ಮಡಿಕೇರಿ, ಅ. 11 : ಮಡಿಕೇರಿ ದಸರಾ ಜನೋತ್ಸವದ ಆಕರ್ಷಣೆ ಯಾದ ದಶಮಂಟಪಗಳಿಗೆ ನೀಡಲ್ಪಡುವ ಬಹುಮಾನದ ತೀರ್ಪು ಈ ಬಾರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹೊರ ಬಿದ್ದಿದೆ ಎಂದು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ ಯುವಕ ಮಿತ್ರ ಮಂಡಳಿ ಆರೋಪಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಅಧ್ಯಕ್ಷ ಹೆಚ್.ಎಲ್. ಯೋಗೇಶ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಸದಾ ಮುದ್ದಪ್ಪ ಹಾಗೂ ಪ್ರಸಾದ್ ಪೆರ್ಲ ಅವರುಗಳು ದಶಮಂಟಪ ಸಮಿತಿ ಅಧ್ಯಕ್ಷರು ಮೌನ ಮುರಿದು ಸೂಕ್ತ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿ ವರ್ಷ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಮಂಟಪವು ಅದ್ಧೂರಿ ವೆಚ್ಚದೊಂದಿಗೆ ಕಥಾ ಸಾರಾಂಶವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಿದೆ. ಈ ಬಾರಿಯೂ ಎಲ್ಲರ ನಿರೀಕ್ಷೆಗೂ ಮೀರಿ ಮಂಟಪ ಆಕರ್ಷಣೆಯನ್ನು ಪಡೆದುಕೊಂಡಿತ್ತು, ಅಲ್ಲದೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ತೀರ್ಪುಗಾರರು ಮಾತ್ರ ನಮ್ಮ ಸಮಿತಿಯ ಮಂಟಪವನ್ನು ಕಡೆಗಣಿಸಿ ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ತಮಗೆ ಬೇಕಾದವರಿಗೆ ಬಹುಮಾನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಾರಿ ಪ್ರಥಮ ಬಹುಮಾನ ಪಡೆದ ಮಂಟಪದ ಮುಖ್ಯ ಕಲಾಕೃತಿ ಕಥೆಗೆ ಪೂರಕವಾಗಿ ಚಲನವಲನಗಳನ್ನು ಹೊಂದಿರದೆ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿತ್ತು. ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲೂ ಟೀಕೆಗೆ ಗುರಿಯಾಗಿತ್ತು. ಆದರೂ ನ್ಯೂನತೆಗಳಿದ್ದ ಮಂಟಪಕ್ಕೆ ಪ್ರಥಮ ಬಹುಮಾನ ನೀಡಲಾಗಿದೆ. ಇದು ದಶಮಂಟಪ ಸಮಿತಿಯ ಅಧ್ಯಕ್ಷರ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿರುವ ಪ್ರಮುಖರು, ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಮಂಟಪಕ್ಕೆ ಉದ್ದೇಶಪೂರ್ವಕ ವಾಗಿಯೇ ಸುಮಾರು ನೂರು ಅಂಕಗಳನ್ನು ಕಡಿಮೆ ನೀಡಲಾಗಿದೆ. ಅಷ್ಟೊಂದು ಅದ್ಧೂರಿ ಮತ್ತು ಆಕರ್ಷಕವಾಗಿದ್ದ ಜನಮೆಚ್ಚಿದ ಮಂಟಪಕ್ಕೆ ನೂರು ಅಂಕಗಳನ್ನು ಕಡಿತಗೊಳಿಸಲು ಕಾರಣಗಳೇ ಇರಲಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ತಂಡದ ಸದಸ್ಯರು ತೀರ್ಪುಗಾರರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ಶ್ರೀಕೋಟೆ ಮಾರಿಯಮ್ಮ ಮಂಟಪ ಪ್ರಥಮ ಅಥವಾ ದ್ವಿತೀಯ ಬಹುಮಾನದ ಸಮೀಪ ಇದೆ ಎಂದು ತಿಳಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾಣದ ಕೈಗಳು ಒತ್ತಡ ಹೇರಿ ಬಹುಮಾನ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿವರ್ಷ ದಶಮಂಟಪಗಳ ಕಥೆ, ಕಥಾ ಸಾರಾಂಶ, ಬೆಳಕು, ಚಲನವಲನ, ವಿದ್ಯುತ್ ಅಲಂಕೃತ ಬೋರ್ಡ್, ಧ್ವನಿ, ಬೆಳಕಿನ ಹೊಂದಾಣಿಕೆ, ಕಥೆಯನ್ನು ಪ್ರಸ್ತುತ ಪಡಿಸಿದ ರೀತಿ ಹೀಗೆ ವಿವಿಧ ವಿಭಾಗಗಳಿಗೆ ಪ್ರತ್ಯೇಕವಾಗಿ ಅಂಕಗಳನ್ನು ನೀಡಿ ನಂತರ ಅವುಗಳನ್ನು ಒಟ್ಟು ಸೇರಿಸಿ ಬಹುಮಾನಗಳನ್ನು ಘೋಷಿಸುವ ಪರಿಪಾಠವಿತ್ತು. ಆದರೆ ಈ ಬಾರಿ ಎಲ್ಲಾ ನಿಯಮಗಳನ್ನು ಮೀರಿರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಂಟಪ ಸಮಿತಿಗಳು ಮತ್ತು ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳಿಗೆ ದಶಮಂಟಪ ಸಮಿತಿಯ ಅಧ್ಯಕ್ಷರೇ ನೇರ ಹೊಣೆ ಎಂದು ಆರೋಪಿಸಿರುವ ಪ್ರಮುಖರು ತಕ್ಷಣ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದ್ದಾರೆ.