ಗೋಣಿಕೊಪ್ಪ ವರದಿ, ಸೆ. 27 : ಹುಲಿ ಓಡಿಸಲು ಬಂದ ಅರಣ್ಯ ಸಿಬ್ಬಂದಿ ಬಳಸಿದ ಪಟಾಕಿ ಶಬ್ದಕ್ಕೆ ಕಾಡಾನೆಗಳು ಭತ್ತ ಬೆಳೆ ನಾಶ ಮಾಡಿರುವ ಘಟನೆ ನೊಕ್ಯ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಚೆಪ್ಪುಡೀರ ಕಾರ್ಯಪ್ಪ ಎಂಬವರ ಭತ್ತದ ಗದ್ದೆ ನಾಶವಾಗಿದೆ.
ನೊಕ್ಯ ಗ್ರಾಮದಲ್ಲಿ ನಡೆದ ಹುಲಿ ದಾಳಿ ಸಂದರ್ಭ ಸ್ಥಳಕ್ಕೆ ಬಂದಿದ್ದ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ಪಟಾಕಿ ಸಿಡಿಸಿ ಹುಲಿ ಓಡಿಸಲು ಮುಂದಾದರು. ಈ ಸಂದರ್ಭ ಅಲ್ಲಿನ ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಟ್ರಸ್ಟ್‍ಗೆ ಸೇರಿದ ಕಾಡಿನಲ್ಲಿ ಸೇರಿಕೊಂಡಿದ್ದ ಆನೆಗಳು ಭಯಗೊಂಡು ಗದ್ದೆಗೆ ಇಳಿದು ತುಳಿದು ಹಾಕಿವೆ. ಹಗಲು ಹೊತ್ತು ನಡೆದಿರುವದರಿಂದ ಕಾರ್ಯಾಚರಣೆ ತಂಡಕ್ಕೆ ಕ್ರಮಕೈಗೊಳ್ಳಲು ಆಗಲಿಲ್ಲ. ಪರಿಣಾಮ ರಾತ್ರಿ ಮತ್ತೆ ದಾಳಿ ನಡೆಸಿರುವ ಆನೆಗಳು ಬೆಳೆಯನ್ನು ತುಳಿದು ತಿಂದು ನಾಶ ಮಾಡಿವೆ. ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿಲ್ಲ ಎಂಬದು ಗ್ರಾಮಸ್ಥರ ಆರೋಪವಾಗಿದೆ.
ಒತ್ತಾಯ : ಚೆಪ್ಪುಡೀರ ಕುಟುಂಬದ ಸ್ಕಾಲರ್‍ಶಿಪ್ ಟ್ರಸ್ಟ್‍ಗೆ ಸೇರಿದ 12 ಎಕರೆ ಕಾಡು ಮತ್ತು ಮನೆಯಪಂಡ ಶಾರದ ಎಂಬವರಿಗೆ ಸೇರಿದ 5 ಎಕರೆ ಕಾಡು ಸೇರಿದ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿರುವದರಿಂದ ಆನೆಗಳು ಅಲ್ಲಿಯೇ ದಿನ ಕಳೆಯುತ್ತಿವೆ. ಇದರಿಂದಾಗಿ ಈ ಕಾಡಿನಲ್ಲಿರುವ ಕಾಡು ಕಡಿಯಲು ಆಯಾ ಮಾಲೀಕರಿಗೆ ಸೂಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸರ್ಕಾರದ ಅನುದಾನ ಅಥವಾ ಮಾಲೀಕರಿಂದಲೇ ಕಾಡು ಕಡಿಯುವಂತೆ ಸೂಚಿಸಬೇಕು ಎಂಬದು ಸ್ಥಳೀಯ ಒತ್ತಾಯವಾಗಿದೆ.
ಅರಣ್ಯದಿಂದ ಗ್ರಾಮಕ್ಕೆ ಬರುವ ಕಾಡು ಪ್ರಾಣಿಗಳು ಇಲ್ಲಿ ಸೇರಿಕೊಂಡು ಅರಣ್ಯಕ್ಕೆ ಹಿಂತಿರುಗುತ್ತಿಲ್ಲ. ಇದರಿಂದ ಹೆಚ್ಚು ಸಮಸ್ಯೆಯಾಗಿದೆ. ಕಾಡು ಕಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಸುದ್ದಿಮನೆ