ಎರಡು ಎಕರೆ ಜಾಗ ನೀಡಿದ ಟಾಟಾ ಸಂಸ್ಥೆ
ಸುಂಟಿಕೊಪ್ಪ, ಸೆ. 27: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಲವಾರು ವರ್ಷಗಳ ಸಮಸ್ಯೆಯಾದ ಕಸ ವಿಲೇವಾರಿಗೆ ಟಾಟಾ ಕಾಫಿ ಸಂಸ್ಥೆ 2 ಎಕರೆ ಜಾಗವನ್ನು ಉಚಿತವಾಗಿ ನೀಡುವ ಮೂಲಕ ಮುಕ್ತಿ ದೊರಕಿಸಿದೆ.
ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ತಿರುಗಾಡುವ ಪ್ರವಾಸಿಗಾರಿಗೆ,ಸಾರ್ವಜನಿಕರಿಗೂ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಂಟಿಕೊಪ್ಪದ ಸೌಂದರ್ಯಕ್ಕೆ ಇದೊಂದು ಕಪ್ಪುಚುಕ್ಕೆಯಾಗಿ ಕಾಡಿತ್ತು. ಜಿಲ್ಲಾಡಳಿತ ಹಲವು ಬಾರಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೋಟೀಸ್ ನೀಡಿದ್ದಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಬಂಧಿಸುವ ಮಟ್ಟಕ್ಕೆ ಸಮಸ್ಯೆ ಉಲ್ಬಣಗೊಂಡಿವೆ.
ಸುಂಟಿಕೊಪ್ಪ ಗ್ರೇಡ್ 1 ಪಂಚಾಯಿತಿಗೆ 3 ದಶಕಗಳಿಂದ ಕಸ ವಿಲೇವಾರಿಗೆ ಸೂಕ್ತ ಜಾಗ ಸಿಗದೆ ಆಡಳಿತ ಮಂಡಳಿಯವರು ಜಾಗ ಹುಡುಕಾಟದಲ್ಲಿ ತೊಡಗಿದ್ದರು. 2003ನೇ ಗ್ರಾ.ಪಂ. ಪ್ರಭಾರ ಅಧ್ಯಕ್ಷರಾಗಿದ್ದ ದಿ. ಎಂ.ಎ. ಗಂಗಾಧರ ಅವರು ಈಗಿನ ಸ್ವಸ್ಥ ಪುನರ್‍ವಸತಿ ಕೇಂದ್ರದ ಸಮೀಪ ಜಾಗವನ್ನು ಗ್ರಾ.ಪಂ.ನ ಕಸ ವಿಲೇವಾರಿಗಾಗಿ ಸ್ವಾಧೀನ ಪಡೆಯುವ ಗುರಿ ಹೊಂದಿದ್ದರು. ಆದರೆ ಆದಾಗಲೇ ‘ಸ್ವಸ್ಥ’ ವಿಕಲಚೇತನ ಮಕ್ಕಳ ಪುನರ್‍ವಸತಿ ಶಾಲೆಯು ನಡೆಯುತ್ತಿದೆ ಎಂದು ಟಾಟಾ ಎಸ್ಟೇಟ್ ಕಂಪೆನಿಯಿಂದ ಉತ್ತರ ಬಂದಿತ್ತು. ಅಂತೂ ಕಸ ವಿಲೇವಾರಿಗಾಗಿ ಜಾಗದ ತಲಾಶೆಯಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ಮುಂದುವರೆದಿತ್ತು. ಏತನ್ಮಧ್ಯೆ 2006ರಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಫ್. ಸಬಾಸ್ಟಿನ್ ಹಾಗೂ ಮೊಣ್ಣಪ್ಪ ಪೂಜಾರಿ ಅವರ ನೇತೃತ್ವದ ಆಡಳಿತ ಮಂಡಳಿ ಸದಸ್ಯರುಗಳು ಸ್ವಸ್ಥ ಜಾಗದ ಬದಲಾಗಿ ಪನ್ಯ ತೋಟದ ಗಡಿಯ ಪಕ್ಕದ ಜಾಗ ಗುರುತಿಸಿದ್ದರು. ಟಾಟಾ ಕಾಫಿ ಎಸ್ಟೇಟಿನ ಅಧಿಕಾರಿಗಳ ಬಳಿ ಕನಿಷ್ಟ 2 ಎಕರೆ ಜಾಗ ಗ್ರಾ.ಪಂ.ನ ಕಸ ವಿಲೇವಾರಿಗೆ ಬಿಟ್ಟುಕೊಡಲು ಮನವಿ ಸಲ್ಲಿಸಿದಾಗ ಹಿಂದೇಟು ಹಾಕಿದ ಟಾಟಾ ಕಾಫಿ ಸಂಸ್ಥೆಯವರಿಗೆ ಗ್ರಾ.ಪಂ.ನಿಂದ 2 ಎಕರೆ ಜಾಗಕ್ಕೆ ರೂ. 3 ಲಕ್ಷ ಡಿಡಿ ಮೂಲಕ ಪಾವತಿಸಲಾಗಿತ್ತು.
