ಮಡಿಕೇರಿ, ಅ. 7: ರಾಷ್ಟ್ರದ ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹತ್ತು ಹಲವು ಯೋಜನೆ ಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ‘ಗ್ರಾಹಕರಿಗೆ ಆರ್ಥಿಕ ಅರಿವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಮಂತ್ರಿ ಅವರು ಜನ್‍ಧನ್ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ.
ಪ್ರತಿಯೊಬ್ಬರೂ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದಾಗಿದೆ ಎಂದು ಶಾಸಕರು ನುಡಿದರು.
ಮುದ್ರಾ ಯೋಜನೆಯು 4 ಕೋಟಿಗಿಂತ ಹೆಚ್ಚು ಸಾಲ ಜಿಲ್ಲಾ ಕೇಂದ್ರ ಬ್ಯಾಂಕ್‍ಗೆ ನೀಡಿರುವದು ಶ್ಲಾಘನೀಯವಾಗಿದೆ. ಬ್ಯಾಂಕ್‍ಗಳಿಂದ ಸಾಲ ಪಡೆದವರು ಮುರು ಪಾವತಿಯನ್ನು ಸರಿಯಾಗಿ ಮಾಡಬೇಕು ಎಂದು ಹೇಳಿದರು.
ಕೊಡಗು ಜಿಲ್ಲೆ ಕೃಷಿ ಆಧಾರಿತವಾಗಿದ್ದು, ಕೃಷಿಗೆ ಬೇಕಾದ ಸಾಲವನ್ನು ಬ್ಯಾಂಕ್‍ಗಳು ನೀಡುತ್ತಿವೆ. ಅದರ ಸೌಲಭ್ಯ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಲೀಡ್ ಬ್ಯಾಂಕ್ ಮೂಲಕ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಗ್ರಾಹಕರು ಇದರ ಉಪಯೋಗವನ್ನು ಪಡೆಯುವಂತಾಗಬೇಕೆಂದು ಹೇಳಿದರು.
ಬ್ಯಾಂಕ್ ಅಧಿಕಾರಿಗಳು ಜನ ರೊಂದಿಗೆ ಸೌಜನ್ಯದಿಂದ ವರ್ತಿಸ ಬೇಕು. ಸ್ವಾಭಿಮಾನಿ, ಸ್ವಾವಲಂಬನೆ ಜೀವನ ನಡೆಸಲು ಪ್ರತಿಯೊಬ್ಬರೂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬ್ಯಾಂಕ್‍ಗಳು ಜಿಲಾಡಳಿತದೊಂದಿಗೆ ಸಹಕರಿಸಿವೆ ಎಂದರು.
ಬ್ಯಾಂಕ್‍ಗಳು ಜಾಗೃತಿ ಮೂಡಿಸು ವಾಗ ಶಾಲಾ ಕಾಲೇಜುಗಳಿಗೂ ಹೆಚ್ಚು ಗಮನವರಿಸಬೇಕು. ಮಕ್ಕಳಿಗೆ ಬ್ಯಾಂಕ್‍ಗಳ ವ್ಯವಹಾರದ ಕುರಿತು ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಬ್ಯಾಂಕ್‍ಗಳು ಸರ್ಕಾರದ ಯೋಜನೆ ಕುರಿತು ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕಾಗಿದೆ. ಎಲ್ಲರಿಗೂ ಸೌಲಭ್ಯ ಒದಗಿಸುವ ಕಾರ್ಯ ಮುಂದುವರೆಯಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ರೈತರಿಗೆ ಬೇಕಾದ ಸಾಲ ಸೌಲಭ್ಯಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ನೀಡಲಾಗುತ್ತದೆ. ಶಿಕ್ಷಣ, ಕೃಷಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 2 ಲಕ್ಷದಷ್ಟು ಜನ ರೈತರಿದ್ದಾರೆ, ರೈತರ ಸಾಲ ನೀಡುವ ಕಾರ್ಯ ನಡೆಯಬೇಕಾಗಿದೆ ಎಂದು ಅವರು ಹೇಳಿದರು. ಜನರು ಸಾಲ ಪಡೆಯುವ ಜೊತೆಗೆ ಸಾಲವನ್ನು ಮರು ಪಾವತಿ ಮಾಡಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ, ವಿವಿಧ ಬ್ಯಾಂಕುಗಳ ಮುಖ್ಯಸ್ಥರಾದ ಮೀನಾಕ್ಷಿ ಸುಂದರ್, ಪಿ.ಸಿ. ಮಂಜುನಾಥ್, ದಾಮೋದರ್ ಭಟ್, ಶ್ರೀನೀವಾಸ್‍ಮೂರ್ತಿ, ವಿ.ಜಿ. ಅರುಣ, ಪಾಂಡುರಂಗ, ಮತ್ತಿತ್ತರು ಪಾಲ್ಗೊಂಡಿದ್ದರು.
