ಮಡಿಕೇರಿ, ಸೆ. 27: ಇಂದು ನಗರದಲ್ಲಿ ವಿಶೇಷ ರೀತಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಮಡಿಕೇರಿಯ ಸುದರ್ಶನ ವೃತ್ತದಲ್ಲಿ 7 ಗಂಟೆಗೆ ಬೈಕ್, ಸೈಕಲ್ ರ್ಯಾಲಿ ಹಾಗೂ ಮ್ಯಾರಥಾನ್ ಗಳಿಂದ ಚಾಲನೆಯಾದ ಕಾರ್ಯಕ್ರಮ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಸಭಾಂಗಣದಲ್ಲಿ ಸಮಾರಂಭದ ಮೂಲಕ ಮುಂದುವರಿಯಿತು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಛಾಯಾಚಿತ್ರ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿಯವರು ಇಂದಿನ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವನ್ನು ಸ್ಮರಿಸಿದರು.2 ವರ್ಷಗಳಿಂದ ಪ್ರವಾಹವನ್ನು ಕೊಡಗು ಜಿಲ್ಲೆಯು ಕಂಡಿದ್ದು, ಈ ಸಮಯದಲ್ಲಿ ಜಿಲ್ಲೆಯ ಅನೇಕ ಸಂಘ- ಸಂಸ್ಥೆಗಳು ಮುಂದೆ ಬಂದು ತಮ್ಮ ಸಹಕಾರವನ್ನು ನೀಡಿವೆ. ರ್ಯಾಫ್ಟಿಂಗ್ ಸಂಘದಿಂದ ದೋಣಿಗಳು ಹಾಗೂ ಅನೇಕ ಹೋಂಸ್ಟೇ, ಹೊಟೇಲ್‍ಗಳು ಉಚಿತವಾಗಿ ಪ್ರವಾಹ ಪೀಡಿತ ಜನರಿಗೆ ವಸತಿ ನೀಡುವ ಮೂಲಕ ತಮ್ಮ ಸಹಕಾರ ತೋರಿದರು ಎಂದು ಮೆಲುಕು ಹಾಕಿದರು. ಪ್ರವಾಹದ ನಂತರ ಹಲವು ಮಂದಿ ಪ್ರವಾಸೋದ್ಯಮದ ವಿರುದ್ಧ ಹಾಗೂ ಇನ್ನು ಕೆಲವು ಮಂದಿ ಪ್ರವಾಸೋದ್ಯಮದ ಪರ ತಮ್ಮ ಅಭಿಪ್ರಾಯ ತೋರಿಸಿದ್ದಾರೆ. ನಾವೆಲ್ಲರೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಸಾರ್ವಜನಿಕರೆಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದರು. ಜಬಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಪ್ರವಾಸಿಗರು ಹಾಗೂ ಆತಿಥ್ಯ ನೀಡುವವರು ಹೊಣೆ ಗಾರರು ಎಂದರು.

(ಮೊದಲ ಪುಟದಿಂದ) ಕೂರ್ಗ್ ಟೂರ್ಸ್ ಅಂಡ್ ಟ್ರಾವೆಲ್ಸ್ ಅಧ್ಯಕ್ಷ ಚೈಯಂಡ ಸತ್ಯ ಮಾತನಾಡಿ, ಪ್ರವಾಹದ ನಂತರ ಕೊಡಗಿನ ಜನರ ಆರ್ಥಿಕ ಸಮಸ್ಯೆಯು ಹೆಚ್ಚಾಗಿದ್ದು, ಪರ್ಯಾಯ ವ್ಯವಸ್ಥೆಯಾದ ಹಾಗೂ ಪ್ರಕೃತಿಗೆ ಹಾನಿಯಾಗದ ಪ್ರವಾಸೋದ್ಯಮವನ್ನು ಬೆಳೆಸಬೇಕೆಂದರು.

ಜಿಲ್ಲಾ ಹೊಟೇಲ್ ಮತ್ತು ರೆಸಾಟ್ರ್ಸ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಕೊಡಗನ್ನು ಪ್ರವಾಹ ಪೀಡಿತ ಪ್ರದೇಶವೆಂದು ಬಿಂಬಿಸಿ ವಿಕೃತ ಸುಖಪಡುತ್ತಿರುವ ವರ್ಗ ಒಂದೆಡೆಯಿದ್ದರೆ, ಜಿಲ್ಲೆಯಿಂದ ಹೊರಭಾಗದಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ಕೆಲವರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಕೊಡಗಿನಲ್ಲಿ ಪ್ರವಾಸೋದ್ಯಮ ಬೇಡವೆಂದು ಸಂದೇಶಗಳನ್ನು ಹರಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಪ್ರವಾಸಿಗರ ಆಗಮನ ತೀವ್ರವಾಗಿ ಕುಸಿಯುತ್ತಿದೆ. ಇನ್ನೊಂದೆಡೆ ಓಯೋ ಸಂಸ್ಥೆ ಕೊಡಗಿನಲ್ಲಿ ನೂರಾರು ಹೋಂ ಸ್ಟೇಗಳನ್ನು ಅನಧಿಕೃತವಾಗಿ ಬಾಡಿಗೆಗೆ ಪಡೆದು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ. ಆ ಗೃಹಗಳಿಗೆ ಬರುತ್ತಿರುವವರು ಯಾರು? ಏನೇನು ವ್ಯವಹಾರ ನಡೆಯುತ್ತಿದೆ ಎಂಬ ದಾಖಲಾತಿ ಯಾರಿಗೂ ಸಿಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಜಿಲ್ಲಾ ಹೋಂ ಸ್ಟೇ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, 10-12 ವರ್ಷಗಳ ಹಿಂದೆ ದಾರಿ ಉದ್ದಕ್ಕೂ ಟೆಂಪೊ ಹಾಗೂ ಇತರ ವಾಹನಗಳಲ್ಲಿ ಬರುವ ಪ್ರವಾಸಿಗರು ತಂಗಲು ವಸತಿಯಿಲ್ಲದ ಪರಿಸ್ಥಿತಿ ಇತ್ತು. ಆದರೆ ಹೋಂ ಸ್ಟೇಗಳು ಪ್ರಾರಂಭವಾದ ನಂತರ ಈ ಸಮಸ್ಯೆಗಳೆಲ್ಲವೂ ಬಗೆಹರಿದವು. ಆದರೆ ಇತ್ತೀಚೆಗೆ ಅನಧಿಕೃತ ಹೋಂ ಸ್ಟೇಗಳ ಸಂಖ್ಯೆ ಹೆಚ್ಚಾಗಿದ್ದು ಹಾಗೂ ಹಲವು ಏಜೆಂಟರುಗಳು ಪ್ರವಾಸಿಗರನ್ನು ಒಪ್ಪಿಸಿ ಬಹಳ ಕಡಿಮೆ ದರದಲ್ಲಿ ರೂಂಗಳನ್ನು ನೀಡುವ ಮೂಲಕ ಅಧಿಕೃತ ಹೋಂ ಸ್ಟೇಗಳಿಗೆ ಪೆಟ್ಟು ಬೀಳುವಂತೆ ಮಾಡಿದೆ ಎಂದರು. ಸರಕಾರವು ಹೋಂ ಸ್ಟೇಗಳ ಮೇಲೆ ಬಹಳ ನಿಯಮಗಳನ್ನು ಹೇರಿದೆ. ಈ ನಿಯಮಗಳಿಂದಾಗಿ ಸಂಸ್ಕøತಿ ವಿನಿಮಯಕ್ಕೆ ಹೆಸರಾಗಿರುವ ಹೋಂ ಸ್ಟೇಗಳಲ್ಲಿ ಆತಿಥ್ಯ ಹಾಗೂ ಸಂಸ್ಕøತಿ ವಿನಿಮಯ ಸಹಜವಾದದ್ದು. ಸರಕಾರವು ಇದರ ಮೇಲೆ ಕಠಿಣ ನಿಯಮಗಳನ್ನು ತರಬಾರದೆಂದು ಹೇಳಿದರು. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅವರು ಮಾತನಾಡಿ, ಕೊಡಗಿನಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಬೇಕೆಂದು ತಿಳಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಒಳ್ಳೆಯ ಗುರಿಯನ್ನಿಟ್ಟುಕೊಂಡು ಕೊಡಗನ್ನು ಉತ್ತಮವಾಗಿ ಬೆಳೆಸಬೇಕೆಂದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಕಾಲೇಜು ಪ್ರಾಂಶುಪಾಲ ಜಗತ್ ತಿಮ್ಮಯ್ಯ ಇವರುಗಳು ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಸಂಜೆ ರಾಜಾಸೀಟ್‍ನಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.