ಗೋಣಿಕೊಪ್ಪಲು, ಸೆ. 27: ರೈತ ಮಹಿಳೆ ಮೇಲೆ ಅರಣ್ಯ ಸಿಬ್ಬಂದಿಗಳು ದೌರ್ಜನ್ಯ ವೆಸಗಿ ಅನಾವಶ್ಯಕ ತೊಂದರೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಖಂಡಿಸಿ ತಿತಿಮತಿ ಅರಣ್ಯ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಮುಂದೆ ಭಾರಿ ಪ್ರತಿಭಟನೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖಾ ಆಧಿಕಾರಿಗಳ ವಿರುದ್ದ ಘೋಷಣೆ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ, ಹಲವು ಸಂಘ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರು ಗಳು ಹಾಗೂ ಸಾರ್ವಜನಿಕರು ಒಟ್ಟು ಸೇರಿ ಅರಣ್ಯ ಇಲಾಖೆಯ ವಿರುದ್ಧ ತಿರುಗಿ ಬಿದ್ದಿದ್ದು ಮತ್ತಿಗೋಡು ಸಮೀಪವಿರುವ ಅರಣ್ಯ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಕಚೇರಿಯ ಹೊರ ಭಾಗದಲ್ಲಿರುವ
(ಮೊದಲ ಪುಟದಿಂದ) ಗೇಟ್ಗೆ ಬೀಗ ಜಡಿದಿರುವದನ್ನು ಖಂಡಿಸಿದ ಪ್ರತಿಭಟನಾಕಾರರು ಅಧಿಕಾರಿಯನ್ನು ಕರೆಸುವಂತೆ ಪಟ್ಟು ಹಿಡಿದರು. ಈ ಸಂದರ್ಭ ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಅಧಿಕಾರಿ ಪ್ರಸನ್ನ ಕುಮಾರ್ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗಿತ್ತು. ಮಹಿಳೆಯ ಮೇಲೆ ಮಾಡಿದ ದೌರ್ಜನ್ಯ ಸಹಿಸಲಾರೆವು ಉದ್ದೇಶಪೂರ್ವಕವಾಗಿ ಕೇಸುಗಳನ್ನು ಹಾಕುವ ಮೂಲಕ ರೈತರ ಹಕ್ಕುಗಳನ್ನು ಕಸಿಯುವ ಪ್ರಯತ್ನ ಇನ್ನು ಮುಂದೆ ನಡೆಯದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆರ್ಎಂಸಿ ಅಧ್ಯಕ್ಷ ವಿನು ಚಂಗಪ್ಪ ರೈತ ಸಂಘದ ಪ್ರಮುಖ ಅದೇಂಗಡ ಅಶೋಕ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಈ ಹಿಂದಿನಿಂದಲೂ ಅರಣ್ಯ ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡಿಕೊಂಡು ಬರುತ್ತಿದ್ದಾರೆ. ಕೂಡಲೇ ಆಗಿರುವ ಪ್ರಮಾದವನ್ನು ಬಗೆಹರಿಸಿ ಇಲ್ಲದಿದ್ದಲ್ಲಿ ರಸ್ತೆ ತಡೆಯುವ ಮಟ್ಟಿಗೆ ಪ್ರತಿಭಟನೆ ತಲಪಬಹುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಬಾನಂಡ ಪ್ರಥ್ವಿ ಮಾತನಾಡಿ, ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಗೇಟ್ಗೆ ಬೀಗ ಜಡಿದು ಭಯಪಡಿಸದಿರಿ ರೈತರೊಂದಿಗೆ ಚೆಲ್ಲಾಟವಾಡದಿರಿ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಅರಣ್ಯ ಸಿಬ್ಬಂದಿಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ಪ್ರಶ್ನಿಸುತ್ತಿದ್ದರೆ ಇವರ ಪ್ರಶ್ನೆಗೆ ಅರಣ್ಯ ಅಧಿಕಾರಿಗಳು ಉತ್ತರಿಸಲಾಗದೇ ಎರಡು ಬಾರಿ ತಮ್ಮ ಕಚೇರಿಗೆ ವಾಪಸ್ಸು ತೆರಳಿ ಮತ್ತೆ ಪ್ರತಿಭಟನಾಕಾರರನ್ನು ಓಲೈಸುವ ಪ್ರಯತ್ನ ನಡೆಸಿದರು.
ಘಟನೆ ಹಿನ್ನೆಲೆ : ತಾ. 26ರಂದು ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೂರು ಗ್ರಾಮದ ಸುಗುಣ ಸೋಮಯ್ಯ ತಮ್ಮ ಕಾಫಿ ತೋಟದಲ್ಲಿದ್ದ ತಮ್ಮ ಸ್ವಾಧೀನದ ಹಂದಿಯನ್ನು ಗುಂಡು ಹೊಡೆದು ಮಾಂಸ ಮಾಡಿದ್ದರು. ಈ ವಿಷಯವನ್ನು ಇವರಿಗೆ ಆಗದ ಗ್ರಾಮದ ಅನಾಮಿಕರೊಬ್ಬರು ಅರಣ್ಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಮಾಡಿರುವ ಬಗ್ಗೆ ಸುದ್ದಿ ತಿಳಿಸಿದ್ದರು.
