ಕೂಡಿಗೆ, ಅ. 7: ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಸರ್ಕಾರಿ ಪದವಿಪೂರ್ವ ಕಾಲೇಜು ಸುಂಟಿಕೊಪ್ಪ ಮತ್ತು ಸಂತ ಮೇರಿ ಪಿಯು ಕಾಲೇಜು ಸುಂಟಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು. ಸದೃಢ ಆರೋಗ್ಯಕ್ಕೆ ಕ್ರೀಡೆ ಮುಖ್ಯ. ಅದು ಬಹಳಷ್ಟು ಸಹಕಾರಿಯಾಗಲಿದೆ ಎಂದರು. ಬಂದಿರುವ ಎಲ್ಲ ಕ್ರೀಡಾಪಟುಗಳು ಗೆಲವನ್ನು ಸಾಧಿಸಲು ಸಾಧ್ಯವಿಲ್ಲ. ಗೆದ್ದವರು ಬೀಗದೆ, ಸೋತವರು ಧೃತಿಗೆಡದೆ ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೂಡಿಗೆ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮಹಾಲಿಂಗಯ್ಯ, ಶಿರಂಗಾಲ ಪಿಯು ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷೆ ಅಶ್ವಿನಿಕುಮಾರ್, ಕ್ರೀಡಾಕೂಟದ ಸಂಚಾಲಕ ಫಿಲಿಪ್ ವಾಸ್, ಸಂತ ಮೇರಿ ಪಿಯು ಕಾಲೇಜಿನ ಪ್ರಾಂಶುಪಾಲ ಸೆಲ್ವರಾಜ್, ಸೋಮವಾರಪೇಟೆ ತಾಲೂಕಿನ ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗಪ್ಪ, ವೀರಾಜಪೇಟೆ ತಾಲೂಕಿನ ಉಪನ್ಯಾಸಕ ಸಂಘದ ಅಧ್ಯಕ್ಷ ಸರ್ವೋತ್ತಮ್, ಕ್ರೀಡಾಕೂಟ ಆಯೋಜಕರು ಸೇರಿದಂತೆ ಮೊದಲಾದವರು ಇದ್ದರು.ಮಡಿಕೇರಿ, ಅ. 7: ಮಳೆಹಾನಿ ಸಂತ್ರಸ್ತರಾಗಿರುವ ನಗರದ ಜಿಎಂಪಿ ಶಾಲಾ ವಿದ್ಯಾರ್ಥಿಗಳಿಗೆ ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ನೀಡಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್.ಪಿ. ಪ್ರಕಾಶ್ ಅವರ ನಿರ್ದೇಶನದಂತೆ ರೂ. 5 ಲಕ್ಷ ಮೌಲ್ಯದ ಲೇಖಕ್ ಮತ್ತು ವಿದ್ಯಾ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ಜಿಲ್ಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಎಂಎಸ್‍ಐಎಲ್ ಕಾಗದ ವಿಭಾಗದ ಮುಖ್ಯಸ್ಥರಾದ ಎ.ಎಂ. ಚಂದ್ರಪ್ಪ, ಬಿ. ಚಂದ್ರಶೇಖರ್, ಮೈಸೂರು ವಿಭಾಗದ ವ್ಯವಸ್ಥಾಪಕ ಆರ್.ಎಸ್. ಚಂದ್ರಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ, ಶಿಕ್ಷಣಾಧಿಕಾರಿ ಗಾಯತ್ರಿ, ಮಾರಾಟ ಮೇಲ್ವಿಚಾರಕ ಜ್ಞಾನೇಶ್, ಜಿಲ್ಲಾ ಸಂಪರ್ಕಾಧಿಕಾರಿ ಕೆಂಪಯ್ಯ ಹಾಜರಿದ್ದರು.ಎನ್‍ಎಸ್‍ಎಸ್ ಶಿಬಿರ ಉದ್ಘಾಟನೆಪೊನ್ನಂಪೇಟೆ, ಅ. 7: ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಪಾಲಿಬೆಟ್ಟ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದಾಜಿ ಮಹಾರಾಜ್ ನೆರವೇರಿಸಿ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದ್ದು, ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವದರ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಡವ ಶಿಕ್ಷಣ ನಿಧಿ ಅಧ್ಯಕ್ಷ ಕೆ.