ಮಡಿಕೇರಿ, ಅ. 5: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತಾವು ಮಾಡಿದ ವಿಜ್ಞಾನದ ಪ್ರಾತ್ಯಕ್ಷಿಕಾ ಮಾದರಿಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ಮಾಹಿತಿ ನೀಡುವ ಮೂಲಕ ನೋಡುಗರನ್ನು ರಂಜಿಸಿದರಲ್ಲದೆ, ತಮ್ಮ ವಿಜ್ಞಾನ ಜ್ಞಾನವನ್ನು ತೆರೆದಿಟ್ಟರು. ಸಮಾರಂಭದ ಮುಂಭಾಗದಲ್ಲೇ ಅಳವಡಿಸಲಾಗಿದ್ದ ರೇಸ್ ಟ್ರ್ಯಾಕ್‍ನಲ್ಲಿ ಪುಟಾಣಿ ವಾಹನಗಳನ್ನು ಮೊಬೈಲ್ ಮೂಲಕ ಚಲಾಯಿಸಿದ ಮಕ್ಕಳು ರೇಸ್ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಪೃಥ್ವಿಯಲ್ಲಿನ ನೀರಿನ ಮೂಲಗಳು, ನೀರಿನ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳ ಮಾದರಿಗಳನ್ನು ತಯಾರಿಸಿದ ವಿದ್ಯಾರ್ಥಿಗಳು ನೀರನ್ನು ಉಳಿಸುವ ಮಹತ್ವವನ್ನು ಸರ್ವರಿಗೆ ಸಾರಿದರು. ವಿದ್ಯಾರ್ಥಿಗಳಿಂದ ನೀರಿನ ಮಟ್ಟ ಸೂಚಕ, ಟೆಸ್ಲಾ ಕಾಯಿಲ್, ಕಾಫಿ ಹಾಗೂ ಕರಿಮೆಣಸುಗಳನ್ನು ಒಣಗಿಸಲು ಸೋಲಾರ್ ಡ್ರೈಯಿಂಗ್ ಯೂನಿಟ್, ಸರಳ ಏರ್‍ಗನ್, ಮಣ್ಣು ಫಲೀಕರಣದ ಯಂತ್ರ, ಟೈಟಾನಿಕ್‍ನಂತಹ ಭಾರೀ ಗಾತ್ರದ ಹಡಗು ಐಸ್‍ಬರ್ಗ್‍ಗೆ ಅಪ್ಪಳಿಸುವ ಪ್ರಾತ್ಯಕ್ಷಿಕ ಮಾದರಿಗಳು ಗಮನ ಸೆಳೆದವು.

ಬೀಟ್‍ರೂಟ್, ಅರಿಶಿನ, ದಾಳಿಂಬೆ, ಮೆಹೆಂದಿ ಬಳಸಿ ನೈಸರ್ಗಿಕ ಬಟ್ಟೆಯ ಬಣ್ಣಗಳನ್ನು ಪ್ರದರ್ಶಿಸುವ ಮೂಲಕ ರಾಸಾಯನಿಕ ಬಣ್ಣಗಳ ನಿಷೇಧದ ಮಹತ್ವ ಹಾಗೂ ತುಳಸಿ, ಪುದೀನ, ಶುಂಠಿಗಳ ಔಷಧಾತ್ಮಕ ಮೌಲ್ಯಗಳನ್ನು ಸಾರಿದರು.

ತುಳಸಿ ಟೀ, ಮಜ್ಜಿಗೆ, ಪ್ಯಾಷನ್ ಫ್ರೂಟ್‍ನ ಜ್ಯೂಸ್, ಪುದೀನ ಜ್ಯೂಸ್, ರಾಗಿ ಮಾಲ್ಟ್, ಕಡಲೆ ಚ್ಯಾಟ್ ಮುಂತಾದ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರಗಳನ್ನು ನೀಡುವ ಮೂಲಕ ಜಂಕ್‍ಫುಡ್ ಸೇವನೆಯ ನಿಯಂತ್ರಣಕ್ಕೆ ಪ್ರಾಮುಖ್ಯತೆ ನೀಡಿದರು.

ಆಪರ್ಚುನಿಟಿ ಶಾಲಾ ವಿದ್ಯಾರ್ಥಿಗಳು ಕೂಡಾ ಪಾಲ್ಗೊಂಡು ವೈಜ್ಞಾನಿಕ ಆವಿಷ್ಕಾರಗಳನ್ನು ವಿವರಿಸುವ ಮೂಲಕ ಸುಪ್ತ ಪ್ರತಿಭೆಗಳನ್ನು ತೆರೆದಿಟ್ಟರು.