ಸೋಮವಾರಪೇಟೆ,ಅ.10: ಸಾಧಾರಣವಾಗಿ ನವೆಂಬರ್ ಅಂತ್ಯ ಹಾಗೂ ಡಿಸೆಂಬರ್‍ನಲ್ಲಿ ಕೊಯ್ಲಿಗೆ ಬರಬೇಕಾದ ಅರೇಬಿಕಾ ಕಾಫಿ ಪ್ರಸಕ್ತ ವರ್ಷ ಅಕ್ಟೋಬರ್‍ನಲ್ಲೇ ಹಣ್ಣಾಗುತ್ತಿದ್ದು, ಆಗಾಗ್ಗೆ ಸುರಿಯುವ ಮಳೆಯಿಂದ ಬೆಳೆಗಾರರು ಫಸಲು ನಷ್ಟದ ಭೀತಿ ಎದುರಿಸುವಂತಾಗಿದೆ. ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿ, ನಂತರ ಎರಡು ವಾರಗಳ ಕಾಲ ಸುರಿದ ಧಾರಾಕಾರ ಮಳೆ ತದನಂತರದ ಬಿಸಿಲಿನಿಂದಾಗಿ ಆಗಸ್ಟ್ ತಿಂಗಳಲ್ಲೇ ಕೆಲ ಗಿಡಗಳಲ್ಲಿ ಕಾಫಿ ಕಾಯಿಗಳು ಹಣ್ಣಾಗಿದ್ದವು.
ಭಾರೀ ಮಳೆಯ ಕಾರಣ ಇಂತಹ ಕಾಫಿ ಹಣ್ಣನ್ನು ಕೊಯ್ಲು ಮಾಡಲಾಗದೆ, ಹಣ್ಣು ಉದುರಿ ನಷ್ಟವಾಗಿತ್ತು. ಇದೀಗ ಅಕ್ಟೋಬರ್ ಎರಡನೇ ವಾರದಲ್ಲೇ ಶೇ.50ರಷ್ಟು ಕಾಫಿ ಹಣ್ಣಾಗಿದ್ದು, ಬೆಳೆಗಾರರು ಫಸಲು ನಷ್ಟದ ಆತಂಕದಲ್ಲಿದ್ದಾರೆ.ಇದರೊಂದಿಗೆ ಆಗಾಗ್ಗೆ ಮಳೆ ಹಾಗೂ ಮೋಡದ ವಾತಾವರಣವಿರುವ ದರಿಂದ ಹಣ್ಣು ಕಾಫಿಯನ್ನು ಕೊಯ್ಲು ಮಾಡಿ, ಒಣಗಿಸಲು ಸಾಧ್ಯವಾಗುತ್ತಿಲ್ಲ. ಪಲ್ಪರ್ ಮಾಡಿದ ಕಾಫಿಯನ್ನು ಒಣಗಿಸದೇ ಇದ್ದರೆ ಕಾಫಿ ಬೀಜ ಕಪ್ಪು ಬಣ್ಣಕ್ಕೆ ತಿರುಗಿ ಬೇಡಿಕೆ ಕಳೆದುಕೊಳ್ಳುತ್ತದೆ ಎಂದು ಬೆಳೆಗಾರರು ಅಳಲುತೋಡಿಕೊಳ್ಳುತ್ತಿದ್ದಾರೆ. ಗಿಡದಲ್ಲಿರುವ ಕಾಫಿಯನ್ನು ಕೊಯ್ಲು ಮಾಡಿದರೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಹಣ್ಣು ಕಾಫಿಯನ್ನು ಹಾಗೇ ಬಿಟ್ಟರೆ ಉದುರಿ ಮಣ್ಣು ಸೇರುತ್ತದೆ. ವಾತಾವರಣದ ಏರುಪೇರಿನಿಂದ ನಿರೀಕ್ಷಿತ ಕಾಫಿಯೂ ಇಲ್ಲ. ಕಾಫಿ ಬೇಳೆಯ ಬೆಳವಣಿಗೆಯಲ್ಲೂ ಕುಂಠಿತ ಕಾಣುತ್ತಿದೆ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.ನಿರಂತರ ಒಂದು ವಾರಗಳ ಕಾಲ ಬಿಸಿಲಿನ ವಾತಾವರಣ ಇದ್ದರೆ ಮಾತ್ರ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಿ ಒಣಗಿಸುವ ಮೂಲಕ ಗುಣಮಟ್ಟ ಕಾಯ್ದುಕೊಂಡು, ಮಾರಾಟ ಮಾಡಬಹುದು. ಮೋಡದ ವಾತಾವರಣವಿದ್ದರೆ, ಅರೇಬಿಕಾ ಪಾರ್ಚ್‍ಮೆಂಟ್ ಗುಣಮಟ್ಟ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಂತರ ಕಾಫಿ ಬೇಳೆಯನ್ನು ಯಾರೂ ಖರೀದಿ ಮಾಡುವದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಣಗಾಡಬೇಕಾಗಿದೆ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.
ಕಳೆದ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿದು, ಭೂಮಿಯಲ್ಲಿ ಶೀತ ಹೆಚ್ಚಾಗಿ ಡಿಸೆಂಬರ್, ಜನವರಿ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬಿದ್ದ ಅಕಾಲಿಕ ಮಳೆ ಹಾಗು ಸುರಿದ ಮಂಜಿನಿಂದ ಕೆಲ ತೋಟಗಳಲ್ಲಿ ಕಾಫಿ ಹೂ ಅರಳಿದ ಪರಿಣಾಮ ಅಕಾಲಿಕವಾಗಿ ಕಾಫಿ ಹಣ್ಣಾಗುತ್ತಿದೆ. ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಲೇಬೇಕಿದೆ.
ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬ್ಲಾಸಂ ಆದ ಕಾರಣ ಕಾಫಿ ಹಣ್ಣಾಗಿದೆ. ಹಣ್ಣಾಗಿರುವ ಕಾಫಿಯನ್ನು ಮೊದಲ ಕೊಯ್ಲು ಮಾಡಬಹುದು. ನವೆಂಬರ್‍ನಲ್ಲಿ ಎರಡನೇ ಹಾಗು ಡಿಸೆಂಬರ್‍ನಲ್ಲಿ ಮೂರನೆ ಕೊಯ್ಲು ಮಾಡಿಕೊಳ್ಳಬಹುದು. ಗಿಡದಲ್ಲಿ ಹಣ್ಣನ್ನು ಬಿಟ್ಟರೇ ಫಸಲು ನಷ್ಟವಾಗಲಿದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ತಿಳಿಸಿದ್ದಾರೆ.