ಮಡಿಕೇರಿ, ಸೆ. 28: ಮಡಿಕೇರಿ ದಸರಾ ಜನೋತ್ಸವಕ್ಕೆ ಈ ಬಾರಿಯಿಂದ ಜಾನಪದ ಸಂಭ್ರಮವೂ ಸೇರ್ಪಡೆಯಾಗಿದೆ. ಇದೇ ಅ. 3 ರಂದು ಮಡಿಕೇರಿಯಲ್ಲಿ ಕೊಡಗು ಜಾನಪದ ಉತ್ಸವವೂ ಆಯೋಜಿತ ವಾಗಿದೆ. ರಾಜ್ಯದ ವಿವಿಧ ಜಾನಪದ ಕಲಾತಂಡಗಳಿಂದ ಅತ್ಯಾಕರ್ಷಕ ಜಾನಪದ ಕಾರ್ಯಕ್ರಮಗಳು ಉತ್ಸವದ ವಿಶೇಷವಾಗಿದೆ. ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅ. 3 ರಂದು ಕೊಡಗು ಜಾನಪದ ಉತ್ಸವವು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಸಹಯೋಗದಲ್ಲಿ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ಮಂಗಳೂರು ರಸ್ತೆಯಿಂದ ಗಾಂಧಿ ಮೈದಾನದವರೆಗೆ ವೈವಿಧ್ಯಮಯ ಜಾನಪದ ಕಲಾ ಜಾಥಾವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ನೂರಾರು ಕಲಾವಿದರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.ಮೂರ್ನಾಡು ಹೋಬಳಿ ಜಾನಪದ ಪರಿಷತ್ ವತಿಯಿಂದ ಜಾನಪದ ಪರಿಕರಗಳ ಪ್ರದರ್ಶನ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಜಾನಪದ ಉತ್ಸವವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ (ಮೊದಲ ಪುಟದಿಂದ) ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ .ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ದಸರಾ ಸಮಿತಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ, ಪುತ್ತೂರಿನ ಹೆಸರಾಂತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಪ್ರಧಾನ ಭಾಷಣ ಮಾಡಲಿದ್ದು, ಮಧ್ಯಾಹ್ನದ ಬಳಿಕ 4 ಗಂಟೆಗಳ ಕಾಲ ಹಲವಾರು ಕಲಾತಂಡ ಗಳಿಂದ ವೈವಿಧ್ಯಮಯ ಜಾನಪದ ನೃತ್ಯ, ಗಾಯನ ಪ್ರದರ್ಶನ ಆಯೋಜಿತವಾಗಿದೆ. ಇದೇ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸಾಹಿತ್ಯ ಸೇವೆಗೆ ವೈಲೇಶ್ ಮತ್ತು ಜಾನಪದ ಗಾಯಕ ಚಕ್ಕೇರ ತ್ಯಾಗರಾಜ್ ಅವರನ್ನು ಸನ್ಮಾನಿಸ ಲಾಗುತ್ತದೆ ಎಂದು ಅನಂತಶಯನ ತಿಳಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಹೆಸರಾಂತ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ಸುಮಾರು 5.50 ಲಕ್ಷ ರೂ. ವೆಚ್ಚದಲ್ಲಿ ಆಯೋಜಿತ ಜಾನಪದ ಉತ್ಸವಕ್ಕೆ ಮಡಿಕೇರಿ ನಗರ ದಸರಾ ಸಮಿತಿಯಿಂದ 1 ಲಕ್ಷ ರೂ. ಲಭಿಸಿದ್ದು ಉಳಿದ ಹಣವನ್ನು ದಾನಿಗಳಿಂದ ಕ್ರೋಢೀಕರಿಸಲಾಗುತ್ತಿದೆ ಎಂದು ಅನಂತಶಯನ ಮಾಹಿತಿ ನೀಡಿದರು.