ಕ್ಲೋಸ್‍ಬರ್ನ್ ಶಾಲೆಗೆ ಶಿಕ್ಷಣ ಸಚಿವರ ಭೇಟಿ
ಮಡಿಕೇರಿ ಅ. 7: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕತ್ತಲೆಕಾಡು ಬಳಿಯ ಕ್ಲೋಸ್‍ಬರ್ನ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಶಾಲಾ ಆವರಣ ಹಾಗೂ ವಿಶಾಲವಾದ ಜಾಗ ಇರುವದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆ, ಕ್ರೀಡೆ, ಸಾಂಸ್ಕøತಿಕ ಹೀಗೆ ಹಲವು ಚಟುವಟಿಕೆಗಳ ವೀಡಿಯೋ ವೀಕ್ಷಣೆ ಮಾಡಿದರು.
ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪತ್ರಕರ್ತ ಕಿಶೋರ್ ರೈ ಕಳೆದ ಒಂದು ವರ್ಷದಿಂದ ಕ್ಲೋಸ್‍ಬರ್ನ್ ಶಾಲೆಯ ಹಳೇ ಕಟ್ಟಡದ ಕಾಂಕ್ರೀಟ್ ಉದುರುತ್ತಿತ್ತು, ಆದರೆ ಹಲವು ಬಾರಿ ಗಮನ ಸೆಳೆಯಲಾಗಿತ್ತು, ಸಾಮಾಜಿಕ ಜಾಲತಾಣದಲ್ಲಿ ಸಚಿವರ ಗಮನಕ್ಕೆ ತಂದಾಗ ಸ್ಪಂದಿಸುವದರ ಜೊತೆಗೆ ಶಾಲೆಗೆ ಆಗಮಿಸಿರುವದು ತುಂಬಾ ಸಂತಸ ತಂದಿದೆ ಎಂದು ಅವರು ಹೇಳಿದರು. ಶಾಲೆಗೆ ತಡೆಗೋಡೆ ನಿರ್ಮಾಣ ಹಾಗೂ ಸಭಾಂಗಣ ನಿರ್ಮಾಣ ಮಾಡಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಸರ್ಕಾರದಿಂದ ಶಾಲೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವದು ಎಂದು ಸಚಿವರು ಅವರು ಭರವಸೆ ನೀಡಿದರು. ಸಮಾಜಕ್ಕೆ ನಿಜವಾದ ಶಕ್ತಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂದರೆ ತಪ್ಪಾಗಲಾರದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಾಜಕ್ಕೆ ನಿಜವಾದ ಆಸ್ತಿಯಾಗಿದ್ದಾರೆ ಎಂದು ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು ರಜೆಯಲ್ಲಿ ಕತೆಗಳು, ಪುಸ್ತಕಗಳನ್ನು ಓದಬೇಕು. ಯೋಗಾಸನ ಮಾಡಬೇಕು ಎಂದು ಅವರು ಸಲಹೆ ಮಾಡಿದರು. ಪೋಷಕರ ಜೊತೆ ಕೃಷಿ ಹಾಗೂ ಮನೆ ಕೆಲಸದಲ್ಲೂ ಸಹ ಸಹಕರಿಸಬೇಕು ಎಂದು ಹೇಳಿದರು. ಮನೆಯಲ್ಲಿ ಮಮ್ಮಿ ಎಂದು ಎಷ್ಟು ವಿದ್ಯಾರ್ಥಿಗಳು ಕರೆಯುತ್ತೀರ? ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಹಲವು ವಿದ್ಯಾರ್ಥಿಗಳು ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈಜಿಪ್ಟ್‍ನ ಪಿರಮಿಡ್ಡುಗಳನ್ನು ಮಮ್ಮಿ ಎಂದು ಕರೆಯುತ್ತಾರೆ. ಆದ್ದರಿಂದ ಬಾಯಿ ತುಂಬಾ ಅಮ್ಮ ಅಥವಾ ಅವ್ವ ಎಂದು ಕರೆಯಬೇಕು ಎಂದು ಮಾರ್ಮಿಕವಾಗಿ ಸಲಹೆ ಮಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಉತ್ತಮ ಕಾರ್ಯಗಳನ್ನು ಬೆಳಕಿಗೆ ತರುವುದು ಕಡಿಮೆ. ಆ ನಿಟ್ಟಿನಲ್ಲಿ ತಮ್ಮ ಊರಿನ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿ ಗಮನ ಸೆಳೆದಿದ್ದರು. ಅದಕ್ಕೆ ತಕ್ಷಣವೇ ಸ್ಪಂದಿಸಿ ಶಾಲಾಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಸಚಿವರು, ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಒಂದು ಪುಸ್ತಕ ತರಲು ಉದ್ದೇಶಿಸಿದ್ದೇನೆ ಎಂದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ತಾ.