ಕರಿಕೆ, ಸೆ. 29: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿಗಳಾದ ಶಿವಪ್ರಕಾಶ್ ವಿ. ಪಾಟೀಲ್ ಸಮ್ಮುಖದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ನಡೆಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಕೆ.ಜೆ. ಕಳೆದ ಗ್ರಾಮಸಭೆಯ ವರದಿಯನ್ನು ನೀಡಿದರು. ನಂತರ ನಡೆದ ಸಭಾನಡಾವಳಿ ಅನುಷ್ಠಾನದ ಚರ್ಚೆಯ ಬಗ್ಗೆ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೋಡಿ ಪೊನ್ನಪ್ಪ, ಕಳೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳ ಮಟ್ಟದಲ್ಲಿ ಪರಿಹರಿಸಲಾಗದ ಗಂಭೀರ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪರಿಹಾರ ಸಾಧ್ಯ. ಇದಕ್ಕೆ ಒಂದು ಸಮಿತಿ ರಚಿಸಿ ನಿಯೋಗ ತೆರಳುವಂತೆ ತೀರ್ಮಾನ ಮಾಡಲಾಗಿತ್ತು. ಇದು ಇವತ್ತಿನ ನಿರ್ಣಯ ಮಂಡಿಸಿದಾಗ ನಾಪತ್ತೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಗಡಿ ಭಾಗದ ಕರಿಕೆ ಗ್ರಾಮವು ಹಲವಾರು ವರ್ಷಗಳಿಂದ ಖಾಯಂ ವೈದ್ಯರಿಲ್ಲದೆ ಪರದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನೂತನ ವೈದ್ಯರನ್ನು ನೇಮಿಸುವಲ್ಲಿ ಸಹಕರಿಸಿದ ಪಂಚಾಯತಿ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮದ ನಿರೀಕ್ಷಣಾ ಮಂದಿರ ಬಸ್ ನಿಲ್ದಾಣದ ಜಾಗದ ದುಸ್ಥಿತಿಯ ಬಗ್ಗೆ ಪ್ರತಿ ಗ್ರಾಮ ಸಭೆsÀಯಲ್ಲಿ ಚರ್ಚೆ ನಡೆಸಿ ಅಭಿವೃದ್ಧಿಯ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರೂ ಯಾವದೇ ಕ್ರಮ ವಹಿಸದಿರುವ ಬಗ್ಗೆ ನಿರೀಕ್ಷಣಾ ಮಂದಿರ ಗ್ರಾಮ ಪಂಚಾಯಿತಿಯ ಮೂಗಿನ ನೇರದಲ್ಲಿದ್ದರೂ ಪಂಚಾಯತಿ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸದಿರುವುದು ಗ್ರಾಮ ಪಂಚಾಯಿತಿ ಆಡಳಿತವನ್ನು ಎತ್ತಿ ತೋರಿಸುತ್ತದೆ ಎಂದರು. ಮತ್ತೋರ್ವ ಮಾಜಿ ಅಧ್ಯಕ್ಷ ಹೊಸಮನೆ ಹರೀಶ್ ಮಾತನಾಡಿ, ಪಂಚಾಯಿತಿಗೆ ಒಳಪಟ್ಟ ಗ್ರಾಮೀಣ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಲು ಕೂಡಲೇ ಕ್ರಮಕೈಗೊಳ್ಳಿ. ಗ್ರಾಮಕ್ಕೆ ಸಂಜೆಯ ವೇಳೆಯಲ್ಲಿ ಒಂದು ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಲಿಸಲು ಗಮನಹರಿಸುವಂತೆ ಮನವಿ ಮಾಡಿದರು. ಪಂಚಾಯಿತಿ ಸದಸ್ಯ ಬೇಕಲ್ ರಮಾನಾಥ ಮಧ್ಯ ಪ್ರವೇಶಿಸಿ ಜಿಲ್ಲೆಯಲ್ಲಿ ವಿಭಾಗೀಯ ನಿಯಂತ್ರಣ ಕಚೇರಿ ಇರುವದಿಲ್ಲ. ಅಲ್ಲದೆ ಕರಿಕೆ ಭಾಗಮಂಡಲ ರಸ್ತೆ ಗುಡ್ಡಗಾಡಿನಿಂದ ಕೂಡಿದ ಕಾರಣ ಬಸ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಕಂದಾಯ ಇಲಾಖೆಯ ಅಧಿಕಾರಿ ಪ್ರಭಾಕರ್ ಮಾತನಾಡಿ, ಇಲಾಖೆಯ ಸೌಲಭ್ಯಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ನಿರ್ಗತಿಕ, ಅಂಗವಿಕಲ, ಮನಸ್ವಿನಿ ವೇತನ, ರಾಷ್ಟ್ರೀಯ ಕುಟುಂಬ ಪಿಂಚಣಿ ಯೋಜನೆ ಜನನ ಮರಣ ಪತ್ರ, ಅತಿವೃಷ್ಟಿ ಪರಿಹಾರದ ಕುರಿತು ಮಾಹಿತಿ ನೀಡಿದರು. ಪಂಚಾಯಿತಿ ವಸತಿ ಯೋಜನೆಗೆ ಆದಾಯ ಮಿತಿ 32 ಸಾವಿರ ಇದ್ದು, ಬಿಪಿಎಲ್ ಕುಟುಂಬಕ್ಕೆ ವಾರ್ಷಿಕ ಆದಾಯ ಒಂದು ಲಕ್ಷದ ಇಪ್ಪತ್ತು ಸಾವಿರ ಮಿತಿ ಇರುವದರಿಂದ ವಸತಿ ಯೋಜನೆ ಪಡೆಯಲು ಆಗುತ್ತಿಲ್ಲ. ಈ ಮಾನದಂಡ ಸರಿಪಡಿಸಲು ಸರಕಾರಕ್ಕೆ ಪತ್ರ ಬರೆಯಲು ಗ್ರಾಮಸ್ಥರು ನಿರ್ಣಯ ಕೈಗೊಂಡರು.

