ಕುಶಾಲನಗರ, ಸೆ. 27: ಹಲವು ಹಕ್ಕೊತ್ತಾಯಗಳನ್ನು ಮುಂದಿರಿಸಿ ಕರ್ನಾಟಕ ರೈತ ಸಂಘ ಮತ್ತು ಆದಿವಾಸಿ ಭಾರತ್ ಮಹಾಸಭಾದ ಕೊಡಗು ಜಿಲ್ಲಾ ಘಟಕಗಳ ವತಿಯಿಂದ ಅ.1 ರಂದು ಕುಶಾಲನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಬಸವನಹಳ್ಳಿ, ಬ್ಯಾಡಗೊಟ್ಟ ಆದಿವಾಸಿಗಳಿಗೆ ತಲಾ 3 ಎಕರೆ ಕೃಷಿ ಭೂಮಿ ಒದಗಿಸಬೇಕು, ಆದಿವಾಸಿಗಳಿಗೆ ವರ್ಷವಿಡೀ ಪೌಷ್ಟಿಕ ಆಹಾರ ನೀಡಬೇಕು, 6ನೇ ಹೊಸಕೋಟೆ ಅಂದಾನಿಪುರದಲ್ಲಿ 20 ವರ್ಷಗಳಿಂದ 3 ಎಕರೆ ಒಳಗೆ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡವರ ಭೂಮಿಯನ್ನು ಪೊಲೀಸ್ ಇಲಾಖೆಗೆ ಸೇರಿಸಿರುವದನ್ನು ರದ್ದುಗೊಳಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು, ಬಸವನಹಳ್ಳಿ ಬ್ಯಾಡಗೊಟ್ಟ ಆದಿವಾಸಿ ಯುವಕ ಯುವತಿಯರಿಗೆ ಹೊಸ ಉದ್ಯೋಗಾವಕಾಶದೊಂದಿಗೆ ಅಗತ್ಯ ತರಬೇತಿ ಮತ್ತು ಸಾಲ ಸೌಲಭ್ಯ ಕಲ್ಪಿಸಬೇಕು, ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿರುವ ಕೊರಮ ನಿವಾಸಿಗಳಿಗೆ ಶಾಶ್ವತ ಮನೆಗಳನ್ನು ಕಟ್ಟಿಕೊಡಬೇಕು, ಬಸವನಹಳ್ಳಿ ಸರ್ವೆ ನಂ 1/1 ರಲ್ಲಿ ಬಡವರಿಗೆ ನಿವೇಶನಕ್ಕಾಗಿ ಗುರುತಿಸಿರುವ 3 ಎಕರೆ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸದೆ ಅರ್ಹ ಬಡವರಿಗೆ ನಿವೇಶನ ಹಂಚಿ ಮನೆ ನಿರ್ಮಿಸಿಕೊಡಬೇಕಿದೆ ಎಂದು ಬೇಡಿಕೆ ಮುಂದಿಡಲಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಮೆರವಣಿಗೆ ಮೂಲಕ ನಾಡ ಕಚೇರಿವರೆಗೆ ಮೆರವಣಿಗೆ ಸಾಗಿ ಪ್ರತಿಭಟನೆ ನಡೆಸಲಾಗುವದು.

ಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ನಿರ್ದೇಶಕ ಬಿ.ಎಸ್. ನಿರ್ವಾಣಪ್ಪ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣಪ್ಪ, ಸಿಪಿಐಎಂ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಆದಿವಾಸಿ ಮಹಾಸಭಾದ ಕಾರ್ಯಕರ್ತರಾದ ರಾಜು, ಚಿನ್ನಪ್ಪ, ಶಂಕ್ರು ಇದ್ದರು.