ಮಡಿಕೇರಿ: ಭಾರತ ಸೇವಾದಳ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಬಹದ್ದೂರ್ ಶಾಸ್ತ್ರೀಜಿ ಅವರ 115ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸರ್ವಧರ್ಮಿಯ ಪ್ರಾರ್ಥನೆ, ರಘುಪತಿ ರಾಘವ ಗೀತೆ, ಚಿಂತನೆ, ಪ್ರಮುಖ ರಸ್ತೆಗಳಲ್ಲಿ ಶ್ರಮದಾನ ಮಾಡಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಜಿಲ್ಲಾ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಸಂಘಟಕ ಎಂ. ಉಮೇಶ್, ಭಾರತ ಸೇವಾದಳ ಶಾಖಾ ನಾಯಕ-ನಾಯಕಿಯರು, ಇತರ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
ಮೂರ್ನಾಡು: ಗಾಂಧಿ ಜಯಂತಿ ಪ್ರಯುಕ್ತ ಮೂರ್ನಾಡು ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್ನ ವತಿಯಿಂದ ಶ್ರಮದಾನ ಮಾಡುವದರ ಮೂಲಕ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೂರು ಗುಂಪುಗಳಾಗಿ ವಿಂಗಡಣೆಯಾಗಿ ಹಾಕತ್ತೂರುನಿಂದ ಮೂರ್ನಾಡು, ಮೂರ್ನಾಡುವಿನಿಂದ ಹೊದ್ದೂರು ಮತ್ತು ಕಾಕೋಟುಪರಂಬುವರೆಗಿನ ಸುಮಾರು 20 ಕಿ.ಮೀ. ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕ ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭ ಕ್ಲೀನ್ ಇಂಡಿಯಾ ಬ್ರಿಗೇಡ್ನ ಅಧ್ಯಕ್ಷ ನಂದೇಟಿರ ರಾಜಾ ಮಾದಪ್ಪ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್, ರಶ್ಮಿ, ಎನ್ಸಿಸಿ ಅಧಿಕಾರಿ ಪಿ.ಎಂ. ಕಾವೇರಪ್ಪ, ಎನ್ಎಸ್ಎಸ್ ಯೋಜನಾಧಿಕಾರಿ ಯು.ಸಿ. ಮಾಲತಿ ಹಾಗೂ ಶಿಕ್ಷಕ ಮತ್ತು ಉಪನ್ಯಾಸಕ ವೃಂದದವರು ಹಾಜರಿದ್ದರು.
ನಾಪೋಕ್ಲು: ಎಸ್ಎಸ್ಎಫ್ ರಾಜ್ಯ ಸಮಿತಿಯ ಸುತ್ತೋಲೆಯಂತೆ ನಾಪೋಕ್ಲು ಸೆಕ್ಟರ್ ಸಮಿತಿಯಿಂದ ಗಾಂಧೀಜಿಯ ಕನಸು, ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಗಾಂಧೀಜಿಯವರ ಹಿರಿಯ ಕನಸಾದ ಮದ್ಯ ಮುಕ್ತ ದೇಶವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಪಣತೊಡಬೇಕು. ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸಬೇಕು ಎಂದು ಎಸ್ಎಸ್ಎಫ್ ರಾಜ್ಯ ಸಮಿತಿಯ ಸದಸ್ಯ ಮುಬಷೀರ್ ಅಹ್ಸಾನಿ ಉಸ್ತಾದ್ ಕರೆ ನೀಡಿದರು. ಟೀಮ್ ಕಾರ್ಯಕರ್ತ ರಬೀಹ್ ಅಯ್ಯಂಗೇರಿ ಸ್ವಾಗತ ಭಾಷಣ ಮಾಡಿದರು. ಎಸ್ಎಸ್ಎಫ್ ಮಡಿಕೇರಿ ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಶಾಫಿ ಕುಂಜಿಲ, ರಫೀಕ್ ಸಾಧಿ ಕೊಳಕೇರಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಡಿವಿಜನ್ ಟೀಮ್ ಡೈರೆಕ್ಟರ್ ನಾಪೋಕ್ಲುವಿನ ರಫಿಕ್ ರತೀಫಿ, ಮಡಿಕೇರಿ ಡಿವಿಜನ್ ಅಧ್ಯಕ್ಷ ಎಮ್ಮೆಮಾಡಿನ ಸಯ್ಯದ್ ಖಾತಿಂ ಸಖಾಫಿ ಅಲ್ ಹೈದರೂಸಿ ಎಸ್ಎಸ್ಎಫ್ ಜಿಲ್ಲಾ ಸಮಿತಿಯ ಕೊಟ್ಟಮುಡಿಯ ಅಸ್ಕರ್ ಸಖಾಫಿ, ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಸಿ.ಎಂ. ಅಬ್ದುಲ್ಲ, ನಾಪೋಕ್ಲು ಸೆಕ್ಟರ್ ಅಧ್ಯಕ್ಷ ನಜೀರ್ ಸಖಾಫಿ, ಕುಂಜಿಲದ ಅಬ್ದುಲ್ ಸಖಾಫಿ ಮತಿತರರು ಪಾಲ್ಗೊಂಡಿದ್ದರು.
