ಮಡಿಕೇರಿ, ಸೆ. 27: ಕೊಡಗು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗೂ ಜಿಲ್ಲೆಯ ಮೂರು ತಾಲೂಕು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ತೋಳೂರು ಶೆಟ್ಟಳ್ಳಿಯ ವಿವಿಧ ಮಹಿಳಾ ಒಕ್ಕೂಟಗಳ ಸಹಕಾರದೊಂದಿಗೆ ಅಕ್ಟೋಬರ್ 29ರಂದು ಸೋಮವಾರಪೇಟೆಯಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಾನಪದನೃತ್ಯ, ಜಾನಪದಗೀತೆ, ನಾಟಕ, ಶಾಸ್ತ್ರೀಯ ಗಾಯನ, ಹಾರ್ಮೋನಿಯಂ, ಗಿಟಾರ್, ಆಶುಭಾಷಣ, ಸ್ಪರ್ಧೆಗಳು ನಡೆಯಲಿದ್ದು, 15ರಿಂದ 35 ವರ್ಷದೊಳಗಿನ ಯುವಕ - ಯುವತಿಯರು ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳೂ ಪಾಲ್ಗೊಳ್ಳಬಹುದಾಗಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ತಾಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಆದರ್ಶ್, ಸದಸ್ಯರಾದ ಮಹೇಶ್, ಕುಶಾಲಪ್ಪ, ಹರೀಶ್ ಎಂ.ಡಿ., ಅಂಬಿಕಾ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.