ಪಂ. ಸದಸ್ಯ ಅಪ್ರು ರವೀಂದ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ, ಗ್ರಾ.ಪಂ. ಸದಸ್ಯರಾದ ಪುಷ್ಪಾವತಿ ಮತ್ತು ರಮೇಶ್ ರೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಇತರರು ಇದ್ದರು.
ಬಳಿಕ ಕಡಗದಾಳು ಸರ್ಕಾರಿ ಶಾಲೆಗೆ ಭೇಟಿ ನೀಡಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡವನ್ನು ಪರಿಶೀಲಿಸಿದರು.
ರಾಷ್ಟ್ರಪಿತ-ಲಾಲ್ ಬಹುದ್ದೂರ್ ಶಾಸ್ತ್ರಿ ಸ್ಮರಣೆ
ಸೋಮವಾರಪೇಟೆ: ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಶ್ರಮದಾನದ ಮೂಲಕ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ರಾಷ್ಟ್ರೀಯ ಹಸಿರು ಪಡೆ ಯೋಜನೆಯಡಿ ಶಾಲೆಯ ಇಕೋ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗ್ರಾಮಸ್ಥರ ಜತೆಗೂಡಿ ಶ್ರಮದಾನದ ಮೂಲಕ ಶಾಲೆಯ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಸೂರ್ಲಬ್ಬಿ ನಾಡಿನÀ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಗರ್ವಾಲೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪಳಂಗಪ್ಪ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಕೆ.ವೆಂಕಟೇಶ್ ನಾಯ್ಕ್, ನಿವೃತ್ತ ಯೋಧ ತಂಬುಕುತ್ತೀರ ಗಪ್ಪು ಸೋಮಯ್ಯ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರವಿ, ಸದಸ್ಯೆ ಪ್ರೀತು, ಮುಖ್ಯ ಶಿಕ್ಷಕಿ ಸುಂದರಿ, ಪ್ರೌಢಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷ ಚಿ.ನಾ. ಯೋಗಾತ್ಮ, ನಿವೃತ್ತ ಯೋಧ ಅಡ್ಡಂಡ ಚೀಯಣ್ಣ, ನಾಪಂಡ ದೇವಯ್ಯ, ಓಡಿಯಂಡ ಅಶೋಕ್, ಮುದ್ದಂಡ ರಾಣಿ, ಶಿಕ್ಷಕರಾದ ಎಂ.ಟಿ. ಪೂವಯ್ಯ, ಮಂಜುನಾಥ್, ರವೀಂದ್ರ ಅಂಟರದಾನಿ, ಅಮೀನ, ಅಂಗನವಾಡಿ ಕಾರ್ಯಕರ್ತೆ ಕಾವೇರಮ್ಮ, ಅರುಣ, ಬೋಪಣ್ಣ ಸೇರಿದಂತೆ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಶಾಲೆಯಲ್ಲಿ ನಡೆದ ಪ್ರೌಢಶಾಲಾ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಗ್ರಾಮದ ಮುಖಂಡರಾದ ಮುದ್ದಂಡ ತಿಮ್ಮಯ್ಯ ಮತ್ತು ಮುದ್ದಂಡ ನಾಣಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರಿಕೆ: ಇಲ್ಲಿನ ಗ್ರಾಮ ಪಂಚಾಯತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಂಚಾಯತಿ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಚೆತ್ತುಕಾಯ ಬರೂಕ ಜಲವಿದ್ಯುತ್ ಉತ್ಪಾದನಾ ಘಟಕದ ಬಳಿಯಿಂದ ಸ.ಹಿ.