2005ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸುಭೋದ್ ಯಾದವ್ ಅವರು ವಿಶೇಷ ಆಸಕ್ತಿ ವಹಿಸಿ ಟಾಟಾ ಎಸ್ಟೇಟ್‍ನ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಅವರ ಮನವೊಲಿಸಿ ಜಾಗ ಮಂಜೂರಾತಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಆ ನಂತರ ಬಂದ ಆಡಳಿತ ಮಂಡಳಿ ಪಿಡಿಓ, ಕಾರ್ಯದರ್ಶಿಗಳ ಇಚ್ಛಾಶಕ್ತಿ ಕೊರತೆಯಿಂದ ಟಾಟಾ ಎಸ್ಟೇಟಿನವರು ನೀಡಿದ ಜಾಗದ ಆರ್‍ಟಿಸಿ ದಾಖಲೆಯನ್ನು ಗ್ರಾ.ಪಂ. ಖಾತೆಗೆ ವರ್ಗಾಯಿಸುವಲ್ಲಿ ಸಫಲರಾಗಲಿಲ್ಲ.
ಕಳೆದ 2 ವರ್ಷಗಳಿಂದ ಪಿಡಿಓ ಆಗಿದ್ದ ಬಿ.ಜೆ. ಮೇದಪ್ಪ ಅವರು ಆಡಳಿತ ಮಂಡಳಿಯ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ, ಅವರ ಸಂಪೂರ್ಣ ಸಹಕಾರದಿಂದ ಜಿಲ್ಲಾಡಳಿತ, ಜಿ.ಪಂ., ತಾ.ಪಂ.ನೊಂದಿಗೆ ಸಂಪರ್ಕವಿರಿಸಿ ವ್ಯವಹರಿಸಿದ್ದರಿಂದ ಟಾಟಾ ಎಸ್ಟೇಟ್‍ನ ಪ್ರಧಾನ ವ್ಯವಸ್ಥಾಪಕ ಎಂ.ಬಿ. ಗಣಪತಿ ಹಾಗೂ ಟಾಟಾ ಎಸ್ಟೇಟಿನ ಕಾನೂನು ಸಲಹೆಗಾರ ವಿಜಯ್ ಕಾರ್ನಡ್ ಅವರು ತಾ.25-09-2019 ರಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಖಾತೆಗೆ 2 ಎಕರೆ ಜಾಗವನ್ನು ಉಪನೋಂದಾಣೆ ಕಚೇರಿಯಲ್ಲಿ ನೋಂದಾಯಿಸಿ ಕೊಟ್ಟಿದ್ದಾರೆ.
ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಿಡಿಓ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನೋಂದಾವಣೆಗೊಳಿಸಿ ದಾಖಲಾತಿಯನ್ನು ಹಸ್ತಾಂತರಿಸಿದರು.
ಇದರಿಂದ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾ.ಪಂ. ಕಸವಿಲೇವಾರಿ ಜಾಗಕ್ಕೆ ಮುಕ್ತಿ ಸಿಕ್ಕಿದಂತಾಗಿದೆ.