ಮಡಿಕೇರಿ, ಅ. 10: ಸರಕಾರಿ ಅಧಿಕಾರಿಗಳು - ನೌಕರರ ವಿರುದ್ಧವಾಗಿ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ಆಯಾ ದೂರಿನಲ್ಲಿ ಸ್ಪಷ್ಟತೆ ಇದ್ದಲ್ಲಿ ಮಾತ್ರ ಅದನ್ನು ತನಿಖೆಗೆ ಅಥವಾ ವಿಚಾರಣೆಗೆ ಪರಿಗಣಿಸುವಂತೆ ಸರಕಾರ ಆದೇಶ ಜಾರಿಗೊಳಿಸಿದೆ.ಸರಕಾರಿ ಅಧಿಕಾರಿ, ನೌಕರರ ವಿರುದ್ಧದ ಅನಾಮಧೇಯ ದೂರುಗಳ ಕುರಿತಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು. ಇದನ್ನು ಪರಿಗಣಿಸಿ ಕೇಂದ್ರ ಸರಕಾರದ ಮಾದರಿಯಂತೆಯೇ ರಾಜ್ಯದಲ್ಲಿ ಸರಕಾರಿ ನೌಕರರ ವಿರುದ್ಧ ಅನಾಮಧೇಯ ದೂರು - ಪತ್ರಗಳ ಆಧಾರದ ಮೇಲೆ ತನಿಖೆಗೆ ಒಳಪಡಿಸದೆ. ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ದೂರುಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿತ ಸುತ್ತೋಲೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿರುತ್ತದೆ. ಅಲ್ಲದೇ ದೂರುಗಳಿಗೆ ಪೂರಕವಾದ ಮಾಹಿತಿ, ದಾಖಲೆಗಳನ್ನು ಸಾಮಾನ್ಯವಾಗಿ ಲಭ್ಯಪಡಿಸಿರುವದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವದಲ್ಲದೇ ದಕ್ಷ ಹಾಗೂ ಪ್ರಾಮಾಣಿಕ ನೌಕರರ ವಿಶ್ವಾಸರ್ಹತೆಗೆ ಧಕ್ಕೆ ಉಂಟಾಗುತ್ತದೆ ಹಾಗೂ ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಮುಖ್ಯಮಂತ್ರಿಯವರು ತಾ. 4.8.2019ರ ಟಿಪ್ಪಣಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಸಂಬಂಧ ನೀಡಿರುವ ಮನವಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರದ ಮಾದರಿಯಂತೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು, ಪತ್ರಗಳ ಆಧಾರದ ಮೇಲೆ ತನಿಖೆಗೆ ಒಳಪಡಿಸದೆ, ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ ಹೊರಡಿಸುವಂತೆ ಸೂಚಿಸಿರುತ್ತಾರೆ.
ಈ ಅಂಶಗಳ ಹಾಗೂ ಭಾರತ ಸರ್ಕಾರದ ಉಲ್ಲೇಖ -2ರ ಅಧಿಕೃತ ಜ್ಞಾಪನದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ಅರ್ಜಿಗಳ ಆಧಾರದ ಮೇಲೆ ಪ್ರಕರಣವನ್ನು ತನಿಖೆಗೆ, ವಿಚಾರಣೆಗೆ ಒಳಪಡಿಸದೇ ಅಂತಹ ದೂರು ಅರ್ಜಿಗಳನ್ನು ಕಡಿತಗೊಳಿಸಬೇಕೆಂದು ಸೂಚಿಸಿದೆ.
ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ, ವಿಚಾರಣೆಗೆ ಪರಿಗಣಿಸಲು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಅಂಶವನ್ನು ಸಂಬಂಧಪಟ್ಟ ಇಲಾಖೆಗಳು ತಮ್ಮ ಅಧೀನ ಕಚೇರಿಗಳಿಗೆ ತಿಳಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತ.ಮ. ವಿಜಯ ಭಾಸ್ಕರ್ ಅವರು ತಾ. 3 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.