ಪಿ. ಉತ್ತಪ್ಪ ದೇಹ ಹಾಗೂ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಬೇಕಾದರೆ ಯೋಗಾಭ್ಯಾಸ ಮಾಡುವದನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಕೂತಂಡ ಬೋಜಮ್ಮ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಿ.ಪಿ. ನಾಣಯ್ಯ, ಪಾಲಿಬೆಟ್ಟ ಮಹಿಳಾ ಸಮಾಜದ ಅಧ್ಯಕ್ಷ ಕುಪ್ಪಂಡ ಸಚಿ ಪೊನ್ನಪ್ಪ, ಕಾರ್ಯದರ್ಶಿ ಅಜ್ಜಿಕುಟ್ಟೀರ ಕಮಲು ಪೂಣಚ್ಚ, ಪ್ರಾಂಶುಪಾಲೆ ಡಾ .ಕೆ.ಎಂ. ಭವಾನಿ, ಉಪನ್ಯಾಸಕಿ ಕೆ.ಕೆ. ಶೈನಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಿರುವಾದಿರ ನೃತ್ಯ ಹಾಗೂ ಉಮ್ಮತ್ತಾಟ್ ಪ್ರದರ್ಶನ ನೀಡಿದರು. 7 ದಿನಗಳವರೆಗೆ ನಡೆಯುವ ಶಿಬಿರ ತಾ. 12 ರಂದು ಸಮಾರೋಪಗೊಳ್ಳಲಿದೆ. ವೇದಿಕೆಯಲ್ಲಿ ಉಪನ್ಯಾಸಕಿ ಎಂ.ವಿ. ಪಾರ್ವತಿ, ಶಿಬಿರಾಧಿಕಾರಿ ಪಿ.ಆರ್. ಶಿವದಾಸ್, ಕೆ.ಕೆ. ಸುನಿತಾ ಉಪಸ್ಥಿತರಿದ್ದರು.ಸೈಕಲ್ ವಿತರಣೆಮೂರ್ನಾಡು, ಅ. 7: ಸರ್ಕಾರದಿಂದ ದೊರಕುವ ಸೈಕಲ್‍ಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವದಲ್ಲದೆ, ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ. ಕಲಾವತಿ ಪೂವಪ್ಪ ಹೇಳಿದರು.
ಮೂರ್ನಾಡು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಸೈಕಲ್‍ಗಳನ್ನು ಹಾಳುಗೆಡವದೆ ಶಾಲೆಗೆ ಬರಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಾಥಮಿಕ ಶಾಲೆಯ 8ನೇ ತರಗತಿಯ 24 ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಎಂ. ಸಾಧಿಕ್, ಮೀನಾಕ್ಷಿ ಕೇಶವ, ಸುಜಾತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಶಾಲಾ ಹಿರಿಯ ಮುಖ್ಯಶಿಕ್ಷಕಿ ವಿ.ಕೆ. ಲಲಿತ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮನೋಜ್ ಮತ್ತು ಸದಸ್ಯರುಗಳು, ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.ಒಡೆಯನಪುರ, ಅ. 7: ಸಮೀಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಸರಕಾರ ನೀಡಿರುವ ಉಚಿತ ಸೈಕಲ್‍ನ್ನು ವಿತರಣೆ ಮಾಡಲಾಯಿತು.
ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್‍ಗೌಸ್ ಮಾತನಾಡಿ, ಸರಕಾರ ಮತ್ತು ಶಿಕ್ಷಣ ಇಲಾಖೆ ಶಿಕ್ಷಣದ ಪ್ರಗತಿಗೆ ಹತ್ತು ಹಲವು ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಇದರಲ್ಲಿ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮವೂ ಒಂದಾಗಿದ್ದು, ಈ ನಿಟ್ಟಿನಲ್ಲಿ ಶಾಲೆಯ ಬಾಲಕರು ಮತ್ತು ವಿಶೇಷವಾಗಿ ಬಾಲಕಿಯರು ಹಾಗೂ ಪೋಷಕರು ಸರಕಾರ ನೀಡಿರುವ ಸೌಲಭ್ಯವನ್ನು ಸದುಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಸರ್ವರೂ ಸಹ ವಿದ್ಯಾವಂತರಾಗಬೇಕೆಂಬ ಉದ್ದೇಶದಿಂದ ಸರಕಾರಗಳು ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗಾಗಿ ಸವಲತ್ತುಗಳನ್ನು ನೀಡುತ್ತಿದೆ, ಸರಕಾರ ನೀಡುತ್ತಿರುವ ಉಚಿತ ಸೈಕಲ್ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳುವ ಮೂಲಕ ವ್ಯಾಸಂಗ ಮಾಡುವ ಶಾಲೆಗೆ ಹಾಗೂ ಶಿಕ್ಷಕರಿಗೆ, ಪೋಷಕರಿಗೆ ಕೀರ್ತಿ ತಂದುಕೊಡುವಂತೆ ಸಲಹೆ ನೀಡಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣಿ ಮಾತನಾಡಿ, ಈಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ದೃಢತೆಯ ಕೊರತೆ ಇದೆ, ಸರಕಾರ ನೀಡುವ ಉಚಿತ ಸೈಕಲ್ ಸೌಲಭ್ಯವನ್ನು ಸದುಪಯೋಗಿಸಿಕೊಂಡು ತಮ್ಮ ಮನೆಯಿಂದ ಶಾಲೆಗೆ ಬರಲು ಸೈಕಲ್ ಬಳಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸುಧಾರಿಸುತ್ತದೆ ಹಾಗೂ ವಿದ್ಯಾರ್ಥಿ ಫಲಾನುಭವಿಗಳು ಮತ್ತು ಪೋಷಕರು ಸರಕಾರ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಸರಕಾರದ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೃಷ್ಣರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ನಿರ್ದೇಶಕಿ ನಿತ್ಯನಿಧಿ, ಪ.ಪೂ. ಕಾಲೇಜು ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಪ್ರೌಢಶಾಲಾ ಸಹ ಶಿಕ್ಷಕ ಕೆ.ಪಿ. ಜಯಕುಮಾರ್ ಹಾಜರಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ 8ನೇ ತರಗತಿಯ 32 ಬಾಲಕಿಯರಿಗೆ ಸೈಕಲ್ ವಿತರಣೆ ಮಾಡಲಾಯಿತು.ಸುಂಟಿಕೊಪ್ಪ, ಅ. 7: ಸರಕಾರ ನೀಡುವ ಸಲವತ್ತುಗಳನ್ನು ಹಾಳು ಮಾಡದೆ ಸದುಪಯೋಗ ಪಡಿಸಿಕೊಳ್ಳುವಂತೆ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಿಸಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಹೇಳಿದರು.
ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ಮಕ್ಕಳಿಗೆ ಸರಕಾರದಿಂದ ನೀಡಲಾಗುವ ಉಚಿತ ಸೈಕಲ್ ವಿತರಿಸಿ ಮಾತನಾಡಿದ ಅವರು, ಶಾಲೆಯಿಂದ ಸೈಕಲ್‍ಗಳನ್ನು ಕೊಂಡ್ಯೊಯ್ಯುವ ವಿದ್ಯಾರ್ಥಿಗಳು ಸೈಕಲ್‍ಅನ್ನು ಉಪಯೋಗಿಸದೆ ಮನೆಯ ಮೂಲೆಯಲ್ಲಿ ನಿಲ್ಲಿಸಿ ನಿರುಪಯುಕ್ತಗೊಳಿಸುತ್ತಿರುವದು ವಿಷಾದನೀಯ ಎಂದರು. ಸರಕಾರವು ನೀಡುವ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಮಾತನಾಡಿ, ಸರಕಾರವು ಪ್ರತಿವರ್ಷ ಸೈಕಲ್ ವಿತರಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮವಾದ ಸಾರಿಗೆ ಸೌಲಭ್ಯಗಳನ್ನು ಹೊಂದಿರದೆ ಶಿಕ್ಷಣದಿಂದ ವಂಚಿತಗೊಳ್ಳುತ್ತಿರುವದನ್ನು ಮನಗಂಡ ಸರಕಾರ ಸೈಕಲ್ ವಿತರಿಸುವ ಮೂಲಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಳ್ಳದಂತೆ ಈ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ. ಶಾಲೆಯಲ್ಲಿ ಸೈಕಲ್‍ಗಳನ್ನು ನಿಲ್ಲಿಸಲು ಉತ್ತಮವಾದ ಶೆಡ್‍ನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಸೈಕಲ್‍ನಲ್ಲೇ ಬರುವಂತೆ ಸೂಚಿಸಿದರು.
ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಶಾಂತ ಹೆಗಡೆ, ಪವಿತ್ರ, ಪುಷ್ಪಾ, ಎಂ.ಆರ್. ಸುನಂದ, ಎಸ್.ಆರ್. ಚಿತ್ರಾ, ಜಯಶ್ರೀ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತಿತರರು ಇದ್ದರು.ಸೈಕಲ್ ವಿತರಣೆಕುಶಾಲನಗರ, ಅ. 7: ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು.
ಎಂಟನೇ ತರಗತಿಯ ಸುಮಾರು 34 ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯಿತಿ ಸದಸ್ಯ ಜಯವರ್ಧನ್ ಸೈಕಲ್ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ನಗರ ಪ್ರದೇಶದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಹಳ್ಳಿಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ವರದಾನವಾಗಿದೆ. ತಮ್ಮ ಸೈಕಲ್‍ಗಳನ್ನು ಜೋಪಾನ ಮಾಡುವದರೊಂದಿಗೆ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್. ರಾಣಿ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.ರಾಜ್ಯಮಟ್ಟಕ್ಕೆ ಶಿರಂಗಾಲ ಕಾಲೇಜು ಕ್ರೀಡಾ ತಂಡಕೂಡಿಗೆ, ಅ. 7: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸುಂಟಿಕೂಪ್ಪದಲ್ಲಿ ನಡೆದ ಪದವಿಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಕಾಲೇಜು ತಂಡ ಬಾಲಕರ-ಬಾಲಕಿಯರ ಖೋ-ಖೋ ಹಾಗೂ ಬಾಲಕರ ಥ್ರೋಬಾಲ್ ತಂಡಗಳು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ.ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಶ್ರಫಿ ಪದವಿ
ಚೆಟ್ಟಳ್ಳಿ, ಅ. 7: ಉತ್ತರ ಪ್ರದೇಶದ ಲಗ್ನೋ ಕಿಚೌಚ ಎಂಬಲ್ಲಿನ ಪ್ರತಿಷ್ಠಿತ ಜಾಮಿಯಾ ಅಶ್ರಫಿಯ್ಯಾ ಅರಬಿಕ್ ಕಾಲೇಜಿ ನಿಂದ ಜಿಲ್ಲೆಯ ಮುಹಮ್ಮದ್ ಯಾಸೀನ್ ಖಾದಿರಿ ಮಟ್ಟಂ, ಶಬೀರ್ ಅಲಿ ಖಾದಿರಿ ವೀರಾಜಪೇಟೆ, ಕಮರುದ್ದೀನ್ ಖಾದಿರಿ ಕುಂಜಿಲ ಈ ಮೂವರು ವಿದ್ಯಾರ್ಥಿಗಳು ಅಶ್ರಫಿ ಪದವಿ ಪಡೆದುಕೊಂಡಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮರ್ಕಿನ್ಸ್ ವಿದ್ಯಾಸಂಸ್ಥೆಯಲ್ಲಿ ಏಳು ವರ್ಷಗಳ ವಿದ್ಯಾಭ್ಯಾಸ ಮುಗಿಸಿ ನಂತರ ಜಾಮಿಯಾ ಅಶ್ರಫಿಯ್ಯಾದಲ್ಲಿ ಅಧ್ಯಯನದ ನಂತರ ಪದವಿ ಪಡೆದುಕೊಂಡಿದ್ದಾರೆ.ಇಕ್ರಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆಚೆಟ್ಟಳ್ಳಿ, ಅ. 7: ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ, ತಾಲೂಕು ಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಹಾಗೂ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜು ವತಿಯಿಂದ ಪಾಲಿಬೆಟ್ಟದಲ್ಲಿ ಆಯೋಜಿಸಿದ್ದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೆರಾಜೆಯಲ್ಲಿ ನಡೆದ ಪ್ರೌಢಶಾಲಾ ಬಾಲಕಿಯರ ಥ್ರೋಬಾಲ್‍ನಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೀರಾಜಪೇಟೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿ ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಇಕ್ರಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕೆ.ಯು. ಅಬ್ದುಲ್ ರಜಾಕ್ ತಿಳಿಸಿದ್ದಾರೆ
ಈ ಸಂದರ್ಭ ದೈಹಿಕ ಶಿಕ್ಷಕ ಡಿ.ಆರ್. ಮಂಜು ಹಾಜರಿದ್ದರು.ಸಮಾಜದ ಮುಖ್ಯವಾಹಿನಿಗೆ ಬರಲು ಕರೆಚೆಟ್ಟಳ್ಳಿ, ಅ. 7: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಉಚಿತ ಸೈಕಲ್ ವಿತರಣೆ ಮಾಡುತ್ತಿದ್ದು ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಮೂಲಕ ಭವಿಷ್ಯವನ್ನು ರೂಪಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಕರೆ ನೀಡಿದರು. ನೆಲ್ಲಿಹುದಿಕೇರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವನಜಾಕ್ಷಿ, ಮಂಗಳ, ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ಶಾಲಾ ಮುಖ್ಯ ಶಿಕ್ಷಕ ಅನಿಲ್‍ಕುಮಾರ್, ಶಿಕ್ಷಕಿಯರಾದ ಭಾರತಿ, ಮಂಜುಳಾ, ರಮ್ಮಿ, ಪ್ರವೀಣ್ ಕುಮಾರ್, ಸ್ಥಳೀಯರಾದ ಸುಕುಮಾರ್, ನಂಜಪ್ಪ, ಮೈಮುನಾ, ಬಿಂದು ಸೇರಿದಂತೆ ಮತ್ತಿತರರು ಇದ್ದರು.ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಗೋಣಿಕೊಪ್ಪ, ಅ. 7: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಡಾ. ಎಂ.ಎಂ. ಚಂಗಪ್ಪ ಜ್ಞಾಪಕಾರ್ಥ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪಿ.ಎಸ್. ಅಜಿತೇಶ್ ಹಾಗೂ ಆನಂದ್ ಬಾಳಪ್ಪ ತಿಲಗಂಜಿ ಜೋಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಮನ್ ಸುಜೈನ್ ಹಾಗೂ ಟಿ.ಜೆ. ದೇವಿಕ ಜೋಡಿ ಪಡೆದುಕೊಂಡಿತು. ಉಪನ್ಯಾಸಕರಾದ ಬೆನಡಿಕ್ಟ್ ಸಾಲ್ಢಾನ, ಕೆ.ಜಿ. ಮುದ್ದಪ್ಪ, ಎ.ಎ. ಪೊನ್ನಪ್ಪ ಹಾಗೂ ಪ್ರಕೃತಿ ಕ್ವಿಝ್ ಮಾಸ್ಟರ್‍ಗಳಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲೆಯ ವಿವಿಧ ಕಾಲೇಜುಗಳಿಂದ 21 ತಂಡಗಳು ಭಾಗವಹಿಸಿದ್ದವು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್, ಕಾರ್ಯಕ್ರಮ ಸಂಚಾಲಕ ಸಿ.ಎಂ. ಕಿರಣ್ ಉಪಸ್ಥಿತರಿದ್ದರು.