ವೀರಾಜಪೇಟೆ, ಅ.4: ಕೊಡಗಿನ ಎಲ್ಲಾ ಸಹಕಾರ ಸಂಘಗಳು ಗಣಕೀಕರಣಗೊಳಿಸುವಂತೆ ಈಚೆಗೆ ಡಿಸಿಸಿ ಬ್ಯಾಂಕ್ ಮಹಾ ಸಭೆಯಲ್ಲಿ ತಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಕಾಕೋಟುಪರಂಬು ವಿ.ಎಸ್.ಎಸ್.ಎನ್.ನ ಅಧ್ಯಕ್ಷ ಪೂಳಂಡ ವಿನು ಪೆಮ್ಮಯ್ಯ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೆಮ್ಮಯ್ಯ ಅವರು ಸಹಕಾರ ಸಂಘದ ಎಲ್ಲ ವ್ಯವಹಾರವನ್ನು 2016ರಲ್ಲಿಯೇ ಗಣಕೀಕರಣಗೊಳಿಸಲು ಇಲ್ಲಿನ ಸನ್ಮ್ಯೆಕ್ರೊಟೆಕ್ ಕಂಪನಿಯ ಪ್ರತಿನಿಧಿಯೊಬ್ಬರು ಬೆಂಗಳೂರಿನ ಕಂಪನಿಯ ಮೂಲಕ ಅಳವಡಿಸಿ ಕೊಡಲಾಗುವದು ಎಂದು ಹೇಳಿ 16.12.2016 ರಂದು ಕಾಕೋಟುಪರಂಬು ವಿಜಯ ಬ್ಯಾಂಕ್ನಿಂದ ರೂ 65,550ಗಳ ಡಿ.ಡಿ.ಯನ್ನು ನೀಡಲಾಗಿದೆ. ಆದರೆ ಈವರೆಗೆ ಅವರುಗಳು ಯಾವದೇ ಕೆಲಸ ನಿರ್ವಹಿಸಿ ಕೊಟ್ಟಿಲ್ಲ. ಅನೇಕ ಬಾರಿ ಪತ್ರ ವ್ಯವಹಾರಗಳನ್ನು ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ. ಡಿಸಿಸಿ ಬ್ಯಾಂಕ್ನ ಮಹಾಸಭೆಯಲ್ಲಿ ಬ್ಯಾಂಕ್ನ ಆಡಳಿದ ಅಧೀನಕ್ಕೊಳಪಡುವ ಎಲ್ಲಾ ಸಹಕಾರ ಸಂಘಗಳು ಗಣಕೀಕರಣಗೊಳ್ಳಬೆಕು. ಗಣಕೀಕರಣಗೊಳಿಸಲು 4 ಕಂಪನಿಗಳು ಮುಂದೆ ಬಂದಿದ್ದು, ಅದರಲ್ಲಿ ಬೆಂಗಳೂರಿನ ಟೆಕ್ವರ್ಮ್ ಪ್ರೈವೆಟ್ ಲಿಮಿಟೆಡ್ ಕಂಪನಿ ಕೂಡ ಒಂದಾಗಿದೆ. ನಮ್ಮಲ್ಲಿ ಹಣ ಪಡೆದು ಗಣಕೀಕರಣಗೊಳಿಸದ ಕಾರಣ ಆ ಕಂಪನಿಯನ್ನು ಹೊರತುಪಡಿಸಿ ಉಳಿದ ಕಂಪನಿಗಳನ್ನು sಸಹಕಾರ ಸಂಘಗಳು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮೇವಡ ವಸ್ಮಾ ಕರುಂಬಯ್ಯ, ನಿರ್ದೇಶಕ ಮಂಡೇಟಿರ ಅನಿಲ್ ಅಯ್ಯಪ್ಪ, ಸದಸ್ಯ ಪ್ರವೀಣ್ ಪೊನ್ನಪ್ಪ ಉಪಸ್ಥಿತರಿದ್ದರು.