ಸೋಮವಾರಪೇಟೆ, ಅ.7: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ಜರುಗುವ ದಸರಾ ಉತ್ಸವದಂತೆಯೇ ಉತ್ತರ ಕೊಡಗಿನ ಸೋಮವಾರಪೇಟೆಯಲ್ಲಿ ಜನೋತ್ಸವವೆಂದೇ ಬಿಂಬಿತವಾಗಿರುವ ಆಯುಧ ಪೂಜೋತ್ಸವ ಮೇಳೈಸಿತು.ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸಲ್ಪಟ್ಟಿದ್ದ ಆಯುಧ ಪೂಜೋತ್ಸವಕ್ಕೆ ಪಟ್ಟಣವನ್ನು ನವವಧುವಿನಂತೆ ಸಿಂಗರಿಸಲಾಗಿತ್ತು.
ಪಟ್ಟಣದ ಅಂಗಡಿ ಮುಂಗಟ್ಟುಗಳು ವಿದ್ಯುತ್ದೀಪಾಲಂಕಾರ, ತಳಿರು ತೋರಣಗಳಿಂದ ಕಂಗೊಳಿಸಿದರೆ, ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಸಂಘದ ಅಧ್ಯಕ್ಷ ಎ.ಆರ್. ಭರತ್, ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ಬಾಲಕೃಷ್ಣ ಸೇರಿದಂತೆ ಪದಾಧಿಕಾರಿಗಳು ಬೆಳಿಗ್ಗೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಆಯುಧ ಪೂಜೋತ್ಸವ ಕಾರ್ಯಕ್ರಮವನ್ನು ಮಾಜೀ ಸಚಿವ ಬಿ.ಎ. ಜೀವಿಜಯ ಉದ್ಘಾಟಿಸಿದರು. ನಂತರ ತಾಲೂಕಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಡ್ಯಾನ್ಸ್-ಡ್ಯಾನ್ಸ್ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಸಾವಿರಾರು ಮಂದಿಗೆ ಸಂಘದ ವತಿಯಿಂದ ಅನ್ನದಾನ ನಡೆಯಿತು.ಆಯುಧ ಪೂಜೋತ್ಸವ ಅಂಗವಾಗಿ ವಾಹನ, ವರ್ಕ್ಶಾಪ್, ಅಂಗಡಿ, ಸರ್ಕಾರಿ ಕಚೇರಿಗಳ ಅಲಂಕಾರ ಸ್ಪರ್ಧೆ, ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆಯ ವಿಜೇತರಿಗೆ ಸಂಘದ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಸಂಜೆ ಮಂಗಳೂರಿನ ನೃತ್ಯ ಶಿವಂ ಕಲಾ ತಂಡದಿಂದ ಮೂಡಿಬಂದ ನೃತ್ಯ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು.
ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಆಯುಧ ಪೂಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಸಂಘದಿಂದ 50 ಸಾವಿರ ರೂಪಾಯಿಗಳನ್ನು ಪ್ರಾಕೃತಿಕ ವಿಕೋಪ ನಿಧಿಗೆ ನೀಡಲಾಗಿತ್ತು. ಈ ಬಾರಿ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರೆಸಬೇಕೆಂಬ ತೀರ್ಮಾನದೊಂದಿಗೆ ಅದ್ಧೂರಿಯಾಗಿ ಆಯುಧ ಪೂಜೋತ್ಸವ ಆಚರಿಸಲಾಗಿದೆ ಎಂದು ಮೋಟಾರ್ ಯೂನಿಯನ್ನ ಅಧ್ಯಕ್ಷ ಭರತ್ ತಿಳಿಸಿದರು.
ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಆಯೋಜಿಸಿದ್ದ ಆಯುಧ ಪೂಜೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣ ಮಾತ್ರವಲ್ಲದೇ ತಾಲೂಕಿನ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಜನೋತ್ಸವದ ಮೆರುಗು ನೀಡಿದರು.