ಚೆಟ್ಟಳ್ಳಿ, ಅ. 6: ಚೆಟ್ಟಳ್ಳಿಯ ಕೆಕೆಎಫ್‍ಸಿ ತಂಡದವರು ಗಾಂಧಿ ಜಯಂತಿ ಪ್ರಯುಕ್ತ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4ನೇ ವರ್ಷದ ರಕ್ತದಾನ ಶಿಬಿರವನ್ನು ನಡೆಸಿದರು.

ಕೆಕೆಎಫ್‍ಸಿ ತಂಡದ ಅಧ್ಯಕ್ಷ ಮೊಹಮದ್ ರಫಿ ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ಉದ್ಘಾಟಿಸಿದರು. ಕೆಕೆಎಫ್‍ಸಿ ತಂಡವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದೂರ್ ಶಾಸ್ತ್ರಿಯವರ ಜನ್ಮ ದಿನದಂದು ನಡೆಸಿಕೊಂಡುಬರುತ್ತಿರುವ ರಕ್ತದಾನ ಶಿಬಿರ ಉತ್ತಮ ಕಾರ್ಯವೆಂದರು. ಈ ತಂಡವು ಹಲವು ಸಾರ್ವಜನಿಕ ಕಾರ್ಯವನ್ನು ಮಾಡುತಿರುವದು ಹೆಮ್ಮೆಯ ವಿಷಯವೆಂದು ಜಿಲಾ ್ಲಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಹೇಳಿದರು.

ಮನುಷ್ಯ ಆರೋಗ್ಯವಂತ ನಾಗಿರಲು ರಕ್ತ ಎಷ್ಟು ಮುಖ್ಯವೋ ಅದೇ ರೀತಿ ಇನ್ನೊಬ್ಬರಿಗೆ ರಕ್ತ ನೀಡುವ ಮೂಲಕ ಇತರರ ಜೀವವನ್ನು ಉಳಿಸುವಂತಾಗ ಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ತಿಳಿಸಿದರು. ಚೆಟ್ಟಳ್ಳಿ ವೈದ್ಯಾಧಿಕಾರಿ ಡಾ. ಯಶೋದಾ ಮಾತನಾಡಿ, 18 ವರ್ಷ ಮೇಲ್ಪಟ್ಟು 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು. ಉತ್ತಮ ಜೀವನ ಶೈಲಿ ಹಾಗೂ ಪೋಶಕಾಂಶಯುಕ್ತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನವನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳ ಬೇಕೆಂದರು. ಮಡಿಕೇರಿ ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಮಾತನಾಡಿ, ಪುರುಷರು ಪ್ರತೀ 3 ತಿಂಗಳಿಗೊಮ್ಮೆ ಮಹಿಳೆಯರು ಪ್ರತೀ 4 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ತನ್ನ ನೆತ್ತರನ್ನು ಸುರಿಸಿದರು ಅವರ ಜನ್ಮದಿನದಂದೆ ಕಳೆದ 4 ವರ್ಷಗಳಿಂದ ಕೆಕೆಎಫ್‍ಸಿ ತಂಡ ರಕ್ತದಾನ ಶಿಬಿರವನ್ನು ಮಾಡುತ್ತಿರುವದಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಹೀಗೆ ಮುಂದುವರಿಯಲಿ ಎಂದರು. ರಕ್ತದಾನದ ಬಗ್ಗೆ ನಿರಂತರ ಅರಿವನ್ನು ಮೂಡಿಸುವ ಹಾಗೂ ಸಹಕಾರ ನೀಡುವ ಕಾರ್ಯವನ್ನು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಅವರ ಸೇವೆಯ ಬಗ್ಗೆ ಅಧ್ಯಕ್ಷತೆ ವಹಿಸಿದ ಕೆಕೆಎಫ್ ತಂಡದ ಅಧ್ಯಕ್ಷ ಮೊಹಮದ್ ರಫಿ ತಿಳಿಸಿದರು.

ಕಾರ್ಯದರ್ಶಿ ಜುಬೇರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಲೂಹಿಸ್ ವಂದಿಸಿದರು. ಸಂಘದ ಸದಸ್ಯರು ಸೇರಿ ಒಟ್ಟು 29 ಜನರು ರಕ್ತದಾನವನ್ನು ಮಾಡಿದರು. ಈ ಸಂದರ್ಭ ಸಂಘದ ಸದಸ್ಯರು, ಚೆಟ್ಟಳ್ಳಿ ಪ್ರಾಥಮಿಕ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.