ಕೊಡಗು ಜಾನಪದ ಉತ್ಸವ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ಮಾತನಾಡಿ, ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಜಾನಪದ ಉತ್ಸವ ಆಯೋಜಿತವಾಗಿದ್ದು, ಜಿಲ್ಲೆಯಾದ್ಯಂತ ಇರುವ ವಿವಿಧ ಜಾನಪದ ಕಲಾಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ತಾಲೂಕು ಜಾನಪದ ಪರಿಷತ್‍ನಿಂದ ಸಿರಿ ಹೆಸರಿನ ವಾರ್ತಾಸಂಚಿಕೆ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಘಟಕ, ಮೂರ್ನಾಡು, ಶನಿವಾರ ಸಂತೆ, ಸೋಮವಾರಪೇಟೆ, ಗೋಣಿಕೊಪ್ಪ ಹೋಬಳಿ ಘಟಕಗಳ ಸಹಯೋಗದಲ್ಲಿ ಜಿಲ್ಲಾ ಜಾನಪದ ಉತ್ಸವವನ್ನು ಆಯೋಜಿಸ ಲಾಗುತ್ತಿದೆ ಎಂದು ತಿಳಿಸಿದರು.

ಪಾಲ್ಗೊಳ್ಳುವ ಕಲಾತಂಡಗಳು

ರಾಮನಗರದ ಚಿಕ್ಕನರಸಯ್ಯ ತಂಡದಿಂದ ಪಟಕುಣಿತ, ಪಾಂಡವ ಪುರದ ಶಿವಮಾದು ತಂಡದಿಂದ ಪೂಜಾ ಕುಣಿತ, ಕೃಷ್ಣೇಗೌಡ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ರಾಮನಗರದ ಪಾರ್ಥಸಾರಥಿ ತಂಡ ದಿಂದ ಡೊಳ್ಳು ಕುಣಿತ, ಮದ್ದೂರಿನ ಸಂತೋಷ್ ಮತ್ತು ತಂಡದಿಂದ ವೀರಗಾಸೆ, ಉತ್ತರ ಕರ್ನಾಟಕದ ಗೊಂದಳಿ ಅಂಬಾಜಿ ಸುಗತೇಕರ ತಂಡದಿಂದ ಗೊಂದಳಿ ಹಾಡು, ಮಡಿಕೇರಿಯ ನಾಟ್ಯ ಗಣಪತಿ ತಂಡದಿಂದ ಸುಗ್ಗಿಕುಣಿತ, ಸ್ಫೂರ್ತಿ ಮಹಿಳಾ ತಂಡದಿಂದ ಜಾನಪದ ಹಾಡು, ಸೋಮವಾರಪೇಟೆಯ ಕಾವೇರಿ ಕಲಾತಂಡದಿಂದ ಜನಪದ ನೃತ್ಯ, ಮೆಹಕ್ ಫಾತಿಮಾ ಜಾನಪದ ಗೀತೆ, ಹಿರಿಯ ಕಲಾವಿದೆ ರಾಣಿಮಾಚಯ್ಯ ತಂಡದಿಂದ ಉಮ್ಮತ್ತಾಟ್, ವೀರಾಜಪೇಟೆಯ ವಿಲಿನಾ ಮತ್ತು ತಂಡದಿಂದ ಕ್ರೈಸ್ತ ಧರ್ಮದ ಜಾನಪದ ನೃತ್ಯ, ರಾಜ್ಯ ಪ್ರಶಸ್ತಿ ವಿಜೇತ ಬಾಳೆಲೆಯ ಜೇನುಕುರುಬರ ಮರಿ ಮತ್ತು ದಾಸಿ ತಂಡದಿಂದ ಸೋರೆಬುರುಡೆ ನೃತ್ಯ, ತೋರ ಗ್ರಾಮದ ಶಾರದಾ ಮತ್ತು ತಂಡದಿಂದ ಉರ್‍ಟಿ ಕೊಟ್ಟ್ ನೃತ್ಯ, ಬಿ.ಆರ್. ಸತೀಶ್, ಟಿ.ಡಿ. ಮೋಹನ್ ತಂಡದಿಂದ ಜಾನಪದ ಕಲಾಕುಂಚ ಗಾನ, ಸಂಪಾಜೆಯ ಚಡಾವುನ ನೇತಾಜಿ ಗೆಳೆಯರ ಬಳಗದಿಂದ ಕಂಗೀಲು ನೃತ್ಯ, ಪುತ್ತೂರಿನ ಕೊಂಬೆಟ್‍ನ ಮರಾಠೆ ಯುವವೇದಿಕೆ ಯಿಂದ ಕಂಸಾಳೆ ನೃತ್ಯ, ಶಾಂತಳ್ಳಿಯ ಬಿ.ಎ. ಗಣೇಶ್ ