ಕೂಡಿಗೆ, ಅ. 11: ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ 2018-19ನೇ ಸಾಲಿನ ಗ್ರಾಮಸಭೆಗಳು ನಡೆದಿದ್ದು, ಆ ಸಭೆಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಿ, ಆಯ್ಕೆ ಪ್ರಕ್ರಿಯೆಗಳು ನಡೆದಿದ್ದರೂ ಸಹ ಇದುವರೆಗೂ ನಿವೇಶನ ರಹಿತರಿಗೆ ಮನೆಗಳು ಮಂಜೂರಾಗಿಲ್ಲ.

2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ 104 ಗ್ರಾಮ ಪಂಚಾಯಿತಿಗಳಿಗೆ ತಲಾ 20 ಮನೆಗಳನ್ನು ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ನೀಡುತ್ತಾ ಬಂದಿದೆ. ಆದರೆ, ಈ ಸಾಲಿನಲ್ಲಿ ಕಳೆದ ಸಾಲಿನ ಮನೆಗಳು ಮಂಜೂರಾಗದೆ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯ್ತಿಯ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರು ಫಲಾನುಭವಿಗಳ ಹೆಸರನ್ನು ನಮೂದಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಆದರೆ ಇದುವರೆಗೂ ತಾಲೂಕು ಮಟ್ಟದಿಂದ ಗ್ರಾಮ ಪಂಚಾಯಿತಿಗೆ ಮನೆಯ ಮಂಜೂರಾತಿಯ ಬಗ್ಗೆ ಮಾಹಿತಿಯೇ ಇಲ್ಲ. ಗ್ರಾಮ ಮಟ್ಟದ ಫಲಾನುಭವಿಗಳಿಗೆ ಮನೆ ದೊರಕಬಹುದೆಂಬ ಅಭಿಲಾಷೆ ದೂರವಾಗಿದೆ. ಆಯ್ಕೆಗೊಂಡಿರುವ ನಿವೇಶನ ರಹಿತ ಫಲಾನುಭವಿಗಳು ದಿನಂಪ್ರತಿ ತಮ್ಮ ವ್ಯಾಪ್ತಿಯ ಜನಪ್ರತಿಗಳನ್ನು ಕೇಳುವದೇ ಕೆಲಸವಾಗಿದೆ. ನಿವೇಶನ ರಹಿತರ ಆಯ್ಕೆ ಪಟ್ಟಿ ಸಿದ್ಧಗೊಂಡು, ಜಿಲ್ಲಾ ಮಟ್ಟಕ್ಕೆ ಹೋಗಿದ್ದರೂ ಸಹ ಸರ್ಕಾರದಿಂದ ಇನ್ನೂ ಮನೆಗಳ ಮಂಜೂರಾತಿ ದೊರೆತಿಲ್ಲ.

ಸರ್ಕಾರದಿಂದಲೇ ನಿವೇಶನ ರಹಿತರಿಗೆ 2018-19ನೇ ಸಾಲಿನ ಮನೆಗಳೇ ಮಂಜೂರಾಗದಿದ್ದರೂ, 2019-20ನೇ ಸಾಲಿನಲ್ಲಿಯೂ ಸಹ ಪಟ್ಟಿ ತಯಾರಿಸಿ ಕಳುಹಿಸುವ ವ್ಯವಸ್ಥೆಯಾಗುತ್ತಿದೆ. ಬಸವ ಯೋಜನೆ, ಅಂಬೇಡ್ಕರ್ ಸೇರಿದಂತೆ ವಿವಿಧ ಯೋಜನೆಯಡಿ ಸಹ ಮನೆಗಳು ಮಂಜೂರಾಗಿಲ್ಲ. ಜಿಲ್ಲೆಯು ಈಗಾಗಲೇ ನೆರೆ ಪೀಡಿತ ಪ್ರದೇಶವಾಗಿದ್ದು, ಸಂಕಷ್ಟದಲ್ಲಿರುವÀ ನಿವೇಶನ ರಹಿತರಿಗೆ ಮನೆಗಳನ್ನು ಮಂಜೂರು ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನಿವೇಶನ ರಹಿತರಿಗೆ ನೆಲೆ ಕಲ್ಪಿಸಿಕೊಡುವತ್ತ ಗಮನಹರಿಸಬೇಕು ಎಂದು ನಿವೇಶನ ರಹಿತರು ಒತ್ತಾಯಿಸಿದ್ದಾರೆ.

ಜಿಲ್ಲೆಯ ಉಸ್ತುವಾರಿಯನ್ನು ಹೊತ್ತಿರುವ ಕರ್ನಾಟಕ ಸರ್ಕಾರದ ವಸತಿ ಸಚಿವ ವಿ.ಸೋಮಣ್ಣ ಶೀಘ್ರದಲ್ಲಿ ಮನೆಗಳನ್ನು ಮಂಜೂರು ಮಾಡಿ ನಿವೇಶನ ರಹಿತರಿಗೆ ನೆಲೆಯನ್ನು ಕಲ್ಪಿಸಿಕೊಡಬೇಕು ಎಂದು ವಸತಿ ರಹಿತರು ಒತ್ತಾಯಿಸಿದ್ದಾರೆ.