ಶ್ರೀಮಂಗÀಲ, ಸೆ. 27: ವೀರಾಜಪೇಟೆ ತಾಲೂಕು, ತೋರ ಗ್ರಾಮದಲ್ಲಿ ಆಗಸ್ಟ್ ತಿಂಗಳಲ್ಲಿ ಭೂಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಕೇಂದ್ರದಲ್ಲಿ ಇರಲು ತೊಂದರೆಯಾದ ಕಾರಣ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು, ಇವರಿಗೆ ಪರಿಹಾರ ನೀಡದೇ ಇರುವ ಬಗ್ಗೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದು, ಈ ಬಗ್ಗೆ ತಹಶೀಲ್ದಾರರಿಗೆ ಗ್ರಾಮಸ್ಥರೊಂದಿಗೆ ಮನವಿ ಸಲ್ಲಿಸಿ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ಬುಧವಾರ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮತ್ತು ಪದಾಧಿಕಾರಿಗಳು ತಹಶೀಲ್ದಾರ್ ಪುರಂದರ ಅವರ ಅನುಪಸ್ಥಿತಿಯಲ್ಲಿ ಶಿರಸ್ತೆದಾರ್ ಅವರಿಗೆ ಸಂತ್ರಸ್ತರೊಂದಿಗೆ ಮನವಿ ಸಲ್ಲಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರು.

ತೋರ ಗ್ರಾಮದ ಖಾಯಂ ನಿವಾಸಿಗಳಾದ ಕೆ.ಜಿ.ಬೆಳ್ಳಿಯಪ್ಪ, ಕೆ.ಜಿ. ಮಂದಣ್ಣ, ಕೆ.ಕೆ. ಗೌರಮ್ಮ, ಕೆ.ಪಿ. ನಂಜಮ್ಮ, ಕೆ.ಪಿ. ಮುದ್ದಪ್ಪ, ಕೆ.ಎ. ಪೂಣಚ್ಚ, ಕೆ.ಪಿ. ಮಂದಪ್ಪ, ಕೆ.ಟಿ. ದೇಚವ್ವ, ಕೆ.ಟಿ. ಸೋಮಯ್ಯ ಅವರ ಆಸ್ತಿಪಾಸ್ತಿ ಮತ್ತು ಮನೆಗಳಿಗೆ ಭೂಕುಸಿತದಿಂದ ಹಾನಿಯಾಗಿದೆ. ಹಾಗೂ ತೀವ್ರ ಮಳೆಯಿಂದ ಇವರುಗಳನ್ನು ಕೆದಮುಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದ ಪರಿಹಾರ ಕೇಂದ್ರದಲ್ಲಿ ಹೆಸರು ನೋಂದಾವಣಿ ಮಾಡಿದ್ದರು. ಆದರೆ ಅಲ್ಲಿ ಉಳಿಯಲು ತೊಂದರೆ ಉಂಟಾದ ಕಾರಣ ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಪರಿಹಾರ ಕೇಂದ್ರದಲ್ಲಿ ವಾಸವಿರಲಿಲ್ಲ ಎಂದು ಪರಿಹಾರ ಹಣ ಪಾವತಿಸಲು ನಿರಾಕರಿಸುತ್ತಿರುವದು ಸರಿಯಲ್ಲ ಎಂದು ಕಟ್ಟಿ ಮಂದಯ್ಯ ಅವರು ಅಸಮಾಧಾನ ವ್ಯಕ್ತ ಪಡಿಸಿದರು.

ಮನವಿ ಸ್ವೀಕರಿಸಿದ ಶಿರಸ್ತೆದಾರ್ ಪೊನ್ನಪ್ಪ ಅವರು ಈ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದು ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುವದಾಗಿ ಕಟ್ಟಿ ಮಂದಯ್ಯ ತಿಳಿಸಿದರು.

ಈ ಸಂದರ್ಭ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಮಾಣೀರ ವಿಜಯ್ ನಂಜಪ್ಪ, ಮಾಣೀರ ಮುತ್ತಪ್ಪ, ಅಜ್ಜಮಾಡ ರಾಜೀವ್ ನಂಜಪ್ಪ ಹಾಜರಿದ್ದರು.