ಶನಿವಾರಸಂತೆ, ಅ. 1: ಕಾಫಿ ಬೆಳೆಯುವ ನಾಡಿನಲ್ಲಿ ಪ್ರತಿಯೊಬ್ಬರೂ ಕಾಫಿ ಸೇವನೆ ಮಾಡುವದರಿಂದ ಕಾಫಿ ಉದ್ದಿಮೆ ಅಭಿವೃದ್ಧಿ ಹೊಂದುತ್ತದೆ ಎಂದು ಹಾಸನ ಕಾಫಿ ಮಂಡಳಿ ಜಂಟಿ ನಿರ್ದೇಶಕ ಗುಡ್ಡೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಪಟ್ಟಣದ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಸಹಭಾಗಿತ್ವದಲ್ಲಿ ಸಮೀಪದ ಗುಡುಗಳಲೆಯ ಮಲ್ನಾಡ್ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಬೆಳೆಯಾದ ಕಾಫಿ ಅಂತರ್ರಾಷ್ಟ್ರೀಯ ಉದ್ದಿಮೆಯಾಗಿದೆ. ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿಯನ್ನು ಬೆಳೆಯುತ್ತಿದ್ದರೂ, ಭಾರತದ ಕಾಫಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿರುವದನ್ನು ಬೆಳೆಗಾರರು ಹಾಗೂ ಉದ್ಯಮಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಬೆಳೆಗಾರರ ಸಂಕಷ್ಟ ಇತ್ಯಾದಿ ವಿಷಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಅಂತರ್ರಾಷ್ಟ್ರೀಯ ಕಾಫಿದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಮಾತನಾಡಿ, ರೈತರ ಉತ್ಪಾದಕ ಸಂಸ್ಥೆ ಹಾಗೂ ಕಾಫಿ ಉದ್ದಿಮೆ ಕುರಿತು ಮಾಹಿತಿ ನೀಡಿದರು. ಮಡಿಕೇರಿ ಕಾಫಿ ಮಂಡಳಿ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಮಾತನಾಡಿ, ಕಾಫಿ ಮಂಡಳಿಯಿಂದ ದೊರಕುವ ಸವಲತ್ತುಗಳ ಬಗ್ಗೆ ಹಾಗೂ ಸೋಮವಾರಪೇಟೆ ಕಾಫಿ ಮಂಡಳಿ ಎಸ್.ಎಲ್.ಓ. ಮುರಳೀಧರ್ ಮಾತನಾಡಿ, ರೈತರ ಕೃಷಿ ಉತ್ಪಾದಕ - ಉತ್ಪನ್ನಗಳಿಂದ ದಿನನಿತ್ಯದ ಪ್ಲಾಸ್ಟಿಕ್ ತ್ಯಜಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಮಾತನಾಡಿದರು. ಕೆಡಿಎಫ್ ಅಧಿಕಾರಿ ನಂದ ಬೆಳ್ಳಿಯಪ್ಪ, ದಿನೇಶ್, ಬೋಪಣ್ಣ, ಶನಿವಾರಸಂತೆ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್, ಬೆಳೆಗಾರರ ಸಂಘದ ಕಾರ್ಯದರ್ಶಿ ಮಲ್ಲೇಗೌಡ, ನಿರ್ದೇಶಕರಾದ ಎಚ್.ವಿ. ದಿವಾಕರ್, ಬಿ.ಕೆ. ಚಿಣ್ಣಪ್ಪ, ಎಸ್.ಎಂ. ಉಮಾಶಂಕರ್, ಎನ್.ಬಿ. ನಾಗಪ್ಪ, ಎಸ್.ಸಿ. ಶರತ್ ಶೇಖರ್, ಡಿ.ಬಿ. ಧರ್ಮಪ್ಪ, ಎಚ್.ಎಸ್. ಸುಬ್ಬಪ್ಪ, ಅರವಿಂದ್, ರಂಗಸ್ವಾಮಿ ಹಾಗೂ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಂತರ್ರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಸಾರ್ವಜನಿಕರಿಗೆ, ಬಸ್ ಇತ್ಯಾದಿ ಖಾಸಗಿ ವಾಹನಗಳ ಪ್ರಯಾಣಿಕರಿಗೆ ಕಾಫಿ ಮತ್ತು ಬಿಸ್ಕತ್ ವಿತರಿಸಲಾಯಿತು.