ಅನಾಮಿಕ ವ್ಯಕ್ತಿ ನೀಡಿದ ಸುದ್ದಿಯನ್ನು ಪರಮಾರ್ಷಿಸದ ಅರಣ್ಯ ಸಿಬ್ಬಂದಿಗಳು ಏಕಾ ಏಕಿ ಸುಗುಣ ಮನೆಗೆ ದೌಡಾಯಿಸಿ ಅರಣ್ಯ ಸಿಬ್ಬಂದಿಗಳು ಮನೆಯಲ್ಲಿದ್ದ ಹಂದಿ ಮಾಂಸ ಸಹಿತ ಸುಗುಣ ಸೋಮಯ್ಯ, ಪತ್ನಿ ಕೆ.ಎಸ್. ಶರೀನಾ ಹಾಗೂ ಮಗನಾದ ಪೊನ್ನಣ್ಣ ಎಂಬವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ರೈತ ಮಹಿಳೆ ಶರೀನಾಳ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಇಲಾಖೆಯ ಜೀಪಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ವ್ಯಕ್ತಗೊಂಡಿದೆ. ಶರೀನಾಳನ್ನು ಸಿಬ್ಬಂದಿಗಳು ತಿತಿಮತಿ ಸಮೀಪದ ಆನೆಚೌಕೂರುವಿನಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೆ ನನ್ನನ್ನು ಕರೆದುಕೊಂಡು ಹೋಗಿ ಬಲವಂತದಿಂದ ಅವರೇ ಬರೆದ ಮುಚ್ಚಳಿಕೆಗೆ ಒತ್ತಾಯಪೂರ್ವಕವಾಗಿ ಸಹಿ ಪಡೆದಿದ್ದಾರೆ. ನಂತರ ರಾತ್ರಿ ವೇಳೆಯಲ್ಲಿ ಇವರನ್ನು ಆನೇಚೌಕೂರು ಕಚೇರಿಯಿಂದ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೊಂದ ಮಹಿಳೆ ಶರೀನಾಳು ಈ ಸುದ್ದಿಯನ್ನು ಗ್ರಾಮಸ್ಥರ ಬಳಿ ತೋಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಸುತ್ತ ಮುತ್ತ ಜನತೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಡೆದುಕೊಂಡ ರೀತಿ ಹಾಗೂ ಬಲವಂತದಿಂದ ಮುಚ್ಚಳಿಕೆಗೆ ಸಹಿ ಪಡೆದು ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಆದೇಂಗಡ ಅಶೋಕ್, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ವಿನು ಚಂಗಪ್ಪ, ಸದಸ್ಯರಾದ ಮಾಚಂಗಡ ಸುಜಾ ಪೂಣಚ್ಚ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಎನ್.ಪ್ರಥ್ವಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ, ಗ್ರಾಮದ ಮುಖಂಡರುಗಳಾದ ಅಡ್ಡೆಂಗಡ ಅರುಣ್, ಕೆ.ಕೆ.ನಾಚಪ್ಪ, ಎ.ಎಸ್.ಬೋಪಣ್ಣ, ಕೆ.ಎಂ. ಅಪ್ಪಚ್ಚು, ಅಳಮೇಂಗಡ ವಿನು, ಸುಕೇಶ್, ಅಶೋಕ್, ಎಂ.ಬಿ. ಕಾರ್ಯಪ್ಪ, ಚೆಕ್ಕೇರ ಸೂರ್ಯ, ಮಲ್ಚೀರ ಗಿರೀಶ್, ಆಲೆಮಾಡ ಮಂಜುನಾಥ್, ಮಲ್ಚೀರ ಅಶೋಕ್, ಪುಚ್ಚಿಮಾಡ ಸಂತೋಷ್, ತೀತರಮಾಡ ಸುನೀಲ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಶ್ರೀಮಂಗಲ ಠಾಣಾಧಿಕಾರಿ ಸಾಬು, ಕುಟ್ಟ ಠಾಣಾಧಿಕಾರಿ ಚಂದ್ರು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಪೊಲೀಸರು ಜಮಾವಣೆಗೊಂಡಿದ್ದರು. ಅಂತಿಮವಾಗಿ ತೊಂದರೆ ನೀಡಿ ದೌರ್ಜನ್ಯ ಮಾಡಿರುವ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಎಸಿಎಫ್ ಪ್ರಸನ್ನ ಕುಮಾರ್ರವರಿಗೆ ಮನವಿ ಸಲ್ಲಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.