ಪ್ರಧಾನಮಂತ್ರಿ ಕಿಸಾನ್ ಮಾನ್‍ಧನ್ ಯೋಜನೆಯಡಿಯಲ್ಲಿ 18 ರಿಂದ 40 ವರ್ಷದೊಳಗಿನ ಕೃಷಿಕರು ಹಾಗೂ ರೈತ ಮಹಿಳೆಯರು ನೊಂದಾಯಿಸಿಕೊಳ್ಳಬಹುದು. ಇದರಿಂದ ಅವರ ಖಾತೆಯಿಂದ ಮಾಸಿಕ ರೂ. 300 ಈ ಯೋಜನೆಗೆ ಜಮೆಯಾಗಲಿದ್ದು, ಇದರಿಂದಾಗಿ 60 ವರ್ಷ ಆದಾಗ ತಿಂಗಳಿಗೆ ಮೂರು ಸಾವಿರ ಮಾಸಿಕ ಪಿಂಚಣಿ ಪಡೆಯಲು ಸಾಧ್ಯ ಎಂದರು. ಗಿರಿಜನ ಉಪ ಯೋಜನೆಯಡಿಯಲ್ಲಿ ಆಡು ಹಾಗೂ ಪಶು ವಿತರಣೆಯಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ಫಲಾನುಭವಿ ಬಳಿ ಹಸು ಇಲ್ಲದಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಶುವೈದ್ಯಾಧಿಕಾರಿಗೆ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಸೂಚಿಸಿದರು. ಅರಣ್ಯ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಇಲಾಖೆಯ ಸಿಬಂದಿ ವಿರುದ್ಧ ಹರಿಹಾಯ್ದು ಭಾಗಮಂಡಲ ಕರಿಕೆ ರಸ್ತೆಯ ಅರಣ್ಯದೊಳಗಿನ ಜಲಪಾತಗಳ ಬಳಿ ಕೆಲವರು ಅರೆಬೆತ್ತಲಾಗಿ ಪಾನಮತ್ತರಾಗಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ಮಹಿಳೆಯರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.

ಅಲ್ಲದೆ ಗಡಿಭಾಗದ ತನಿಖಾ ಗೇಟ್ ಯಾವಾಗಲು ತೆರೆದಿರುತ್ತಿದ್ದು, ಕೇರಳದಿಂದ ರಾಜರೋಷವಾಗಿ ಕೋಳಿ ತ್ಯಾಜ್ಯ, ಇತರ ತ್ಯಾಜ್ಯಗಳನ್ನು ಅರಣ್ಯದೊಳಗೆ ಎಸೆಯುತ್ತಿದ್ದರೂ, ಇಲಾಖೆ ಮಾತ್ರ ಕ್ರಮ ವಹಿಸದಿರುವದು ಇಲಾಖೆಯ ಕಾರ್ಯ ವೈಖರಿಗೆ ಸಾಕ್ಷಿ ಎಂದರು.

ಪೊಲೀಸ್ ಇಲಾಖೆ ಕೂಡ ಪಾನಮತ್ತರಾಗಿ ವಾಹನ ಚಾಲನೆ, ಪರವಾನಿಗೆ ರಹಿತ ಚಾಲನೆ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಯತ್ತ ಗಮನ ಹರಿಸುವಂತೆ ಗ್ರಾಮಸ್ಥರು ಸಲಹೆ ನೀಡಿದರು.

ಇತರ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸೌಲಭ್ಯಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸೋಲಿ ಜಾರ್ಜ್, ಸದಸ್ಯರುಗಳಾದ ಬೇಕಲ್ ಹರಿಪ್ರಸಾದ್, ಉಷಾ ಕುಮಾರಿ, ಜಯಂತಿ, ವೀಣಾ ಕುಮಾರಿ, ಆಯೀಷಾ, ರಾಜೇಶ್ವರಿ, ಪುರುಷೋತ್ತಮ ಸೇರಿದಂತೆ ಇತರೆ ಸದಸ್ಯರು ಇಲಾಖೆಯ ಸಿಬ್ಬಂದಿ ಹಾಜರಿದ್ದರು.

-ಹೊದ್ದೆಟ್ಟಿ ಸುಧೀರ್