ಮಡಿಕೇರಿ, ಸೆ. 27: ದುಬೈನಿಂದ ಹಿಂತಿರುಗುವದರೊಂದಿಗೆ ಎಮ್ಮೆಮಾಡುವಿನಲ್ಲಿ ಬಂಗಲೆ ನಿರ್ಮಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೆಣ್ಣಿನ ಆಮಿಷದೊಂದಿಗೆ ಹಣ ದೋಚುವ ಮೂಲಕ ದೈಹಿಕ ಹಲ್ಲೆ ನಡೆಸಿ ಹಿಂಸಿಸಿರುವ ಕೃತ್ಯದ ಆರು ಮಂದಿ ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್ನಲ್ಲಿ ಈ ಕೃತ್ಯ ಮೈಸೂರಿನಲ್ಲಿ ನಡೆದಿದ್ದು, ಕುಶಾಲನಗರ ಮೂಲದ ಹೆಣ್ಣೊಬ್ಬಳು ಹಾಗೂ ಎಮ್ಮೆಮಾಡುವಿನ ಐವರು ಬಂಧಿಸಲ್ಪಟ್ಟಿದ್ದಾರೆ. ಈ ಕೃತ್ಯದ ಸೂತ್ರಧಾರಿ ಕರೀಂನನ್ನು ಪೊಲೀಸರು ಬಂಧಿಸಲು ತೆರಳಿದ ವೇಳೆ; ಆತನ ಮನೆಯಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈತನೊಂದಿಗೆ ಇಬ್ಬರು ಪತ್ನಿಯರು ಕೂಡ ದುಷ್ಕøತ್ಯವನ್ನು ಬೆಂಬಲಿಸಿದ್ದರೆ; ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೊಕದ್ದಮೆ ದಾಖಲಾಗಿದೆ ಎಂದು ಈ ಸಂಜೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ತಿಳಿಸಿದರು. ಅಲ್ಲದೆ ಇನ್ನೋರ್ವ ಆರೋಪಿ ಅಜರುದ್ದೀನ್ ಕೂಡ ನಾಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಎಮ್ಮೆಮಾಡುವಿನ ಐವರು ಆರೋಪಿಗಳು ಹಾಗೂ ಕುಶಾಲನಗರ ಮೂಲದ ಹುಡುಗಿಯನ್ನು ಬಂಧಿಸುವಲ್ಲಿ ಡಿಸಿಐಬಿ ತಂಡ ಯಶಸ್ವಿಯಾಗಿದೆ.
ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಎಮ್ಮೆಮಾಡು ಮೂಲದ ಗಫೂರ್ ತಮ್ಮ ಹೊಸ ಮನೆ ಕೆಲಸದ ನಿಮಿತ್ತ ಆಗಸ್ಟ್ ತಿಂಗಳಿನಲ್ಲಿ ಎಮ್ಮೆಮಾಡುವಿಗೆ ಬಂದಿದ್ದು, ಇದನ್ನು ಬಂಡವಾಳವ ನ್ನಾಗಿಸಿಕೊಂಡ ಎಮ್ಮೆಮಾಡು ಗ್ರಾಮದ 10 ಜನ ಆರೋಪಿಗಳು ಸಂಚು ರೂಪಿಸಿದ್ದರು. ಗಫೂರ್ ಅವರನ್ನು ಎಲೆಕ್ಟ್ರಿಕ್ ಸಾಮಾನುಗಳನ್ನು ಕೊಡಿಸುವ ನೆಪದಲ್ಲಿ ಕಳೆದ ತಾ. 16.08.2019 ರಂದು ಸಂಜೆ ಎಮ್ಮೆಮಾಡುವಿನ ಕರೀಂ ಹಾಗೂ ಅಜರುದ್ದೀನ್ ಮೈಸೂರಿಗೆ ಕರೆದುಕೊಂಡು ಹೋಗು ತ್ತಾರೆ. ಮೊದಲೇ ಸಂಚು ರೂಪಿಸಿ ದಂತೆ ಕುಶಾಲನಗರದಲ್ಲಿ ಅದೇ ಕೋಮಿನ ಹೆಣ್ಣೊಬ್ಬಳನ್ನು ಕಾರಿಗೆ ಹತ್ತಿಸಿಕೊಂಡು, ಮೈಸೂರು ತಲಪಿ, ಕತ್ತಲಾದ ಕಾರಣ ರಾತ್ರಿ ಹೋಂ ಸ್ಟೇಯೊಂದರಲ್ಲಿ ವಿಶ್ರಾಂತಿ ಪಡೆಯುವ ನಾಟಕ ವಾಡಿದ್ದಾರೆ. ಅಂತೆಯೇ ಮೈಸೂರಿನ ರಿಂಗ್ ರೋಡ್ ಹತ್ತಿರ ಹೋಂ ಸ್ಟೇಯೊಂದಕ್ಕೆ ಗಫೂರ್ ಹಾಗೂ ಹಣದ ಆಮಿಷಕ್ಕೆ ಒಪ್ಪಿಕೊಂಡಿದ್ದ ಹೆಣ್ಣನ್ನು ಕರೆದುಕೊಂಡು ಹೋಗಿ ಗಫೂರ್ಗೆ ಅಮಲು
