ವೀರಾಜಪೇಟೆ, ಸೆ. 27: ಭ್ರಷ್ಟಾಚಾರ ತಡೆ ಕಾಯದೆ ಆರೋಪದ ಮೇರೆ ಇಲ್ಲಿನ ಕಾರ್ಮಿಕ ಇಲಾಖೆಯ ನಿರೀಕ್ಷಕರಾಗಿದ್ದ ಎಫ್.ಎಸ್. ಕನಕಾಪುರ್ ಹಾಗೂ ಭ್ರಷ್ಟಾಚಾರಕ್ಕೆ ಪ್ರೇರೇಪಿಸಿ ಲಂಚ ಪಡೆಯಲು ಅಧಿಕಾರಿಗೆ ಸಹಕರಿಸಿದ ಇಲ್ಲಿನ ಅದೇ ಇಲಾಖೆಯ ನಿವೃತ್ತ ಸಿಬ್ಬಂದಿ ಸಿ.ಎ. ಯೇಶು ಎಂಬಿಬ್ಬರಿಗೆ ಇಲ್ಲಿನ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ 27-09-2012 ರಂದು ಇಲ್ಲಿನ ಎಫ್.ಎಂ.ಸಿ ರಸ್ತೆಯಲ್ಲಿದ್ದ ಕಾರ್ಮಿಕ ಕಚೇರಿಯಲ್ಲಿ ಚಂಬೆಬೆಳ್ಳೂರು ಗ್ರಾಮದ ಎಂ.ಎಂ.ಕಾರ್ಯಪ್ಪ ಅವರಿಂದ ಅವರ ಸಂಸ್ಥೆಯ ಕಾರ್ಮಿಕರ ನೋಂದಣಿಗಾಗಿ ಕಾರ್ಮಿಕ ಅಧಿಕಾರಿ ಎಫ್.ಎಸ್. ಕನಕಾಪುರ್ ರೂ 3000 ಲಂಚ ಸ್ವೀಕರಿಸುತ್ತಿದ್ದಾಗ ಮೈಸೂರು ಹಾಗೂ ಮಡಿಕೇರಿಯ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದು, ಅಧಿಕಾರಿಗಳು, ಕನಕಾಪುರ್ ಹಾಗೂ ಲಂಚಕ್ಕೆ ಪ್ರೇರೇಪಿಸಿದ ಸಿ.ಎ.ಯೇಶು ಇಬ್ಬರನ್ನು ಬಂಧಿಸಿ ಅವರುಗಳ ವಿರುದ್ಧ ಐ.ಪಿ.ಸಿ.192, 211, 7,8,13,(1) (ಡಿ) ಆರ್/ಡಬ್ಲ್ಯೂ 13ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.

ಎಂ.ಎಂ.ಕಾರ್ಯಪ್ಪ ಅವರು ಕಾರ್ಮಿಕರ ನೋಂದಾವಣೆಗೆ ರೂ. 500 ಶುಲ್ಕವಿದ್ದು, ಜೊತೆಗೆ ರೂ 2500 ರ ಲಂಚದ ಬೇಡಿಕೆ ಇಟ್ಟಿದ್ದರು.

