ಕೂಡಿಗೆ, ಅ. 2: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಹುದುಗೂರು ಗ್ರಾಮದ ಗ್ರಾಮಸ್ಥರು ಮತ್ತು ಯುವಕ ಸಂಘದವರು ಶ್ರಮದಾನ ಕಾರ್ಯ ನಡೆಸಿದರು. ‘ಕ್ಲೀನ್ ಗ್ರಾಮ’ ಎಂಬ ಕಾರ್ಯಕ್ರಮದಡಿ ಗ್ರಾಮಸ್ಥರು ಮತ್ತು ಯುವಕ ಸಂಘ, ನೀರು ಬಳಕೆದಾರರ ಸಂಘ ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಹುದುಗೂರಿನಿಂದ ಯಡವನಾಡುವರೆಗೆ ಮೂರು ಕಿ.ಮೀವರೆಗೆ ರಸ್ತೆಯಎರಡೂ ಬದಿಯಲ್ಲಿರುವ ಗಿಡಗಂಟಿಗಳನ್ನು ಹಾಗೂ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.

ಈ ತಂಡವು ಕಳೆದೆರಡು ತಿಂಗಳುಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಗ್ರಾಮ ವ್ಯಾಪ್ತಿಗೆ ಒಳಪಡುವ ಬಸ್ ತಂಗುದಾಣ ಮತ್ತು ಸೇತುವೆಗಳ ದುರಸ್ತಿ ಮತ್ತು ಸುಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದೆ. ಅಕ್ಟೋಬರ್ 2ರ ಒಳಗಾಗಿ ಕ್ಲೀನ್ ಹುದುಗೂರು ಗ್ರಾಮವಾಗಿ ಮಾರ್ಪಡಿಸಲು ಪಣತೊಟ್ಟಿದ್ದು, ಪ್ರತಿ ಭಾನುವಾರ ಯುವಕರು ಸ್ವಯಂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್, ಯುವಕ ಸಂಘದ ಅಧ್ಯಕ್ಷ ಗಿರೀಶ್, ಗ್ರಾಮದ ಪ್ರಮುಖರಾದ ಮುತ್ತಪ್ಪ, ನವೀನ, ಮಲ್ಲಪ್ಪ, ನಾಗರಾಜು, ರಾಜಣ್ಣ, ಗಿರಿಯಪ್ಪ, ಕರಿಯಪ್ಪ, ದಿನೇಶ್, ನಿತಿನ್, ಪ್ರವೀಣ ಸೇರಿದಂತೆ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಮಸ್ಥರು ಈ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದರು.