ಮಡಿಕೇರಿ, ಅ. 11: ಭಾಗಮಂಡಲ ಹೋಬಳಿಯ ಚೇರಂಗಾಲ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಮನೆ - ರೆಸಾರ್ಟ್ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಮರ - ಗಿಡಗಳನ್ನು ಕಡಿದುರುಳಿಸಿ, ಜೆಸಿಬಿ ಬಳಸಿ ಸಮತಟ್ಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವಾರಿ, ಸರಕಾರಿ ಅಧಿಕಾರಿಯನ್ನು ಜಿಲ್ಲಾಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಡಿಕೇರಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೆ.ಟಿ. ಸತೀಶ್ ಎಂಬವರೇ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ.ಕಳೆದ ತಾ. 13.8.19 ರಂದು ‘ಬ್ರಹ್ಮಗಿರಿ ಬೆಟ್ಟ ತಪ್ಪಲನ್ನು ಕೊರೆದು ಮೈದಾನ ಮಾಡಲು ಅನುಮತಿ ಕೊಟ್ಟವರಾರು?’ ಎಂಬ ಶೀರ್ಷಿಕೆಯಡಿ ಚೇರಂಗಾಲದಲ್ಲಿ ಬೆಟ್ಟವನ್ನು ಕೊರೆದು ಸಮತಟ್ಟು ಮಾಡಿರುವ ಬಗ್ಗೆ ವಿಸ್ತøತ ವರದಿ ಪ್ರಕಟಿಸಿತ್ತು. ಈ ವರದಿ ಆಧಾರದಲ್ಲಿ ತನಿಖೆ ಕೈಗೊಂಡ ಜಿಲ್ಲಾಧಿಕಾರಿಗಳು ಇದಕ್ಕೆ ಪ್ರಮುಖ ಕಾರಣಕರ್ತರಾದ ಸತೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ತನಿಖೆ ವಿವರ

ಭಾಗಮಂಡಲ ಹೋಬಳಿ, ಚೇರಂಗಾಲ ಗ್ರಾಮದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಸರ್ವೆ ನಂ. 37/2ರ ಅಂದಾಜು 4 ಎಕ್ರೆ ಜಾಗದ ಪೈಕಿ 1 ಎಕ್ರೆ ಪ್ರದೇಶದಲ್ಲಿನ ಮರಕಡಿದು, ಜೆಸಿಬಿ ಯಂತ್ರವನ್ನು ಬಳಸಿಕೊಂಡು ಬೆಟ್ಟವನ್ನು ಕೊರೆದು, ಬೆಟ್ಟ ಕೊರೆದ ಭಾಗದ ನೂರಾರು ಟನ್ ಮಣ್ಣನ್ನು ಕೋಳಿಕಾಡು ಕಾಲೋನಿಯ ಮೇಲ್ಭಾಗದ ಬೆಟ್ಟದ ಅಂಚಿಗೆ ಸುರಿದಿರುವದರಿಂದ ಈ ಭಾಗಗಳಲ್ಲಿ ಬಿರುಕುಗಳು ಮೂಡಿದ್ದು, ಯಾವದೇ ಕ್ಷಣದಲ್ಲಿ ಭಾರೀ ಭೂಕುಸಿತವಾಗುವ ಸಾಧ್ಯತೆಗಳು ಇರುವದಾಗಿ ಸ್ಥಳೀಯರ ಆತಂಕದ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗಿದೆ.

ಈ ಸುದ್ದಿಯ ಬಗ್ಗೆ ಜಂಟಿಯಾಗಿ ಪರಿಶೀಲಿಸಿ ವರದಿ ನೀಡಲು ಉಪ ವಿಭಾಗಾಧಿಕಾರಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ತಂಡವು ತಾ. 20.9.2019 ರಂದು ಸ್ಥಳ ಪರಿಶೀಲಿಸಿದ್ದು, ವರದಿ ಸಲ್ಲಿಸಿದ್ದಾರೆ. ವರದಿ ಸಾರಾಂಶ ಈ ಕೆಳಕಂಡಂತಿದೆ.