ರೂ. 3 ಸಾವಿರ ನೀಡಿದರೆ ರೂ 500ಕ್ಕೆ ಮಾತ್ರ ರಶೀತಿ ನೀಡಿ ರೂ 2500 ಹಾಗೆಯೇ ಕೊಡುವಂತೆ ತಿಳಿಸಿದ್ದರಿಂದ ಅವರು ಮೈಸೂರು ಲೋಕಾಯುಕ್ತರಿಗೆ ಲಿಖಿತ ದೂರು ನೀಡಿದ್ದರು. ದೂರನ್ನು ಮಡಿಕೇರಿ ಇಲಾಖೆಗೂ ವರ್ಗಾಯಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಅಪರ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಿ.ರಮಾ ಅವರು ಮೊದಲನೇ ಆರೋಪಿ ಎಫ್.ಎಸ್. ಕನಕಾಪುರ್‍ಗೆ ಮೂರು ವರ್ಷ ಸಜೆ, ರೂ 10,000 ಸಾವಿರ ದಂಡ, ದಂಡ ಕಟ್ಟಲು ತಪ್ಪಿದರೆ 3ತಿಂಗಳ ಸಜೆ, ಕಲಂ 7ರ ಪ್ರಕಾರ ಮೊದಲನೇ ಮತ್ತು ಎರಡನೇ ಆರೋಪಿ ಸಿ.ಎ.ಯೇಶು ಇಬ್ಬರಿಗೂ ಮೂರು ವರ್ಷ ಸಜೆ ರೂ.20,000 ದಂಡ, ದಂಡ ಕಟ್ಟಲು ತಪ್ಪಿದರೆ ಆರು ತಿಂಗಳ ಸಜೆ, ಎರಡನೇ ಆರೋಪಿ ಸಿ.ಎ.ಯೇಶುಗೆ ಕಲಂ 8ರ ಪ್ರಕಾರ ಮೂರು ವರ್ಷಸಜೆ, ರೂ5000 ದಂಡ, ತಪ್ಪಿದರೆ ಮೂರು ತಿಂಗಳ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

* ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ಲೋಕಾಯುಕ್ತ ಠಾಣೆಯಲ್ಲಿ ಅಂದಿನ ಠಾಣಾಧಿಕಾರಿ ಪರಶುರಾಮ ಅವರು ವೀರಾಜಪೇಟೆ - ಕೇರಳ ಹೆದ್ದಾರಿಯಲ್ಲಿ ಪೆರಂಬಾಡಿ ಎಂಬಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ನಿರಂತರವಾಗಿ ಕಾನೂನು ಬಾಹಿರವಾಗಿ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ 16.06.2014ರಂದು ಎಫ್.ಐ.ಆರ್. ದಾಖಲಿಸಿ 17.06.2014ರಂದು ಬೆಳಿಗ್ಗೆ ದಾಳಿ ನಡೆಸಿದರು. ಅಲ್ಲಿ ದೊರೆತ ನಗದು ಪುಸ್ತಕದಲ್ಲಿ ನಮೂದಿಸಿದಕ್ಕಿಂತ ಹೆಚ್ಚು ಹಣವನ್ನು ತಮ್ಮ ವಶದಲ್ಲಿಟ್ಟುಕೊಂಡರೆಂಬ ಆಧಾರದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಂದ ನಂಜುಂಡ ಸ್ವಾಮಿ, ಬಸವೇಗೌಡ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಭಗವಾನ್ ಎಂಬವರ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಕಲಂ 7, 13(1)(ಎ) ಮತ್ತು 13(2)ರನ್ವಯ ಕೇಸು ದಾಖಲಿಸಿ, ಅಂತಿಮ ವರದಿ ಸಲ್ಲಿಸಿದರು.

ಈ ಬಗ್ಗೆ ವಿಚಾರಣೆ ನಡೆಸಿದ ವೀರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜೆ. ರಮಾ ಅವರು ಆರೋಪ ಸಾಬೀತಾದ ಹಿನ್ನೆಲೆ 3ನೇ ಮತ್ತು 4ನೇ ಆರೋಪಿಗಳು ಮಲ್ಲಿಕಾರ್ಜುನ ಮತ್ತು ಭಗವಾನ್‍ರವರಿಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 7ರಡಿಯಲ್ಲಿ 3 ವರ್ಷ ಸಜೆ ಮತ್ತು ರೂ. 10,000 ದಂಡ, ಕಲಂ 13(2)ರಡಿಯಲ್ಲಿ 4 ವರ್ಷ ಸಜೆ ಮತ್ತು ರೂ. 20,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಮೇಲಿನ ಎರಡೂ ಪ್ರಕರಣಗಳಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಎಂ. ಕಾರ್ಯಪ್ಪ ಲೋಕಾಯುಕ್ತ ಪರ ವಾದ ಮಂಡಿಸಿದ್ದಾರೆ.