ಮಡಿಕೇರಿ, ಅ. 11: ಹಲವು ವಿಶಿಷ್ಟತೆಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕೊಡವ ಸಮುದಾಯ ವ್ಯಾಪಾರಿ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಯಶಸ್ಸನ್ನು ಕಾಣಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಮಣಿ ಸಲಹೆ ನೀಡಿದ್ದಾರೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಎಂಟರ್‍ಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುನೀಲ್ ಸುಬ್ರಮಣಿ, ಕೊಡವರು ವ್ಯಾಪಾರಿ ಕ್ಷೇತ್ರದಲ್ಲಿ ಆಸಕ್ತಿ ತೋರದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕೊಡವ ಯುವ ಸಮೂಹಕ್ಕೆ ವಿದ್ಯಾರ್ಥಿ ಜೀವನದಿಂದಲೇ ವ್ಯಾಪಾರ ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಐಡಿಯಲ್ ಹೋಂ ಸೊಸೈಟಿಯ ಅಧ್ಯಕ್ಷ ಚೆಪ್ಪುಡಿರ ಎಂ. ತಿಲಕ್ ಸುಬ್ಬಯ್ಯ ಮಾತನಾಡಿ, ಸಹಕಾರ ಸಂಘದ ಕಾರ್ಯವ್ಯಾಪ್ತಿ ಮತ್ತು ಸರಕಾರದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ತೆರಿಗೆ ಇಲಾಖೆಯ (ಆಡಿಟ್) ಹೆಚ್ಚುವರಿ ಆಯುಕ್ತ ಬೈರಾಜಂಡ ಎ. ನಾಣಿಯಪ್ಪ ಮಾತನಾಡಿ, ಉಳಿತಾಯ ಮತ್ತು ಖರ್ಚಿನ ಸಂದರ್ಭ ಉದ್ಯಮಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಮಾತನಾಡಿದರು. ಸಚಿತಾ ಗಂಗಮ್ಮ ಪ್ರಾರ್ಥಿಸಿ, ರತನ್ ಕುಟ್ಟಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಮಿನ್ನಂಡ ರಾಮಪ್ಪ ವಂದಿಸಿದರು.