ಮಡಿಕೇರಿ, ಸೆ. 27: ಮಹಿಳೆಯರು ಕಾನೂನಿನ ಬಗ್ಗೆ ತಮ್ಮನ್ನು ತಾವು ಜಾಗೃತಿಗೊಳಿಸಿಕೊಂಡರೆ ಯಾವದೇ ಸಮಸ್ಯೆಗಳು ಉದ್ಭವಿಸುವದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬುಧವಾರ ನಡೆದ ಭಾರತದಲ್ಲಿ ಜಾರಿಯಲ್ಲಿರುವ ಮಹಿಳೆಯರ ಹಿತಕ್ಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಶಾಸನಗಳಿಗೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ದಿವಂಗತ ಕೆ.ಎಂ. ಪೊನ್ನಪ್ಪ ಅವರ ಸ್ಮರಣಾರ್ಥ ಕಾನೂನು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರಿಗಾಗಿ ರೂಪಿತವಾಗಿರುವ ವಿಶೇಷ ಕಾನೂನಿನ ಬಗ್ಗೆ ತಿಳಿದುಕೊಂಡು ಮಹಿಳೆಯರು ಸಮಸ್ಯೆ ಬಂದಾಗ ಕಾನೂನನ್ನು ಬಳಸಿಕೊಳ್ಳಬೇಕು. ಕಾನೂನಿನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾದ ಸವಲತ್ತುಗಳು ಇದ್ದು, ಕಾನೂನನ್ನು ದುರ್ಬಳಕೆ ಮಾಡಿಕೊಳ್ಳದೆ, ಅವಶ್ಯವಿದ್ದಾಗ ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಲಹೆ ಮಾಡಿದರು. ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ದೂರುಗಳಿಗೆ ಸಂಬಂಧಿಸಿದಂತೆ ವಿಶೇಷ ಘಟಕ ತೆರೆಯಲಾಗಿದ್ದು, ತೊಂದರೆಗೊಳಗಾದ ಸಂದರ್ಭಗಳಲ್ಲಿ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಮಾತನಾಡಿ ಮಹಿಳೆಯರ ಹಿತಕ್ಕಾಗಿ ಇರುವಂತಹ ಸಿವಿಲ್ ಮತ್ತು ಕ್ರಿಮಿನಲ್ ಕಾನೂನಿನ ಬಗ್ಗೆ ಮಾಹಿತಿ ನೀಡಿ, ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನೀಡಲಾಗುತ್ತಿರುವ ಉಚಿತ ಕಾನೂನು ನೆರವು ಹಾಗೂ ಲೋಕದಾಲತ್ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.

ಮಹಿಳೆಯರಿಗೆ ಸಂಪೂರ್ಣವಾಗಿ ತೊಂದರೆಗೊಳಗಾದ ಸಂದರ್ಭದಲ್ಲಿ ಕಾನೂನು ನೆರವನ್ನು ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದಾಗಿದೆ ರಾಜಿ ಸಂದಾನ, ಮಧ್ಯಸ್ಥಿಕೆಯ ಮೂಲಕ ಸಕಾಲದಲ್ಲಿ ಪರಿಹಾರ ಕಲ್ಪಿಸಿಕೊಡಲಾಗುತ್ತಿದ್ದು, ಸಾಮಾನ್ಯ ದುರ್ಬಲ ಶೋಷಣೆಗೊಳಗಾದ ಮಹಿಳೆಯರಿಗೆ ಇರುವಂತಹ ಹಕ್ಕನ್ನು ಪಡೆದುಕೊಳ್ಳಲು ಮುಂದಾಗುವಂತೆ ನೂರುನ್ನೀಸಾ ಅವರು ಹೇಳಿದರು.

ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಹಾಗೂ ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾನೂನಿನ ನೆರವಿನ ಜೊತೆಗೆ ಪರಿಹಾರ ರೂಪದಲ್ಲಿ ಆರ್ಥಿಕ ನೆರವನ್ನೂ ಸಹ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಮಾಹಿತಿ ನೀಡಿದರು.

ವಕೀಲೆ ಕೆ.ಎಂ. ಮೀನಕುಮಾರಿ ಮಾತನಾಡಿ, ಕಾನೂನು ನಿಂತ ನೀರಲ,್ಲ ಬದಲಿಗೆ ಹರಿಯುವ ನೀರಿನ ತರಹ ಕಾಲಕಾಲಕ್ಕೆ ಬದಲಾವಣೆಗಳೂ ಆಗುತ್ತಿರುತ್ತವೆ. ಜ್ಞಾನ ಮತ್ತು ಧೈರ್ಯ ಪ್ರತಿಯೊಬ್ಬರಿಗೂ ಅತೀ ಮುಖ್ಯ ಎಂದರು.

ಮಹಿಳೆಯರು ತೊಂದರೆ ಬಂದಾಗ ಕುಗ್ಗಬಾರದು. ಮಹಿಳೆಯರಿಗೆ, ಮಕ್ಕಳಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಂವಿಧಾನ ಮತ್ತು ಕಾನೂನಿನಲ್ಲಿ ಉತ್ತಮ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು, ಮಹಿಳೆಯರು ಇದರ ಸುದುಪಯೋಗವನ್ನು ಬಳಸಿಕೊಳ್ಳಬೇಕು ಎಂದರು.

ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳೆಯರ ನೆರವಿಗಾಗಿ ಸದಾ ಸಿದ್ಧವಿರುತ್ತದೆ. ಮಹಿಳೆಯರ ದೂರುಗಳಿಗೆ ಸಂಬಂಧಿಸಿದಂತೆ ಯಾವದೇ ತೊಂದರೆಗಳು ಉದ್ಭವಿಸಿದಲ್ಲಿ ಮಹಿಳಾ ಸಹಾಯವಾಣಿ 1091 ಕರೆಮಾಡಿ ತಮ್ಮ ದೂರುಗಳನ್ನು ದಾಖಲಿಸಿಕೊಳ್ಳಬಹುದು ಎಂದು ತಿಳಿಸಿದರು.

ವಕೀಲ ಎಂ.ಎನ್. ನಿರಂಜನ್ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವದರ ಜೊತೆಗೆ ಪ್ರಜ್ಞಾವಂತಿಕೆ, ಸಾಮಾಜಿಕ ಕಳಕಳಿ ಇವುಗಳನ್ನು ತಿಳಿದು ನಡೆದರೆ ಯಾವದೇ ಸಮಸ್ಯೆಗಳು ಉದ್ಭವಿಸುವದಿಲ್ಲ ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಮಾತನಾಡಿ, ದಿವಂಗತ ಕೆ.ಎಂ. ಪೊನ್ನಪ್ಪ ಅವರು 1959 ರಿಂದ 2004 ವರೆಗೆ ವಕೀಲರಾಗಿ ಸುದೀರ್ಘ ಕಾನೂನು ಸೇವೆ ಸಲ್ಲಿಸುವದರ ಜೊತೆಗೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಮಹಿಳೆಯರ ಹಕ್ಕುಗಳು ಹಾಗೂ ಕಾನೂನಿಗೆ ಸಂಬಂಧಿಸಿ ಶೋಷಣೆಗೆ ಒಳಗಾದ ಮಹಿಳೆಯರ ಪರವಾಗಿ ನ್ಯಾಯ ದೊರಕಿಸಿ ಕೊಟ್ಟಿರುತ್ತಾರೆ ಎಂದು ಅವರು ತಿಳಿಸಿದರು.

ಕೊಡಗು ಜಿಲ್ಲಾ ವಕೀಲರ ಸಂಘಕ್ಕೆ ಸಾಕಷ್ಟು ಸವಲತ್ತುಗಳನ್ನು ನೀಡಿದ್ದು ಅವಿಸ್ಮರಣೀಯ. ಜೊತೆಗೆ ಹಲವು ಉತ್ತಮ ವಕೀಲರುಗಳನ್ನು ರೂಪಿಸಿದಂತ ಧೀಮಂತ ವ್ಯಕ್ತಿತ್ವ ಕೆ.ಎಂ. ಪೊನ್ನಪ್ಪ ಅವರದು. ಅವರ ಸ್ಮರಣಾರ್ಥ ನಡೆಸುತ್ತಿರುವ ಕಾರ್ಯಕ್ರಮವೂ ಮಹಿಳೆಯರಿಗೆ ಅತ್ಯಂತ ಉಪಯುಕ್ತವಾದದ್ದು ಹಾಗೂ ಮಹಿಳೆಯರಿಗಿರುವ ವಿಶೇಷ ಕಾನೂನು ಸವಲತ್ತುಗಳನ್ನು ತೊಂದರೆಗೊಳಗಾದ ಸಂದರ್ಭದಲ್ಲಿ ಬಳಸಿಕೊಳ್ಳುವಂತೆ ಅವರು ತಿಳಿಸಿದರು.

ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಮಾತನಾಡಿ, ಮಹಿಳೆಯರ ರಕ್ಷಣೆಗೆ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇರುವಂತಹ ಕಾನೂನಿನ ಕುರಿತು ಅರಿವು ಮೂಡಿಸುತ್ತಿರುವ ಕಾರ್ಯಕ್ರಮವು ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎಂದರು.

ಕಾರ್ಯಕ್ರಮದಲ್ಲಿ ದಿವಂಗತ ಕೆ.ಎಂ. ಪೊನ್ನಪ್ಪ ಅವರ ಪತ್ನಿ ಹಾಗೂ ವಕೀಲರಾದ ಸೌಭಾಗ್ಯ ಪೊನ್ನಪ್ಪ, ವಕೀಲರ ಸಂಘದ ಖಜಾಂಚಿ ಬಿ.ಸಿ. ದೇವಿಪ್ರಸಾದ್, ಹಿರಿಯ ವಕೀಲ ಕೆ.ಡಬ್ಲ್ಯು. ಬೋಪಯ್ಯ, ಸರ್ಕಾರಿ ವಕೀಲ ಶ್ರೀಧರ್ ನಾಯರ್, ವಕೀಲರಾದ ಬಾನುಪ್ರಕಾಶ್, ಚಂದನ್, ದಿವ್ಯ, ಜನಿತಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಇತರರು ಇದ್ದರು. ವಕೀಲರ ಸಂಘದ ಕಾರ್ಯದರ್ಶಿ ಡಿ.ಜಿ. ಕಿಶೋರ್ ನಿರೂಪಿಸಿದರು. ವಕೀಲರಾದ ಜ್ಯೋತಿ ಶಂಕರ್ ವಂದಿಸಿದರು.