ಮಡಿಕೇರಿ, ಅ. 5: ನಗರದ ಶ್ರೀ ಕೋಟೆ ಗಣಪತಿ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿ ಮಯೂರನಾದ
ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಕೋಟೆ ಗಣಪತಿ ದಸರಾ ಮಂಟಪ ಸಮಿತಿ ಅಧ್ಯಕ್ಷ ಅನುರಾಗ್ ಕೆ. ರಾಜಾರಾಂ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಮಡಿಕೇರಿ ಪೂಜಾ ಲೈಟಿಂಗ್‍ನ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆಯನ್ನು ಮಡಿಕೇರಿ ಫ್ಯೂಚರ್ ಇವೆಂಟ್‍ನ ಲೋಕೇಶ್ ಮಾಡಲಿದ್ದಾರೆ. 23 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಪೂಜಾ ಲೈಟಿಂಗ್ಸ್‍ನ ರಘು ಮತ್ತು ತಂಡ ಕಲಾಕೃತಿಗಳನ್ನು ರಚಿಸಲಿದ್ದಾರೆ.
ಪ್ಲಾಟ್‍ಫಾರಂನ್ನು ಸಿದ್ದಾಪ್ಪಾಜಿ ಕ್ರಿಯೇಷನ್ಸ್‍ನ ಪುನೀತ್ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ವಿಷ್ಯುಲ್ ಆಟ್ರ್ಸ್‍ನ ಶರತ್ ಬಾಬು ಅಂಡ್ ಟೀಂ, ಜಿ.ಎನ್. ಬ್ರದರ್ಸ್‍ನ ಗಣೇಶ್ ಹಾಗೂ ನಿತಿನ್ ಮಾಡಲಿದ್ದಾರೆ. ಕಲಾಕೃತಿಗಳಿಗೆ ಚಲನ ವಲನವನ್ನು ಸಿದ್ದಾಪ್ಪಾಜಿ ಕ್ರಿಯೇಷನ್ಸ್‍ನ ಹೊನ್ನಪ್ಪ ಮತ್ತು ಸುರೇಶ್ ನೀಡಲಿದ್ದಾರೆ. ಫೈರ್ ಎಫೆಕ್ಟ್‍ನ್ನು ಟೀಂ-99ನ ರೆಟ್ರೋಟ್ರ್ಯಾಂಗಲ್ ತಂಡ ನೀಡಲಿದೆ ಎಂದು ಅನುರಾಗ್ ತಿಳಿಸಿದರು.
ಒಟ್ಟು 19.50 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವದರೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿ 365 ಸದಸ್ಯರ ತಂಡ ಶ್ರಮಿಸುತ್ತಿದೆ. ಚೆಟ್ಟಳ್ಳಿಯ ಚಂಡೆ ವಾದ್ಯ ಮಂಟಪವನ್ನು ಮುನ್ನಡೆಸಲಿದೆ ಎಂದು ಅನುರಾಗ್ ಮಾಹಿತಿಯಿತ್ತರು.
- ಉಜ್ವಲ್ ರಂಜಿತ್