ಗುಡ್ಡೆಹೊಸೂರು: ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛಮೇವ ಜಯತೆ ಕಾರ್ಯಕ್ರಮ ನಡೆಯಿತು. ಗುಡ್ಡೆಹೊಸೂರಿನಿಂದ ನಿಸರ್ಗಧಾಮದ ತನಕ ರಸ್ತೆಯ ಎರಡು ಬದಿಯನ್ನು ಶುಚಿಗೊಳಿಸಲಾಯಿತು. ಗಾಂಧಿ ಜಯಂತಿ ಅಂಗವಾಗಿ ಈ ಕಾರ್ಯವನ್ನು ಸರಕಾರದ ವತಿಯಿಂದ ಏರ್ಪಡಿಸಲಾಗಿತ್ತು. ಈ ಸಂದರ್ಭ ಪಿ.ಡಿ.ಓ. ಶ್ಯಾಂ ತಮ್ಮಯ್ಯ, ಜಿ.ಪಂ. ಅಧಿಕಾರಿ ಚೇತನ್, ಗ್ರಾ.ಪಂ. ಅಧಿಕಾರಿ ಸುಮ, ಪಂಚಾಯಿತಿ ಕಾರ್ಯದರ್ಶಿ ನಂಜುಂಡೇಸ್ವಾಮಿ, ಸದಸ್ಯರಾದ ಪ್ರವೀಣ್, ಶಿವಪ್ಪ, ಭೀಮಯ್ಯ, ಪ್ರಸನ್ನ, ಕಾವೇರಪ್ಪ, ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರಾದ ಭಾರತಿ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ಸಭೆಯಲ್ಲಿ ಮಾತನಾಡಿದರು. ಗ್ರಾ.ಪಂ. ಸಿಬ್ಬಂದಿಗಳಾದ ವಿಜಯ್, ಕೌಶಿ ಮುಂತಾದವರು ಹಾಜರಿದ್ದರು.ಹಾಕತ್ತೂರು: ಮೂರ್ನಾಡು ಸಮೀಪದ ಹಾಕತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಾಕತ್ತೂರಿನಲ್ಲಿ ರಸ್ತೆ ಬದಿ ಬಿದ್ದ ಕಸ, ಪ್ಲಾಸ್ಟಿಕ್ಗಳನ್ನು ಸ್ವಚ್ಛ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂದ್ರೀರ ಶಾರದ, ಪಿಡಿಓ ಹೆಚ್.ಆರ್. ದಿನೇಶ್, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕೂಡಿಗೆ: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಬೂತ್ ಕಮಿಟಿ ವತಿಯಿಂದ 150ನೇ ಗಾಂಧಿ ಜಯಂತಿಯನ್ನು ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ರಾಜ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಬೋಗಪ್ಪ, ಪ್ರಧಾನ ಕಾರ್ಯದರ್ಶಿ ಕೆ. ವರದ, ಬೂತ್ ಕಮಿಟಿ ಕಾರ್ಯದರ್ಶಿ ಪ್ರವೀಣ, ಪ್ರಮುಖರಾದ ರವಿ, ಕಿರಣ್, ಮಹಿಳಾ ಘಟಕದ ಸದಸ್ಯರಾದ ಕನಕಾ, ಪವಿತ್ರಾ, ಗೌರಿ ಮೊದಲಾದವರು ಇದ್ದರು.
ಅತ್ತೂರು: ಕುಶಾಲನಗರ ಸಮೀಪದ ಜ್ಞಾನಗಂಗಾ ವಸತಿ ಶಾಲೆ ಅತ್ತೂರುವಿನಲ್ಲಿ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀಯವರ ಜನ್ಮ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಜಿ.ಜಿ. ಜೋಸ್ ಮತ್ತು ಉಪ ಪ್ರಾಂಶುಪಾಲ ನಾಗ್ರಾಜ್ ಉದ್ಘಾಟಿಸಿದರು.