ಪ್ರಾ. ಶಾಲೆ ಕರಿಕೆ ಕಾಲೋನಿವರೆಗೆ ಮತ್ತು ಗಡಿ ಭಾಗವಾದ ಚೆಂಬೇರಿಯಿಂದ ಎಳ್ಳುಕೊಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. 150ನೇ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನ ಹಾಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಕಾರ್ಯ ಕ್ರಮದಲ್ಲಿ ಗ್ರಾಮ ಪಂಚಾಯತಿ ಅಧÀ್ಯಕ್ಷ ಎನ್. ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಬಿಪಿನ್ ಕೆ.ಜೆ., ಪಂಚಾಯಿತಿ ಸದಸ್ಯರುಗಳಾದ ಬಿ.ಕೆ. ಪುರುಷೋತ್ತಮ, ಕೆ.ಸಿ. ಬಾಲಕೃಷ್ಣ, ಜಯಂತಿ, ರಾಜೇಶ್ವರಿ, ಪಂಚಾಯತಿ ಸಿಬ್ಬಂದಿ ವರ್ಗ, ಶಾಲ ಶಿಕ್ಷಕರು, ವಿದ್ಯಾರ್ಥಿಗಳು, ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆ ಯ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕೃಷಿ ಪತ್ತಿನ ಸಹಕಾರ ಸಂಘದ ಅಧÀ್ಯಕ್ಷ ಬೇಕಲ್ ಶರಣ್ ಕುಮಾರ್, ಉಪಾಧ್ಯಕ್ಷೆ ಮೀನಾಕ್ಷಿ ಬಲರಾಮ್, ನಿರ್ದೇಶಕರುಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ರೆಲ್ಸನ್, ಬರೂಕ ಪವರ್ ಕಾರ್ಪೊರೇಷನ್ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ 150ನೇ ವರ್ಷದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ದಿವಂಗತ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಮನೆಯಿಂದ ಕಾಲೇಜಿನವರೆಗೆ ಮ್ಯಾರಥಾನ್ ಓಟವನ್ನು ಆಯೋಜಿಸಿದ್ದರು. ದಿ. ಮಂಜುನಾಥಯ್ಯ ಅವರ ಮನೆಯು ಐತಿಹಾಸಿಕ ಸ್ಥಳವಾಗಿದ್ದು, 1934 ರಲ್ಲಿ ಮಹಾತ್ಮ ಗಾಂಧಿ ಅವರು ಈ ಮನೆಯಲ್ಲಿ ಒಂದು ದಿನ ತಂಗಿದ್ದರು. ಇದಕ್ಕಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಭಾಗದಲ್ಲಿ ಶ್ರಮದಾನ ನಡೆಸಿದರು.
ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ, ಸ್ವಚ್ಛತಾ ಜಾಥಾ ಮತ್ತು ಗ್ರಾಮ ಪಂಚಾಯಿತಿ, ಕಾಲೇಜು ಆವರಣ, ರಸ್ತೆ ಬದಿಯಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಶನಿವಾರಸಂತೆ: ಶನಿವಾರಸಂತೆ ಎಸ್.ಕೆ.ಎಸ್.ಎಸ್.ಎಫ್. ಶಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಬೃಹತ್ ಸ್ವಚ್ಛತಾ ಕಾರ್ಯಕ್ರಮದಡಿ ಹಲವಾರು ಕಡೆ ಗಿಡಗಂಟಿ ಹಾಗೂ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಈ ತಂಡವು ಶನಿವಾರಸಂತೆ ಪೊಲೀಸ್ ಠಾಣೆ, ಜಿ.ಎಂ.ಪಿ. ಶಾಲೆ, ಬದ್ರಿಯಾ ಮಸೀದಿ, ಮದರಸ ಪರಿಸರ, ಗುಡುಗಳಲೆ-ಗೋಪಾಲಪುರ ಹೆದ್ದಾರಿ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಶ್ರಮದಾನ ನಡೆಸಿದರು. ಶ್ರಮದಾನದಲ್ಲಿ ತಾಜುದ್ದೀನ್, ಶರೀಫ್, ಅಬ್ದುಲ್ ರಜಾಕ್ ಫೈಸಿ, ಶಮೀರ್ ಫೈಸಿ, ಸಿ. ಶಂಷುದ್ದೀನ್, ಅಬ್ದುಲ್ ಅಜೀಜ್, ಜುಬೈರ್ ಪಾಲ್ಗೊಂಡಿದ್ದರು.ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಪ್ರಾಭಾರ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗಾಂಧೀಜಿಯವರ ಆದರ್ಶಗಳು ಆಧುನಿಕ ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಆರೋಗ್ಯಯುತ ಮತ್ತು ಸುಸಂಸ್ಕøತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಗಾಂಧೀಜಿಯವರ ಸ್ವಚ್ಛತೆಯ ಶಿಕ್ಷಣದ ಶತಮಾನೋತ್ಸವ ವಿಷಯವನ್ನಾಧರಿಸಿ ಶಾಲೆಯ ಕೆಡೆಟ್ ನಿತಿನ್ ರಂಜನ್ ಕಿರು ಭಾಷಣ ಮಾಡಿದರು. ಶಾಲೆಯ ವಿದ್ಯಾರ್ಥಿ ಕೆಡೆಟ್ ಮನೋಜ್ ಗಾಂಧೀಜಿಯವರ ಚಿಂತನೆಗಳ ಕುರಿತು ದೃಶ್ಯಾವಳಿಯನ್ನು ಪ್ರದರ್ಶಿಸುವದರ ಮೂಲಕ ಭಾಷಣ ಮಾಡಿದರು. ಶಿಕ್ಷಕಿ ಪಿ. ಪಾರ್ವತಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಿದರು. ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಜೀವನಾಧಾರಿತ ದೃಶ್ಯಾವಳಿಯನ್ನು ಪ್ರದರ್ಶಿಸಲಾಯಿತು.
ನಂತರ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಶಾಲೆಯ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು. ಶಾಲೆಯ ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಆರ್.ಕೆ. ಡೇ, ಹಿರಿಯ ಶಿಕ್ಷಕರಾದ ಎಸ್. ಸೂರ್ಯನಾರಾಯಣ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕೆಡೆಟ್ ಅಪೂರ್ವ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
ಅಮ್ಮತ್ತಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಅಮ್ಮತ್ತಿ ಪಟ್ಟಣ ಮತ್ತು ನಾಲ್ಕು ಮುಖ್ಯ ರಸ್ತೆಗಳ ಬದಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುದ್ಧಗೊಳಿಸಲಾಯಿತು. ಆನಂದಪುರ ಟಾಟಾ ಕಾಫಿ ಸಂಸ್ಥೆಯವರು ತಮ್ಮ ಟ್ರ್ಯಾಕ್ಟರ್ ಮತ್ತು ಸಿಬ್ಬಂದಿಗಳೊಂದಿಗೆ ಶ್ರಮದಾನ ನಡೆಸಿದರು.
ಅಮ್ಮತ್ತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ರಸ್ತೆ ಬದಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುದ್ಧಗೊಳಿಸಲಾಯಿತು. ಇಂಜಿಲಗೆರೆ ಪಟ್ಟಣವನ್ನು ಸಹ ಶುಚಿಗೊಳಸಲಾಯಿತು. ಕಾರ್ಯಕ್ರಮದಲ್ಲಿ ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧಕ್ಷೆ ಶಾಂತ ಪಿ.ಎಸ್., ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯ ಮಾಚಿಮಂಡ ಸುರೇಶ್, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾಚಡಿಚಂಡ ಗಣಪತಿ, ಆನಂದಪುರ ಟಾಟಾ ಕಾಫಿ ಸಂಸ್ಥೆಯ ಮೇನೇಜರ್ ವಿನಯ್, ಅಮ್ಮತ್ತಿ ಗ್ರಾಮ ಪಂಚಾಯಿತಿ ಪಿಡಿಓ ಮೇದಪ್ಪ ಎಂ.ಎಸ್., ಕಾರ್ಯದರ್ಶಿ ನಿತೀನ್ ಬಿ.ಎಸ್., ಕಾರ್ಮಾಡು ಗ್ರಾಮ ಪಂಚಾಯಿತಿ ಪಿ.ಡಿ.ಓ. ತಿಮ್ಮಯ್ಯ ಹಾಜರಿದ್ದರು.
