಟಿ. ರಾಘವೇಂದ್ರ, ಬಿ.ಕೆ. ಪ್ರವೀಣ್, ನಾಗರಾಜ್ ಕಡಗನ್ನವರ್, ಶರತ್ ರೈ, ಭಾನುಪ್ರಕಾಶ್, ಶಶಿಕುಮಾರ್ ಮತ್ತು ಸೌಮ್ಯ ಇವರುಗಳನ್ನು ಒಳಗೊಂಡ ತಂಡವು ಜಿಲ್ಲಾ ಪೊಲೀಸ್ ಕಚೇರಿಯ ರಾಜೇಶ್ ಮತ್ತು ಗಿರೀಶ್ ಸಹಾಯದಿಂದ ಪ್ರಕರಣ ಬೇಧಿಸಿದ್ದಾರೆ.