8ನೇ ತರಗತಿಯ ವಿದ್ಯಾರ್ಥಿಗಳಾದ ವರ್ಷಿತ ಮತ್ತು ಸಾತ್ವಿಕ್ ದಿನದ ಮಹತ್ವವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು 8ನೇ ತರಗತಿಯ ವಿದ್ಯಾರ್ಥಿನಿ ಹನೀನಾ ನಿರೂಪಿಸಿ, ಹಿರಣ್ಮಯಿ ಅತಿಥಿಗಳನ್ನು ಸ್ವಾಗತಿಸಿ, ಸಮನ್ವಿತ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ನಂತರ ಮಕ್ಕಳಿಂದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಶ್ರಮದಾನ ಏರ್ಪಡಿಸಲಾಗಿತ್ತು.
ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಶಾಲೆಯಲ್ಲಿ 150ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಬಿ.ಎಸ್. ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ಧನಪಾಲ್, ಮತ್ತು ಡಿ.ಐ.ಇ.ಆರ್.ಟಿ. ವೆಂಕಟೇಶ್ ಮತ್ತು ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಮತ್ತು ಸಹ ಶಿಕ್ಷಕ ವೃಂದದವರು ಹಾಜರಿದ್ದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಜನಾರ್ಧನ್ ಗುರುತಿನ ಚೀಟಿಯನ್ನು ವಿತರಿಸಿದರು. ಶೂಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಈ ಸಂದರ್ಭ ಶಾಲಾ ಮಕ್ಕಳಿಂದ ದೇಶಭಕ್ತಿಗೀತೆ ಮತ್ತು ಭಾಷಣ ಸ್ಪರ್ಧೆ ನಡೆಯಿತು. ಸರ್ವಧರ್ಮ ಪ್ರಾರ್ಥನೆ ಮತ್ತು ಶ್ರಮದಾನ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಮರಿಯಾ ನಡೆಸಿದರು. ಕೆ.ಎಸ್. ರುಕ್ಮಿಣಿ ವಂದಿಸಿದರು.ಮಡಿಕೇರಿ: ಮಡಿಕೇರಿಯ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಭಾಷಣ, ಭಜನೆ ಕಾರ್ಯಕ್ರಮ ಮತ್ತು ಧರ್ಮ ಗ್ರಂಥಗಳ ಪಠಣ ಇತ್ಯಾದಿಗಳನ್ನು ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕ ವರ್ಗದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜರಾಜೇಶ್ವರಿ ದೇವಾಲಯ ಧರ್ಮದರ್ಶಿಗಳು ಮತ್ತು ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋವಿಂದಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯ ಅನಿಲ್ ಕೃಷ್ಣನೀ ಪಾಲ್ಗೊಂಡಿದ್ದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ಸಂಸ್ಥೆಯ ಪ್ರಾಂಶುಪಾಲ ಪಿ.ಕೆ. ಮಂದಣ್ಣ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಪೂಜಾರ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ತಾಜಿನಾ ಫಾತಿಮಾ ಉಪಸ್ಥಿತರಿದ್ದರು. ಶಿಕ್ಷಕಿ ಅಂಕಿತಾ ನಿರೂಪಿಸಿದರು.
ಪೊನ್ನಂಪೇಟೆ: ಸ್ವಚ್ಛ ಭಾರತ ಪರಿಕಲ್ಪನೆಗೆ ಹೊಸ ಆಯಾಮ ದೊರಕುತ್ತಿರುವ ಪ್ರಸಕ್ತ ಕಾಲದಲ್ಲಿ ಇದೊಂದು ಸಾಮಾಜಿಕ ಜವಾಬ್ದಾರಿಯಾಗಿ ರೂಪುಗೊಳ್ಳಲಿ. ಸ್ವಚ್ಛತೆಯ ಪರಿಕಲ್ಪನೆ ಗ್ರಾಮ ಮಟ್ಟದಿಂದಲೇ ಆರಂಭಗೊಳ್ಳಲಿ ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್ಬಿನ ಅಧ್ಯಕ್ಷ ಎಂ.ಎಂ. ಕುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್ಬಿನ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜನ್ಮದಿನಾಚರಣೆ ಅಂಗವಾಗಿ ಬಿಟ್ಟಂಗಾಲದ ಮುಖ್ಯ ರಸ್ತೆಯ ‘ಗ್ರಾಮ ಸ್ವಚ್ಛತಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಚ್ಛತೆಗೆ ಗ್ರಾಮ ಸ್ವಚ್ಛತೆ ಪರಿಕಲ್ಪನೆ ಬುನಾದಿ ಆಗಲಿದೆ. ಆದ್ದರಿಂದ ಸ್ವಚ್ಛತೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಲಿ ಎಂದರು.
ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್ಬಿನ ಸದಸ್ಯರು ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಗ್ರಾಮ ಸ್ವಚ್ಛತಾ ಕಾರ್ಯ ಆರಂಭಿಸಿದರು. ಈ ವೇಳೆ ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆಯ ಬದಿಯ ಬಿಟ್ಟಂಗಾಲದಲ್ಲಿ ಕುರುಚಲು ಕಾಡನ್ನು ಕಡಿದು ಸ್ವಚ್ಛಗೊಳಿಸಿದರು. ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ನಾಶಪಡಿಸಿದರು.
ಕಾರ್ಯಕ್ರಮದಲ್ಲಿ ಕೊಡವ ಫ್ಯಾಮಿಲಿ ಕ್ಲಬ್ಬಿನ ಕಾರ್ಯದರ್ಶಿ ಎನ್.ಎಂ. ಗಿಣಿ ಗಣಪತಿ, ಪದಾಧಿಕಾರಿಗಳಾದ ಅಪ್ಪಂಡೇರಂಡ ಪಿ. ದಿನೇಶ್, ಮುರುವಂಡ ಕುಟ್ಟಪ್ಪ, ಚಂದೂರ ಸಿ. ಸಂದೇಶ್ ತಿಮ್ಮಯ್ಯ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವ ಪಣವನ್ನು ತೊಡುವ ಮೂಲಕ ಗಾಂಧಿ ಜಯಂತಿಗೆ ಅರ್ಥ ಕಲ್ಪಿಸಬೇಕು ಎಂದು ಇಲ್ಲಿನ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 150ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧಿ ಜಯಂತಿಯಂದು ಶ್ರಮದಾನದ ಮೂಲಕ ಪ್ಲಾಸ್ಟಿಕ್ ಮುಕ್ತ, ಸ್ವಚ್ಛ ಸುಂದರ, ಹಸಿರು ಪರಿಸರ ನಿರ್ಮಾಣಕ್ಕಾಗಿ ಸಂಕಲ್ಪತೊಡುವ ಅಗತ್ಯ ಇದೆ. ಕಸ ಮುಕ್ತ ಮತ್ತು ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವ ಭರವಸೆಯೊಂದಿಗೆ ಕಂಕಣ ಬದ್ಧರಾಗಿ ಮುಂದಿನ ಪೀಳಿಗೆÉಗಾಗಿ ಭೂಮಿಯನ್ನು ರಕ್ಷಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಹಶೀಲ್ದಾರ್ ಗೋವಿಂದರಾಜ್ ಮಾತನಾಡಿದರು. ದೇಶದ ಮತ್ತೊಬ್ಬ ಧೀಮಂತ ನಾಯಕ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜೀವನ ಕ್ರಮವನ್ನು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಮಹಾತ್ಮಗಾಂಧಿ ಕುರಿತ ಚಲನಚಿತ್ರ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ವಾಲ್ನೂರು-ತ್ಯಾಗತ್ತೂರು: ಕಾನನಕಾಡು ಟಾಟಾ ಕಾಫಿಯ ನೌಕರರಾದ ರಿಚರ್ಡ್ ಮತ್ತು ತಂಡದವರು ಶ್ರೀಧರ್, ಗಣೇಶ್, ಮನು, ಮಣಿ, ಸೈಮನ್ ಮತ್ತು ಕೆಂಪರಾಜು ಅವರು ಸ್ವಯಂ ಸೇವಕರಾಗಿ ಶಾಲಾ ಆವರಣವನ್ನು ಶುಚಿಗೊಳಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.ಮಡಿಕೇರಿ: ಶಾಂತಿ, ಸತ್ಯ, ಅಹಿಂಸೆ ಮಾರ್ಗದ ಮೂಲಕ ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರು ಇಡೀ ವಿಶ್ವಕ್ಕೆ ಪಿತಾಮಹ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಮಹಾನ್ ಮಾನವತಾವಾದಿ, ಸಮಾಜವಾದಿಯಾಗಿ ಶಾಂತಿ, ಅಹಿಂಸೆ ಮೂಲಕ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಗಾಂಧೀಜಿಯವರ ತತ್ವಗಳು, ಸಿದ್ಧಾಂತಗಳು ಪ್ರತಿಯೊಬ್ಬರಿಗೂ ತಲಪಬೇಕು ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಗಾಂಧೀಜಿಯವರ ಸರಳತೆ, ಅಹಿಂಸೆ, ಸತ್ಯ, ಶಾಂತಿ, ಪ್ರೀತಿ ಸಮತೆಗಳ ಸಕಾರ ಮಾದರಿ ಎಂದು ನುಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರ ತರಲಾಗಿದ್ದ ‘ಪಾಪು-ಬಾಪು’ ಕಿರು ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ‘ಮಹಾತ್ಮ ಗಾಂಧೀಜಿ 150’ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಆಯುಷ್ಮಾನ್ ಆರೋಗ್ಯ ಕಾರ್ಡ್ ಮತ್ತು ಸಸಿ ವಿತರಣೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿ ಕುರಿತು ಗೀತಾಗಾಯನ ಕಾರ್ಯಕ್ರಮ ನಡೆಯಿತು. ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಪೌರಾಯುಕ್ತ ಎಂ.ಎಲ್. ರಮೇಶ್, ತಹಶೀಲ್ದಾರ್ ಮಹೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆಂಚಪ್ಪ, ಸರ್ವೋದಯ ಸಮಿತಿ ಸದಸ್ಯರು ಇತರರು ಇದ್ದರು.
ಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿಯನ್ನು ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇಶಾದ್ಯಂತ ಜಾರಿಯಾಗಿರುವ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಿ ಸ್ವಚ್ಛಮೇವ ಜಯತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ 9 ಜನ ಪೌರ ಕಾರ್ಮಿಕರುಗಳಾದ ಪರಮೇಶ್, ಮಾದೇವ, ನಂಜುಂಡ, ಶಂಕರ, ಮುತ್ತಪ್ಪ, ಗೌರಿ, ಪಾಪಮ್ಮ, ಜ್ಯೋತಿಗೆ ಸನ್ಮಾನ ಮಾಡಲಾಯಿತು. ಸಭಾ ಕಾರ್ಯಕ್ರಮಗಳ ನಂತರ ಗ್ರಾಮದ ಮುಖ್ಯ ರಸ್ತೆಗಲಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡದಿಂದ ಶ್ರಮದಾನ ಮಾಡಲಾಯಿತು. ಗ್ರಾಮವನ್ನು ಶುಚಿಗೊಳಿಸುವದರೊಂದಿಗೆ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳು, ಹೊಟೇಲ್ಗಳಿಗೆ ತೆರಳಿ ಒಂದು ಬಾರಿ ಉಪಯೋಗಿಸುವಂತಹ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಮಾಡದಂತೆ ತಿಳಿಸಲಾಯಿತು ಹಾಗೂ ಸಾರ್ವಜನಿಕ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಡಿಓ ಪುಟ್ಟರಾಜು, ಉಪಾಧ್ಯಕ್ಷೆ ಮಂಜುಳಾ ಸುರೇಶ್, ಸದಸ್ಯರಾದ ರಶೀದ್, ಅಮ್ಮತ್ತೀರ ಸುರೇಶ್, ಅನೀಸ್, ಅಣ್ಣೀರ ಹರೀಶ್, ಅಡ್ಡಂಡ ಸುನಿಲ್, ರಸಿಕ, ರೂಪ, ಕಾವೇರಮ್ಮ ಹಾಜರಿದ್ದರು.
ಕೂಡಿಗೆ: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು. ನಂತರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜು ಆವರಣಗಳನ್ನು ಹಾಗೂ ಮುಂಭಾಗದಲ್ಲಿ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಶಾಲಾ-ಕಾಲೇಜಿಗಳಿಗೆ ತೆರಳುವ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು ಸ್ವಚ್ಛಗೊಳಿಸಿದರು. ಕೂಡಿಗೆಯ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿಯ ಅಂಗವಾಗಿ ವಿವಿಧ ಭಾಷಣ ಸ್ವರ್ಧೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಕೂಡಿಗೆ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ನಿರ್ದೇಶಕರಾದ ಜನಾರ್ಧನ್, ರಾಮಸ್ವಾಮಿ, ಮಹೇಶ್, ಪ್ರಾಂಶುಪಾಲ ಮಹಲಿಂಗಯ್ಯ, ಉಪನ್ಯಾಸಕರಾದ ನಾಗಪ್ಪ ಏಲಕ್ಕಿಕಟ್ಟೆ, ಸತೀಶ್, ಹನುಮರಾಜ್, ಕಾವೇರಮ್ಮ, ಸೂಸಿತಂಗಚ್ಚಿ ಸೇರಿದಂತೆ ಉಪನ್ಯಾಸಕ ವೃಂದ, ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.