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರಿಗೆ ಗಾಂಧಿ ಜಯಂತಿಯ ಅಂಗವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿ ವಿಷಯವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೇಮಲೀಲಾ ಮಾತನಾಡಿದರು.
ಉಪಾಧ್ಯಕ್ಷ ಗಿರೀಶ್‍ಕುಮಾರ್ ದಿನದ ಮಹತ್ವ, ಶ್ರಮದಾನ ಮತ್ತು ಸ್ವಚ್ಛತಾ ಆಂದೋಲನದ ಬಗ್ಗೆ ಹಾಗೂ ಗ್ರಾಮೀಣ ನೈರ್ಮಲ್ಯದ ಕುರಿತು ಮಾತನಾಡಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ, ಕೃಷ್ಣ, ಕಾರ್ಯದರ್ಶಿ ಶಿಲ್ಪ, ಕಂದಾಯ ವಸೂಲಿಗಾರ ಅನೀಲ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮೇಕೇರಿ: ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಗ್ರೀನ್ ಸಿಟಿ, ರೋಟರಿ ಕ್ಲಬ್ ಮತ್ತು ಎನ್‍ಎಸ್‍ಎಸ್ ಶಿಬಿರದ ಸಹಯೋಗದಲ್ಲಿ 150ನೇ ಮಹಾತ್ಮ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸ್ವಚ್ಛತೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿ ಶ್ರಮದಾನ ಮಾಡಲಾಯಿತು. ಬಟ್ಟೆ ಬ್ಯಾಗ್ ವಿತರಣೆ ಹಾಗೂ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರೀಯಾ, ತಾ.ಪಂ. ಇಒ ಲಕ್ಷ್ಮೀ, ಸ್ವಚ್ಛ ಭಾರತ್ ಮಿಷನ್ ಸಮಾಲೋಚಕ ವಾಸುದೇವು, ಶಿಕ್ಷಕರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಸೋಮವಾರಪೇಟೆ: ಇಲ್ಲಿನ ಲಯನ್ಸ್ ಸಂಸ್ಥೆ ಹಾಗೂ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ 150ನೇ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ವೃತ್ತದಲ್ಲಿನ ಪ್ರತಿಮೆಗೆ ಲಯನ್ಸ್ ಅಧ್ಯಕ್ಷ ಹರೀಶ್ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದ ಪ್ರಯುಕ್ತ ಪೌರ ಕಾರ್ಮಿಕರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೆ ಬೇಲೂರು ನಿರ್ವಾಣಿಶೆಟ್ಟಿ, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ತೇಜಸ್ವಿ, ಪದಾಧಿಕಾರಿಗಳಾದ ಎ.ಎಸ್. ಮಹೇಶ್, ಲೀಲಾರಾಂ, ಯೋಗೇಶ್, ಶೇಖರ್, ನಿವೃತ್ತ ನೌಕರರ ಸಂಘದ ಕುಟ್ಟಪ್ಪ, ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
ಐಗೂರು: ಐಗೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮಾದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪಂಚಾಯಿತಿ ಅಧ್ಯಕ್ಷ ಡಿ.ಎಂ. ರಮೇಶ್ ಚಾಲನೆ ನೀಡಿದರು. ಇದೇ ಸಂದರ್ಭ ಪಂಚಾಯಿತಿ ಆವರಣವನ್ನು ಶಾಲಾ ಮಕ್ಕಳ ಸಹಯೋಗದೊಂದಿಗೆ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ನಂತರ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಕೆ.ಪಿ. ಶೋಭ, ಸದಸ್ಯರಾದ ಡಿ.ಎಸ್. ಚಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗರಾಜು, ಸ್ಥಳೀಯ ಉಪ ಕೇಂದ್ರದ ಆರೋಗ್ಯ ಸಹಾಯಕಿ ಹಾಗೂ ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ.ಪಂ.-ತಾಲೂಕು ಕಚೇರಿ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಆಡಳಿತದಿಂದ ಗಾಂಧಿ ಪ್ರತಿಮೆ ಎದುರು ಗಾಂಧಿ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಮುಖ್ಯಾಧಿಕಾರಿ ನಟರಾಜ್, ಡಿಸೋಜ, ತಾಲೂಕು ಕಚೇರಿಯ ವಿನು, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.