ಸಿದ್ದಾಪುರ, ಅ. 11: ಸಿದ್ದಾಪುರದ ಇವಾಲ್ ಬ್ಯಾಕ್ ಸಂಸ್ಥೆ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ಸಹಾಯಧನ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಈ ಬಾರಿಯ ಪ್ರವಾಹದಿಂದಾಗಿ ಕರಡಿಗೋಡುವಿನ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿತ್ತು. ಈ ಹಿನ್ನೆಲೆ ಸಂತ್ರಸ್ತ ಕುಟುಂಬಗಳಿಗೆ ಸಿದ್ದಾಪುರದ ಇವಾಲ್ ಬ್ಯಾಕ್ ರೆಸಾರ್ಟ್ ವತಿಯಿಂದ 28 ಮಂದಿ ಸಂತ್ರಸ್ತರಿಗೆ ಸಹಾಯಧನದ ಚೆಕ್ ಅನ್ನು ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಇಮ್ಯಾನುಲ್ ಟಿ. ರಾಮಪುರಂ ಕುಟ್ಟಪ್ಪನ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದಾಗಿ ಕರಡಿಗೋಡಿನ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು. ತಾ.ಪಂ ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಇವಾಲ್ ಬ್ಯಾಕ್ ಸಂಸ್ಥೆಯು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಂಸ್ಥೆಯು ಕರಡಿಗೋಡು ಸರಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದೆ ಎಂದರು. ನೆಲಸಮಗೊಂಡ ಮನೆಗಳಿಗೆ ರೂ. 30 ಸಾವಿರ ಹಾಗೂ ಹಾನಿ ಆಗಿರುವ ಕುಟುಂಬಗಳಿಗೆ ರೂ. 20 ಸಾವಿರ ಚೆಕ್ ಅನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಕಾಂತಿ ಅನೀಶ್ ಹಾಗೂ ಜೆನ್ನಿ ಸುರೇಶ್, ಕೆಸಿಡಿಪಿ ಸದಸ್ಯರುಗಳಾದ ಕುಕ್ಕುನೂರು ಸೂರಜ್, ಪದ್ಮನಾಭ, ಗಣೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಯಮುನಾ, ಎಂ.ಸಿ. ವಾಸು, ಬೈಜು, ಪೊನ್ನು ಇತರರು ಹಾಜರಿದ್ದರು. ಸಿಬ್ಬಂದಿ ಜೆನ್ನಿ ಸ್ವಾಗತಿಸಿ, ಶಿವಕುಮಾರ್ ವಂದಿಸಿದರು.