‘‘ದಿನಾಂಕ 20.9.2019 ರಂದು ಉಪವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ, ಭೂದಾಖಲೆಗಳ ಉಪ ನಿರ್ದೇಶಕರು,

(ಮೊದಲ ಪುಟದಿಂದ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಉಪ ವಿಭಾಗ ಹಾಗೂ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರುಗಳು ಜಂಟಿಯಾಗಿ ಸದರಿ ಸರ್ವೆ ನಂಬರಿನ ಸ್ಥಳ ಪರಿಶೀಲಿಸಲಾಯಿತು. ಸ್ಥಳ ಪರಿಶೀಲನಾ ವೇಳೆಯಲ್ಲಿ ಜೆ.ಟಿ. ಸತೀಶ್ ಎಂಬವರು ಚೇರಂಗಾಲ ಗ್ರಾಮದ ಸ.ನಂ. 2/3ರಲ್ಲಿ 6 ಎಕ್ರೆ ಪ್ರದೇಶದಲ್ಲಿ ಇದ್ದ ಮರಗಳನ್ನು ಕಡಿದು, ಜೆಸಿಬಿಯಿಂದ ನೆಲಸಮ ಮಾಡಿ ಮನೆ, ರಸ್ತೆ ಹಾಗೂ ಕೆರೆ ನಿರ್ಮಿಸಿರುವದು ಕಂಡು ಬಂದಿರುತ್ತದೆ. ಅವರ ತಾಯಿ ಜೆ.ಟಿ. ಅಕ್ಕಯ್ಯ, ಕೋಂ. ಪೌತಿ ಜೆ. ತಿಮ್ಮಯ್ಯ ಅವರಿಗೆ ಚೇರಂಗಾಲ ಗ್ರಾಮದ ಸ.ನಂ. 37/2ರಲ್ಲಿ 4.30 ಎಕ್ರೆ ಜಾಗ ಮಂಜೂರಾಗಿದ್ದು, ತಿಮ್ಮಯ್ಯ ಅವರ ಮರಣದ ನಂತರ ಸ.ನಂ. 37/2ರಲ್ಲಿ 4.30 ಎಕ್ರೆ ಜಾಗಕ್ಕೆ ಜೆ.ಟಿ. ಸತೀಶ್ ಅವರಿಗೆ ತಹಶೀಲ್ದಾರ್ ಮಡಿಕೇರಿರವರ ಕಚೇರಿ ಆದೇಶ ಸಂಖ್ಯೆ ಅಕ್ರ/125/98-99ರಲ್ಲಿ ಸಾಗುವಳಿ ಚೀಟಿ ನೀಡಲಾಗಿರುತ್ತದೆ. ಆದರೆ ವಾಸ್ತವವಾಗಿ ಜೆ.ಟಿ. ಸತೀಶ್ ಅವರ ಸ.ನಂ. 2/3ರಲ್ಲಿ ಮರಗಳನ್ನು ಕಡಿದು, ಜಮೀನಿನ ನೆಲವನ್ನು ಸಮತಟ್ಟು ಮಾಡಿ ಮನೆ, ರಸ್ತೆ ಮಾಡಿರುವದು ಕಂಡು ಬಂದಿರುತ್ತದೆ. ಅದು ವಾಸ್ತವವಾಗಿ ಸ.ನಂ. 2/3 ಆಗಿದ್ದು, ಜೆ.ಟಿ. ಸತೀಶ್ ಅವರಿಗೆ ಮಂಜೂರಾದ ಸ.ನಂ. 37/2 ನ್ನು ಹೊರತುಪಡಿಸಿ, ಸ.ನಂ. 2/3ರ ಸರ್ಕಾರಿ ಹಾಗೂ ಅರಣ್ಯ ಪ್ರದೇಶದಲ್ಲಿ ಗುಡ್ಡ ಕೊರೆದು ಮಣ್ಣನ್ನು ತೆಗೆದು ಹಾಗೂ ನೆಲಸಮ ಮಾಡಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಗುಡ್ಡ ಜರುಗುವಂತಹ ಪರಿಸ್ಥಿತಿ ಉಂಟಾಗಿರುವದು ಸ್ಥಳ ಪರಿಶೀಲನಾ ವೇಳೆ ಕಂಡು ಬಂದಿರುತ್ತದೆ’’ ಎಂದು ಸರ್ವೆ ನಕ್ಷೆಯೊಂದಿಗೆ ವರದಿ ಸಲ್ಲಿಸಿದ್ದಾರೆ.

