ವೀರಾಜಪೇಟೆ, ಸೆ. 29: ವೀರಾಜಪೇಟೆ-ಅಮ್ಮತ್ತಿ ಹೋಬಳಿಯ ವಿದ್ಯುತ್ ಅದಾಲತ್ ಚೆಸ್ಕಾಂನ ಸಹಾಯಕ ಅಭಿಯಂತರ ಸುರೇಶ್ ಅಧ್ಯಕ್ಷತೆಯಲ್ಲಿ ಚೆಸ್ಕಾಂ ಕಚೇರಿಯಲ್ಲಿ ನಡೆಯಿತು.

ಅದಾಲತ್‍ನಲ್ಲಿ ಬಹುತೇಕರು ಚೆಸ್ಕಾಂ ಸಿಬ್ಬಂದಿ ಹರೀಶ್ ಹಾಗೂ ಲೈನ್‍ಮ್ಯಾನ್ ಯೋಗರಾಜ ಅವರ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೇವಣಗೇರಿಯ ಐ.ಎಸ್. ಪೂಣಚ್ಚ ಅವರು 2014 ರಲ್ಲಿ ಮೀಟರ್ ತೆಗೆಸಲು ಅರ್ಜಿ ನೀಡಿದರು ಸಿಬ್ಬಂದಿ ಕಡತವನ್ನು ವಿಲೇವಾರಿ ಮಾಡಲಿಲ್ಲ. 2019ರ ಫೆಬ್ರವರಿಯಲ್ಲಿ 2800 ರೂಪಾಯಿಗೂ ಬಾಕಿ ಇದೆ ಎಂದು ಬಿಲ್ಲು ಕಳುಹಿಸಲಾಗಿದೆ. ಇಲಾಖೆ ಕಳುಹಿಸಿದ ಬಿಲ್ಲನ್ನು ಪಾವತಿಸಿದ ನಂತರ ಮೀಟರ್ ರದ್ದುಗೊಳಿಸಲು 100 ಛಾಪಾ ಕಾಗದದಲ್ಲಿ ಅಗ್ರಿಮೆಂಟ್ ಮಾಡಿಕೊಟ್ಟರು. ಮೀಟರ್ ಸಂಪರ್ಕ ಕಡಿತಗೊಳಿಸದೆ ಪುನಃ ಬಿಲ್ಲು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಸೆಸ್ಕಾಂನ ಜಿಲ್ಲಾ ಅಭಿಯಂತರ ಲೆಕ್ಕ ಸಿಬ್ಬಂದಿಯನ್ನು ಕರೆದು ಕೂಡಲೇ ಸರಿಪಡಿಸುವಂತೆ ಆದೇಶಿಸಿದರು.

ಅದಾಲತ್‍ನಲ್ಲಿ ಅಮ್ಮತ್ತಿ, ಸಿದ್ದಾಪುರ, ಬಿಟ್ಟಂಗಾಲ, ಬೆಳ್ಳರಿಮಾಡು, ಕಾಕೋಟುರಂಬು ಭಾಗಗಳಿಂದ ಗ್ರಾಹಕರು ಆಗಮಿಸಿ ದೂರು ನೀಡಿದರು. ಬಹುತೇಕರು ಸರಿಯಾದ ಸಮಯಕ್ಕೆ ಬಿಲ್ಲು ಪಾವತಿಯಾಗುತ್ತಿಲ್ಲ. ಸಿದ್ದಾಪುರ ಅಮ್ಮತ್ತಿ ಭಾಗಗಳಿಗೆ ಆನೆಕಾಟ ಎಂದು ಬಿಲ್ಲ್ ಕಲೆಕ್ಟರ್‍ಗಳು ಬರುತ್ತಿಲ್ಲ. ಎರಡು ಮೂರು-ತಿಂಗಳು ಬಿಲ್ಲು ಪಾವತಿಸದಿದ್ದರೆ ವಿದ್ಯುತ್ ಕಡಿತ ಮಾಡುತ್ತಾರೆ. ಇಲಾಖಾ ಸಿಬ್ಬಂದಿಗಳೂ ಮಾಡುವ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುತ್ತಾರೆ ಎಂದು ಆರೋಪಿಸಿದರು.

ಬಹುತೇಕ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳದಲ್ಲಿ ಬಗೆಹರಿಸಿದರು. ಜಿಲ್ಲಾ ಅಭಿಯಂತರ ಸೋಮಶೇಖರ್ ಮಾತನಾಡಿ, ಕೇಂದ್ರದ ದೀನ್ ದಯಾಳ್ ಉಪಾಧ್ಯಾಯ ಹಾಗೂ ಸೌಭಾಗ್ಯ ಯೋಜನೆಯಲ್ಲಿ ವೀರಾಜಪೇಟೆ ವಿಭಾಗದ ತಟ್ಟಳ್ಳಿ, ಚೆನ್ನಂಗೊಲ್ಲಿ ಎರಡು ಕಾಲೋನಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಲೋನಿಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ.

ಜಿಲ್ಲೆಯ ನಗರ ಪ್ರದೇಶಗಳಲ್ಲಿ ಐಪಿಡಿಎಸ್ ಯೋಜನೆಯಲ್ಲಿ ಪಟ್ಟಣಕ್ಕೆ 19 ಕೋಟಿ, ದೀನ್ ದಯಾಳ್ ಉಪಾಧ್ಯಾಯ ಯೋಜನೆಯಲ್ಲಿ ರೂ. 14 ಕೋಟಿ, ಸೌಭಾಗ್ಯ ಯೋಜನೆಯಲ್ಲಿ ರೂ. 20 ಕೋಟಿ ಕಾಮಾಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಹಾಯಕ ಕಾರ್ಯಪಾಲ ಅಭಿಯಂತರ ಸುರೇಶ್ ಮಾತನಾಡಿ, ಭಾಗ್ಯಜ್ಯೋತಿ ಐ.ಪಿ. ಸೆಟ್ ಯೋಜನೆಯಲ್ಲಿ ಎಸ್‍ಸಿ-ಎಸ್‍ಟಿ ಫಲಾನುಭವಿಗಳು ಸರ್ಕಾರದ ಇತರ ಯೋಜನೆಗಳಿಗೆ ಆದಾರ್ ಕಾರ್ಡ್, ಆರ್.ಡಿ. ಸಂಖ್ಯೆ. ಬ್ಯಾಂಕ್ ಪಾಸ್ ಪುಸ್ತಕದ ನಕಲನ್ನು ಕಚೇರಿಗೆ ನೀಡುವಂತೆ ಹೇಳಿದರು. ಸಭೆಯಲ್ಲಿ ಜೂನಿಯರ್ ಇಂಜಿನಿಯರ್‍ಗಳಾದ ದಿಲೀಪ್, ಶಿವನಂದಾ ಪಾಟೀಲ್ ಉಪಸ್ಥಿತರಿದ್ದರು.