ಕುಶಾಲನಗರ, ಅ. 4: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಸ್ಥಳೀಯ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಿತು.
ಬಸವಪಟ್ಟಣದ ಶ್ರೀ ಬಸವಲಿಂಗ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಾತಿ, ಧರ್ಮ, ವರ್ಗ, ವರ್ಣವನ್ನು ಮೀರಿದ ಮಾನವೀಯ ನೆಲಗಟ್ಟಿನ ಬದುಕು ಅನಿವಾರ್ಯವಿದೆ. ನನ್ನ ಧರ್ಮ ಶ್ರೇಷ್ಠ, ಉಳಿದ ಧರ್ಮಗಳು ಕೂಡ ಅದಕ್ಕಿಂತ ಶ್ರೇಷ್ಠ ಎಂಬದನ್ನು ಅರಿತಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ. ಒಂದೇ ವೇದಿಕೆಯಲ್ಲಿ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಗುರುತಿಸಿ ಅವರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನೆ ಮಾಡುವದು ಮಹತ್ಕಾರ್ಯ ಎಂದರು.
ಕುಶಾಲನಗರದ ತಪೋವನದ ಧಾರ್ಮಿಕ ಗುರುಗಳಾದ ಫಾದರ್ ಜೀವನ್ ತಾವೋ ಮಾತನಾಡಿ, ಅಂಧಕಾರವನ್ನು ತೊಲಗಿಸಿ ಎಲ್ಲೆಡೆ ಜ್ಞಾನದ ಬೆಳಕು ಹರಡುವ ಪ್ರಯತ್ನ ಮಾಡಬೇಕು. ಎಲ್ಲಾ ಜಾತಿ, ಧರ್ಮದವರು ಕುಟುಂಬ ಸದಸ್ಯರಂತೆ ಭ್ರಾತೃತ್ವ ಮೆರೆದು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಬೈಲಕುಪ್ಪೆ ಟಿಬೆಟಿಯನ್ ಕೇಂದ್ರದ ಸೆರಾಜೆ ಮೋನಾಸ್ಟರಿಯ ಧರ್ಮಗುರು ಶರಿಂಗ್ ಮಾಂಗ್ ಮಾತನಾಡಿ, ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಜೀವಿಸಬೇಕಿದೆ. ಎಲ್ಲಾ ಜೀವಿಗಳನ್ನು ಪ್ರೀತಿಸುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುವ ಮನಸ್ಥಿತಿ ಹೊಂದುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ನಜೀರ್ ಅಹಮ್ಮದ್, ಕುಶಾಲನಗರದ ಜೈನ ಧರ್ಮದ ಪ್ರತಿನಿಧಿಯಾಗಿ ಸ್ಮಿತಾ ಮಾತನಾಡಿದರು. ಕುಶಾಲನಗರ ರೋಟರಿ ಅಧ್ಯಕ್ಷ ಅಶೋಕ್ ಅವರ ನೇತೃತ್ವದಲ್ಲಿ ಫಾತಿಮಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಧಾರ್ಮಿಕ ಪಠಣ, ಭಕ್ತಿಗೀತೆಗಳ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಅಂತರರಾಷ್ಟ್ರೀಯ ಹ್ಯಾಂಡ್ ಬಾಲ್ ಕ್ರೀಡಾಪಟು ಕುಶಾಲನಗರದ ಕೆ.ವಿ. ಹರ್ಷಿತ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಗವರ್ನರ್ ಜೋಸೆಫ್ ಮ್ಯಾಥ್ಯು, ರೋಟರಿ ಹಿರಿಯ ಸದಸ್ಯರಾದ ಸುರೇಶ್ ಚೆಂಗಪ್ಪ, ನಾಗೇಶ್, ಎಸ್.ಕೆ. ಸತೀಶ್, ಕ್ರ್ರಿಜ್ವಲ್ ಕೋಟ್ಸ್, ರಾಜಶೇಖರ್, ಚಂದ್ರಶೇಖರ್, ಶೋಭಾ ಸತೀಶ್, ಶೋಭ ಸಾತಪ್ಪನ್, ಡಾ. ಹರಿ ಎ. ಶೆಟ್ಟಿ, ಆರತಿ ಶೆಟ್ಟಿ ಇದ್ದರು.
ಕುಶಾಲನಗರದ ವಿವೇಕಾನಂದ, ಎಂಜಿಎಂ, ಅನುಗ್ರಹ ಕಾಲೇಜು, ಫಾತಿಮಾ ಪ್ರೌಢಶಾಲೆ ವಿದ್ಯಾರ್ಥಿಗಳು, ಉಪನ್ಯಾಸಕ ಮತ್ತು ಶಿಕ್ಷಕ ವೃಂದ ಪಾಲ್ಗೊಂಡಿದ್ದರು.