ಮಡಿಕೇರಿ, ಸೆ. 29: ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಕೊಡಗು ಮೂಲದ ವ್ಯಕ್ತಿಯೊಬ್ಬರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿ ದ್ದಾರೆ. ಅನಂತರದಲ್ಲಿ ಸಾವಿನ ಬಗ್ಗೆ ಯಾರಿಗೂ ತಿಳಿಸದೆ ಮೃತ ವ್ಯಕ್ತಿಯ ಪತ್ನಿ ಹಾಗೂ ಇಬ್ಬರು ಮಕ್ಕಳು 2 ದಿನಗಳ ಬಳಿಕ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಹಾಗೂ ಮಂಗಳೂರಿನ ಬಂಟ್ವಾಳ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೂಲತಃ ಮಡಿಕೇರಿ ತಾಲೂಕು ಚೇರಂಬಾಣೆ ಕೋಪಟ್ಟಿ ಗ್ರಾಮದ ಕಲ್ಮಾಡಂಡ ಕುಟುಂಬದವರಾದ; ಮೈಸೂರು ವಿಜಯನಗರದ 4ನೇ ಬ್ಲಾಕ್ ನಿವಾಸಿ ಕಿಶನ್ ಮಂದಣ್ಣ ಶುಕ್ರವಾರ ಮೈಸೂರಿನ ನಿವಾಸದಲ್ಲಿ ಮೃತರಾಗಿದ್ದು; ಅವರ ಶವವು ಕಂಬಳಿ ಸುತ್ತಿಕೊಂಡು ಇದ್ದಿರುವದು ಗೋಚರಿ ಸಿದೆ ಎಂದು ವಿಜಯನಗರ ಠಾಣೆ ಪೊಲೀಸರು ಖಚಿತಪಡಿಸಿದ್ದಾರೆ.ಈ ಸಂಬಂಧ ಮೃತರ ಸಂಬಂಧಿ ಅಯ್ಯಪ್ಪ ನೀಡಿರುವ ಪುಕಾರಿನಲ್ಲಿ; ದುರ್ದೈವಿ ಕಿಶನ್ ಮಂದಣ್ಣ (65) ಹೃದಯಾಘಾತದಿಂದ ಸಾವನ್ನಪ್ಪಿರುವ ರೆಂದು ಹೇಳಿಕೆ ನೀಡಿರುವದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಮೃತರ ಪತ್ನಿ ಕವಿತಾ ಮಂದಣ್ಣ (55) ದಕ್ಷಿಣ ಕೊಡಗಿನ ಪುಚ್ಚಿಮಾಡ ಕುಟುಂಬದ ತವರುಮನೆ ಸೇರಿದವರಾಗಿದ್ದಾರೆ. ನಿನ್ನೆ ರಾತ್ರಿ ತಮ್ಮ ಸೋದರ ಸೋಮಯ್ಯ ಎಂಬವರಿಗೆ ಅಂತಿಮವಾಗಿ ಕರೆ ಮಾಡಿದ್ದು; ಆತ್ಮಹತ್ಯೆಯ ಸುಳಿವು ನೀಡಿರುವರೆನ್ನಲಾಗಿದೆ. ಅನಂತರದಲ್ಲಿ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಹೊಳೆ ಸೇತುವೆ ಬಳಿ ಕಾರು (ಕೆ.ಎ.09 ಎಂ.ಎ. 489) ನಿಲ್ಲಿಸಿ; ತನ್ನ ಇಬ್ಬರು ಮಕ್ಕಳಾದ ಕೌಶಿಕ್ (29) ಹಾಗೂ ಕಲ್ಪಿತಾ (27) ಸಹಿತ ಎರಡು ಸಾಕು ನಾಯಿಗಳೊಂದಿಗೆ ನದಿಗೆ ಹಾರಿದ್ದಾರೆ.
ರಾತ್ರಿ 10.45ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಅದೇ ಮಾರ್ಗವಾಗಿ ಬರುತ್ತಿದ್ದ ಮೀನುಗಾರ ಮಹಮ್ಮದ್ ಹಾಗೂ ಇತರರು ದೃಶ್ಯವನ್ನು ಕಣ್ಣಾರೆ ಕಂಡು ತಾಯಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಕೌಶಿಕ್ ಹಾಗೂ ಕಲ್ಪಿತಾ ದೇಹಗಳು ನಾಯಿಯೊಂದರ ಸಹಿತ ಕೊಚ್ಚಿ ಹೋಗಿದೆ. ಈ ವೇಳೆ ಕವಿತಾ ಅವರನ್ನು ನದಿಯಿಂದ ರಕ್ಷಿಸಿ; ಬಂಟ್ವಾಳ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ. ವಿಷಯ ತಿಳಿದ ಬಂಟ್ವಾಳ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ; ಅಗ್ನಿಶಾಮಕ ದಳ ಸಹಿತ ಸಾರ್ವಜನಿಕರು ರಾತ್ರಿಯೇ ಹುಡುಕಾಟ ಆರಂಭಿಸಿದರೂ ಯಾವದೇ ಸುಳಿವು ಲಭಿಸಿಲ್ಲ.
ಮಗಳ ಶವಪತ್ತೆ : ಈ ನಡುವೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಗಳು ಕಲ್ಪಿತಾಳ ಶವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಇನ್ನೊಳಿ ಎಂಬಲ್ಲಿ ಪತ್ತೆಯಾಗಿದ್ದು; ಆ ಸಂಬಂಧ ಅಲ್ಲಿನ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ದುರ್ದೈವಿ ಕುಟುಂಬದ ನಾಯಿಯೊಂದು ಸಹಿತ ಕಾರನ್ನು ಬಂಟ್ವಾಳ ಠಾಣೆಯಲ್ಲಿ ಇರಿಸಲಾಗಿದೆ.
ಪತ್ತೆಯಾಗದ ಶವ : ಈ ಸಂಜೆಯ ತನಕವೂ ಮೃತ ಕೌಶಿಕ್ ಶವ ಪತ್ತೆಯಾಗದೆ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ ಎಂದು ಠಾಣಾಧಿಕಾರಿ ಚಂದ್ರಶೇಖರ್ ಸುಳಿವು ನೀಡಿದ್ದಾರೆ.
ಕುಟುಂಬ-ಬಂಧುವರ್ಗ ಆತಂಕ: ಈ ನಡುವೆ ಮೈಸೂರಿನ ಮನೆಯಲ್ಲಿ ಕಿಶನ್ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು; ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು; ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವದಾಗಿ ಸ್ಪಷ್ಟಪಡಿಸಿದ್ದಾರೆ. ಮೃತ ಕುಟುಂಬದ ಸಂಬಂಧಿಕರು; ಬಂಧುವರ್ಗ ಆತಂಕದೊಂದಿಗೆ ಸಾವಿನ ಕಾರಣಕ್ಕಾಗಿ ಹಾತೊರೆಯುತ್ತಿ ದ್ದಾರೆ. ನೈಜಾಂಶ ಪೊಲೀಸ್ ತನಿಖೆಯಿಂದ ಹೊರಬೀಳಬೇಕಿದೆ.