(ಮೊದಲ ಪುಟದಿಂದ) ಪದಾರ್ಥವನ್ನು ಪೂರ್ವ ಸಂಚಿನಂತೆ ನೀಡಿರುತ್ತಾರೆ. ತಡರಾತ್ರಿ ಉಳಿದ ಆರೋಪಿಗಳು ಹೋಂ ಸ್ಟೇಗೆ ಪ್ರವೇಶಿಸಿ ತಾವು ಮಾಧ್ಯಮದವರೆಂದು ಹೇಳಿಕೊಂಡು ಗಫೂರ್ ಬಳಿ ಇದ್ದ 60 ಸಾವಿರ ರೂ. ನಗದು ಹಾಗೂ 55 ಸಾವಿರದಷ್ಟು ವಿದೇಶಿ ಕರೆನ್ಸಿಯನ್ನು ದೋಚುತ್ತಾರೆ. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಬಿಚ್ಚುವಂತೆ ಹೆದರಿಸಿ, ನಂತರ ಆ ಹೆಣ್ಣಿನೊಂದಿಗೆ ನಿಲ್ಲಿಸಿ ಫೋಟೋ ಹಾಗೂ ವೀಡಿಯೋ ತೆಗೆದುಕೊಳ್ಳುತ್ತಾರೆ. ಈ ವೇಳೆ ಕೂಡಲೇ 50 ಲಕ್ಷ ರೂ. ನೀಡದೇ ಹೋದರೆ ಸದರಿ ಅಶ್ಲೀಲ ಫೋಟೋ ಹಾಗೂ ವೀಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡುವದಾಗಿ ಬೆದರಿಸಿದ್ದಾರೆ. ಅನಂತರ ಒಟ್ಟು 3 ಲಕ್ಷ ರೂಪಾಯಿಗಳನ್ನು ಗಫೂರ್ ಮನೆಯಿಂದ ತರಿಸುವಂತೆ ಬೆದರಿಸಿದ್ದಾರೆ. ಅಂತೆಯೇ ಗಫೂರ್ ತಮ್ಮ ಮನೆಯಿಂದ ಹಣವನ್ನು ತರಿಸಿ ಒಟ್ಟು 3.80 ಲಕ್ಷ ರೂ.ಗಳನ್ನು ನೀಡಿದ್ದಾಗಿದೆ. ಅಲ್ಲಿಂದ ಆರೋಪಿಗಳು ಗಫೂರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಗಫೂರ್ ನೀಡಿದ ದೂರಿನ ಅನ್ವಯ ನಾಪೋಕ್ಲು ಪೊಲೀಸ್ ಠಾಣೆ ಮೊ.ಸಂ.64/2019 ಕಲಂ, 120(ಬಿ), 328, 384, 395 ಸಹಿತ 149 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಪೊಲೀಸ್ ಅಧೀಕ್ಷಕರು, ಡಿಸಿಐಬಿ ತಂಡವನ್ನು ರಚಿಸುತ್ತಾರೆ. ಆ ಮೇರೆಗೆ 10 ಜನ ಆರೋಪಿಗಳಲ್ಲಿ 6 ಮಂದಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿವರ: ಬಂಧಿತ ಆರೋಪಿಗಳಲ್ಲಿ ಎಮ್ಮೆಮಾಡುವಿನ ಉಸ್ಮಾನ್ ಎಂಬವರ ಪುತ್ರ ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜ್ಜು (24) ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದರೆ, ಅಬ್ದುಲ್ಲ ಎಂಬವರ ಮಗ ಅಬುಬಕರ್ ಸಿದ್ದಿಖ್ (33) ಕತಾರ್ನಲ್ಲಿ ಚಾಲಕನಾಗಿದ್ದಾನೆ. ಅಲ್ಲಿನ ನಿವಾಸಿ ಯೂಸೂಫ್ ಎಂಬವರ ಪುತ್ರ ಹಸೇನಾರ್ ಅಲಿಯಾಸ್ ಅಚ್ಚು (27) ಕತ್ತಾರ್ನಲ್ಲಿ ಚಾಲಕನಾಗಿದ್ದು, ಅಬ್ದುಲ್ ರೆಹಮಾನ್ ಎಂಬವರ ಮಗ ಇರ್ಷಾದ್ ಅಲಿ (27) ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮತ್ತೋರ್ವ ಆರೋಪಿ ಯು.ಎ. ರೆಹಮಾನ್ ಎಂಬವರ ಪುತ್ರ ಎ.ಎ. ಸಮೀರ್ (28) ಎರ್ನಾಕುಲಂನ ನೈಸ್ ಕೆಫೆ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಪಡಿಯಾಣಿ ಎಮ್ಮೆಮಾಡು ನಿವಾಸಿಯಾಗಿದ್ದಾನೆ. ಕೂಡಿಗೆಯ ವಿದ್ಯಾರ್ಥಿನಿ (18) ಮಡಿಕೇರಿ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ.
ಇನ್ನುಳಿದ 4 ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್, ಎಂ.ಎನ್. ನಿರಂಜನ್, ವಿ.ಜಿ. ವೆಂಕಟೇಶ್, ಕೆ.ಎಸ್., ಅನಿಲ್ ಕುಮಾರ್, ಕೆ.ಆರ್. ವಸಂತ, ಸುಮತಿ ಎಂ.ಬಿ., ಮಹೇಶ್ ಯು.ಎ., ಸಿ.ಕೆ.ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.