ಕುಶಾಲನಗರ, ಅ. 4: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಹಾಮಳೆ ಹಾಗೂ ನೆರೆಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಗಿರಿಜನ ಆದಿವಾಸಿಗಳ ವಾಸ್ತವಾಂಶ ತಿಳಿಯಲು ತಾ. 6 ರಂದು ಕಲಬುರ್ಗಿಯ ಕನಕಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಅವರು ನಂಜರಾಯಪಟ್ಟಣ ಮೀನುಕೊಲ್ಲಿ ಹಾಡಿಗೆ ಭೇಟಿ ನೀಡಲಿದ್ದಾರೆ ಎಂದು ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ಮೀನುಕೊಲ್ಲಿ ಹಾಡಿಯಲ್ಲಿ ಆದಿವಾಸಿ ಜೇನು ಕುರುಬ, ಬೆಟ್ಟಕುರುಬ, ಕುರುಬ ಸಮುದಾಯ ಸೇರಿದಂತೆ ಜಿಲ್ಲೆಯ ವಿವಿಧ ಆದಿವಾಸಿ ಜನಾಂಗದವರೊಂದಿಗೆ ಸಮ್ಮಿಲನ ಸಭೆಯನ್ನು ನಡೆಸಲಿದ್ದಾರೆ. ಹಾಗೂ ಆದಿವಾಸಿ ಜನರೊಂದಿಗೆ ಅವರ ಕಷ್ಟ ಕಾರ್ಪಣ್ಯ, ಬದುಕು,ಬವಣೆ ಕುರಿತು ಚರ್ಚೆ ನಡೆಸುವರು. ಅದೇ ರೀತಿ ಸರ್ಕಾರದ ಯೋಜನೆಗಳು ಎಷ್ಟರ ಮೆಟ್ಟಿಗೆ ನೈಜ ಗಿರಿಜನ ಫಲಾನುಭವಿಗಳಿಗೆ ತಲುಪಿವೆ ಎಂಬ ಬಗ್ಗೆ ಕೂಡ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆದಿವಾಸಿ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಕಲ್ಪಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಚಂದ್ರು ತಿಳಿಸಿದರು.

ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ್ ಮಾತನಾಡಿ, ಹಾಡಿಗಳಿಗೆ ಭೇಟಿ ನೀಡುವ ಸ್ವಾಮೀಜಿ ಮದ್ಯಪಾನ, ದುಶ್ಚಟಗಳಿಂದ ದೂರ ಉಳಿಯುವಂತೆ ಗಿರಿಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಅದೇ ರೀತಿ ಮಹಾಮಳೆಯಿಂದ ತೊಂದರೆಗೆ ಒಳಗಾಗಿರುವ ಆದಿವಾಸಿ ಕುಟುಂಬಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಗೋಷ್ಠಿಯಲ್ಲಿ ಜಿಲ್ಲಾ ಕುರುಬ ಸಂಘದ ಖಜಾಂಜಿ ಟಿ.ಜಿ.ಶಿವಣ್ಣ ಇದ್ದರು.