ಕೂಡಿಗೆ, ಅ. 11: ಕುಶಾಲನಗರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿರುವ ಗ್ರಾಮಸ್ಥರು ಸಣ್ಣ ಪ್ರಮಾಣದ ಕಾಮಗಾರಿಗಳಾದ, ಉಪರಸ್ತೆ, ಅಂಗನವಾಡಿಗಳ ತಡೆಗೋಡೆ, ಶಾಲಾ ಆವರಣ ಶುಚಿತ್ವ, ಕಿರು ರಸ್ತೆ, ಕಿರು ನೀರು ಸರಬರಾಜು ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಿದ್ದಾರೆ. ಈ ಕೆಲಸಗಳಿಗೆ ಸ್ಥಳೀಯ ಗ್ರಾಮಸ್ಥರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕೆಲಸವನ್ನು ಮಾಡಿರುತ್ತಾರೆ. ಮಾಡಿದ ಕೆಲಸಕ್ಕೆ ಹಣವನ್ನು ಅವರವರ ಖಾತೆಗೆ ವರ್ಗಾಯಿಸುವದು ಪಂಚಾಯತ್ ರಾಜ್ ಇಲಾಖೆಯ ನಿಯಮವಾಗಿದೆ. ಆದರೆ, ಈಗಾಗಲೇ ಆರು ತಿಂಗಳಿಂದ ಗ್ರಾಮಸ್ಥರಿಗೆ ಯಾವದೇ ಹಣ ಖಾತೆಗೆ ಬಂದಿರುವದಿಲ್ಲ. ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. 3 ರಿಂದ 4 ಲಕ್ಷ ಕಾಮಗಾರಿ ನಡೆದಿದ್ದು ಅಷ್ಟು ಹಣ ಬರಬೇಕಿದೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾ.ಪಂ. ಮಾಸಿಕ ಸಭೆಯಲ್ಲಿ ಗ್ರಾ.ಪಂ. ಸದಸ್ಯರು ಆಡಳಿತ ಮಂಡಳಿಗೆ ಸಿಮೀತವಾದಂತೆ ಸಭೆಯಲ್ಲಿ ಚರ್ಚೆ ಮಾಡುತ್ತಾರೆ. ಆದರೆ, ಯಾವದೇ ರೀತಿಯ ಸ್ಪಂದನೆ ಮೇಲ್ಮಟ್ಟದ ದೊರೆತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಉದ್ಯೋಗ ಖಾತ್ರಿ ಹಣವನ್ನು ಕೆಲಸ ನಿರ್ವಹಿಸಿದವರ ಖಾತೆಗೆ ವರ್ಗಾಯಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.