ಮಡಿಕೇರಿ, ಅ. 11: ಸ್ವಚ್ಛ ಭಾರತ ಅಭಿಯಾನ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಕಾರ್ಯಕ್ರಮದಡಿ, ಶಿಕ್ಷಣ ಇಲಾಖೆ ಮತ್ತು ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕ, ಕೊಡಗು ಜಿಲ್ಲಾ ವಿಜ್ಞಾನ ಪರಿಷತ್ ಹಾಗೂ ಇಕೋ ಕ್ಲಬ್ ಆಶ್ರಯದಲ್ಲಿ ಮೇಕೇರಿ ಗ್ರಾಮದಲ್ಲಿ ‘ಪಟಾಕಿ ಬೇಡ’ ಎಂಬ ಬ್ಯಾನರ್ ಅಡಿಯಲ್ಲಿ ‘ಪರಿಸರ ಸ್ನೇಹಿ’ ಹಸಿರು ದೀಪಾವಳಿ ಆಚರಿಸುವ ಕುರಿತಂತೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
‘ಪರಿಸರ ಸ್ನೇಹಿ’ ಹಸಿರು ದೀಪಾವಳಿ ಆಚರಣೆ ಕುರಿತು ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ ಕುಮಾರ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ತೊಡಗಿಸಿಕೊಳ್ಳಬೇಕು ಎಂದರು.
ಪರಿಸರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯ ಶಿಕ್ಷಕಿ ಎಂ.ಬಿ. ಕುಸುಮಾವತಿ, ಅಂಧತ್ವದ ಅಪಾಯಗಳನ್ನು ತ್ಯಜಿಸಿ ಹಸಿರು ದೀಪಾವಳಿ ಆಚರಿಸಲು ಪಣತೊಡ ಬೇಕಿದೆ ಎಂದರು. ಉಪನ್ಯಾಸಕ ಎಸ್. ನಂದೀಶ್, ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಆರ್‍ಎಫ್‍ಓ ಬಾಬು ರಾಥೋಡ್, ಎಸ್‍ಡಿಎಂಸಿ ಅಧ್ಯಕ್ಷ ರಫೀಕ್ ಖಾನ್, ಎನ್ನೆಸ್ಸೆಸ್ ಅಧಿಕಾರಿ ಬಿ.ಡಿ. ರವೀಶ್, ಉಪನ್ಯಾಸಕ ರಾಜಸುಂದರಂ, ಹೆಬ್ಬಾಲೆ ನಮ್ರತ್, ಶಿಕ್ಷಕರಾದ ಹೆಚ್.ಎ. ಪ್ರಸನ್ನ ಕುಮಾರ್, ಕೆ.ಎಂ. ಸಬಿತಾ, ಸಿ. ಪುಷ್ಪ, ಶ್ರೀಲತಾ, ಅರಣ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.