ಮೇಲಿನ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಜೆ.ಟಿ. ಅಕ್ಕಯ್ಯ, ಕೋಂ. ಪೌತಿ ಜೆ. ತಿಮ್ಮಯ್ಯ ಅವರಿಗೆ ಚೇರಂಗಾಲ ಗ್ರಾಮದ ಸ.ನಂ. 37/2ರಲ್ಲಿ 4.30 ಎಕ್ರೆ ಜಾಗ ಮಂಜೂರಾಗಿದ್ದು, ಅವರ ಮರಣದ ನಂತರ ಸ.ನಂ. 37/2ರಲ್ಲಿ 4.30 ಎಕ್ರೆ ಜಾಗಕ್ಕೆ ಜೆ.ಟಿ. ಸತೀಶ್ ಅವರಿಗೆ ತಹಶೀಲ್ದಾರ್, ಮಡಿಕೇರಿರವರ ಕಚೇರಿ ಆದೇಶ ಸಂಖ್ಯೆ ಅಕ್ರ/125/98-99ರಲ್ಲಿ ಸಾಗುವಳಿ ಚೀಟಿ ನೀಡಲಾಗಿರುತ್ತದೆ. ಮುಂದುವರೆದು, ಸ.ನಂ. 2/3ರ ಪಹಣಿ ದಾಖಲೆಯನ್ನು ಪರಿಶೀಲಿಸಲಾಗಿ ಪಹಣಿಯ ಕಾಲಂ ಸಂಖ್ಯೆ 9ರಲ್ಲಿ ‘ಸರಕಾರದವರು ಅರಣ್ಯ ಇಲಾಖೆ’ ಎಂದು ಮತ್ತು ಕಾಲಂ ಸಂಖ್ಯೆ 6 ರಲ್ಲಿ ಫಾರೆಸ್ಟ್ ಪೈಸಾರಿ ಎಂದಿರುತ್ತದೆ. ಸತೀಶ್ ಅವರು ಸರ್ಕಾರಿ ನೌಕರರಾಗಿದ್ದು, ಮಡಿಕೇರಿ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಸತೀಶ್ ಅವರು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಸ.ನಂ. 2/3ರ 6 ಎಕ್ರೆ ಸರ್ಕಾರಿ ಹಾಗೂ ಅರಣ್ಯದ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ, ಜಮೀನಲ್ಲಿನ ಮರಗಳನ್ನು ಕಡಿದು, ಜಮೀನನ್ನು ನೆಲವನ್ನು ಸಮತಟ್ಟು ಮಾಡಿ ಮನೆ, ರಸ್ತೆ ಮಾಡಿರುವದು ಸರ್ಕಾರದ ನಿಯಮ ಕಾಯ್ದೆಗಳಿಗೆ ವಿರುದ್ಧವಾಗಿರುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸತೀಶ್ ಅವರು ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ನಿಯಮ ಉಲ್ಲಂಘಿಸಿರುವದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಹಾಗೂ ಅವರು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳು ಇರುವದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತ್ತುಗೊಳಿಸುವದು ಸೂಕ್ತವೆಂದು ಕಂಡು ಬಂದ ಕಾರಣ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಜೆ.ಟಿ. ಸತೀಶ್ ಅವರನ್ನು ನಿಯಮಬಾಹಿರ ಸರ್ಕಾರಿ ಹಾಗೂ ಅರಣ್ಯ ಜಮೀನು ಅತಿಕ್ರಮಣ ಮತ್ತು ಮರಗಳನ್ನು ಕಡಿದು ನೆಲ ಸಮತಟ್ಟು ಮಾಡಿರುವ ಆರೋಪದಡಿ ಕರ್ನಾಟಕ ನಾಗರಿಕ ಸೇವಾ (ಸಿಸಿ&amdiv;ಎ) ನಿಯಮಗಳು 1957ರ ನಿಯಮ 10(1)ರಡಿ ದತ್ತವಾಗಿರುವ ಅಧಿಕಾರದನ್ವಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮ 98ರನ್ವಯ ಈ ನೌಕರರು ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ನಿಲಂಬನೆಯ ಅವಧಿಯಲ್ಲಿ ಪೂರ್ವಾನುಮತಿ ಪಡೆಯದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ತಿಳಿಸಿದೆ ಹಾಗೂ ಇವರ ಲೀನ್‍ನ್ನು ತಾಲೂಕು ಕಚೇರಿ ವೀರಾಜಪೇಟೆ ಇಲ್ಲಿ ಖಾಲಿ ಇರುವ ಪ್ರ.ದ.ಸ. ಹುದ್ದೆಗೆ ಬದಲಾಯಿಸಿ ಆದೇಶ ಹೊರಡಿಸಲಾಗಿದೆ.