ಕೂಡಿಗೆ, ಅ. 7: ನಿನ್ನೆದಿನ ಇಲ್ಲಿನ ಹಳೆ ಕೂಡಿಗೆಯಲ್ಲಿ ನಡೆದಿದ್ದ ಶಿವು ಎಂಬವರ ಹತ್ಯೆಗೆ ಹಣಕಾಸಿನ ವಿಚಾರವೇ ಕಾರಣ ಎಂಬದು ಬಯಲಾಗಿದೆ.
ಹಣಕಾಸಿನ ವಿಚಾರಕ್ಕೆ ಅತ್ತಿಗೆ ಮೈದುನನ ನಡುವೆ ಜಗಳವಾಗಿ ಜಗಳ ಅತಿಯಾಗಿ ತಾಯಿ ಮಗಳು ಸೇರಿ ಮೈದುನನಿಗೆ ದೀಪದ ಕಂಬ ಹಾಗೂ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೈದು ಇದೀಗ ಜೈಲು ಪಾಲಾಗಿದ್ದಾರೆ.ಮೃತ ವ್ಯಕ್ತಿ ಅವಿವಾಹಿತ ಶಿವು ಕೂಡ್ಲೂರು ಕೈಗಾರಿಕಾ ಬಡಾವಣೆಯ ಕಾಫಿ ಘಟಕವೊಂದರಲ್ಲಿ ಕಾರ್ಮಿಕನಾಗಿದ್ದ.ಶಿವುವಿನ ತಾಯಿ ತೀರಿಹೋದ ನಂತರ ದೊಡ್ಡಮ್ಮ ಶಿವುನನ್ನು ಸಾಕುತಿದ್ದರು. ಶಿವುನ ದೊಡ್ಡಮ್ಮ ಲಕ್ಷ್ಮಮ್ಮ, ಅತ್ತಿಗೆ ಯಶೋಧ, ಅವಳ ಮಗಳು ಹರಿಣಿ ಮತ್ತು ಶಿವು ಒಂದೆ ಮನೆಯಲ್ಲಿಯೇ ವಾಸವಿದ್ದರು. ಶಿವು ಮತ್ತು ಆತನ ದೊಡ್ಡಮ್ಮ ಸೇರಿ ಹಳೆ ಕೂಡಿಗೆಯಲ್ಲಿ ಮನೆ ಯೊಂದನ್ನು ಭೋಗ್ಯಕ್ಕೆ ಹಾಕಿಸಿ ಕೊಂಡಿದ್ದರು. ಇದೀಗ ಭೋಗ್ಯದ ಅವಧಿ ಮುಗಿಯುತಿದ್ದು, ಭೋಗ್ಯಕ್ಕೆ ಕೊಟ್ಟಿದ್ದ ಹಣದಲ್ಲಿ ಮನೆಯ ಮಾಲೀಕರು ಹಣವನ್ನು ವಾಪಾಸ್ಸು ನೀಡಿದಾಗ ತನಗೂ 1 ಲಕ್ಷ ರೂ. ಕೊಡಿ ಎಂದು ಮನೆಯ ಸದಸ್ಯರೊಂದಿಗೆ ಶಿವು ಹೇಳಿದ್ದಾನೆ. ಈ ವಿಷಯಕ್ಕೆ ಗಲಾಟೆಯಾಗಿದೆ. ಭಾನುವಾರ ಶಿವುನ ದೊಡ್ಡಮ್ಮ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಶಿವು ಮತ್ತು ಯಶೋಧ ಮಧ್ಯೆ ಈ ವಿಷಯಕ್ಕೆ ಜಗಳವೇರ್ಪಟ್ಟು ಶಿವುಗೆ ಹಣವನ್ನು ನೀಡಬೇಕೆಂಬ ಕಾರಣದಿಂದ ಯಶೋಧ ಹಾಗೂ ಹರಿಣಿ ಸೇರಿ ಶಿವುವಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಮಂಚದ ಕೆಳಗೆ ಹಾಕಿದ್ದರು ಎಂದು ತಿಳಿದುಬಂದಿದೆ.
ಜಗಳದ ಸಂದರ್ಭ ಶಿವುನ ಕೂಗಾಟ ಕೇಳಿದ ಅಕ್ಕ ಪಕ್ಕದ ಮನೆಯ ಸಾರ್ವಜನಿಕರು ಬಂದು ನೋಡಿದಾಗ ಶಿವು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿ ದ್ದಾರೆ. ಸ್ಥಳಕ್ಕೆ ಬಂದ ಕುಶಾಲನಗರ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಯಶೋಧ ಮತ್ತು ಹರಿಣಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಶಿವುನ ಮೃತ ದೇಹವನ್ನು ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. -ಕೆ.ಕೆ.ಎನ್.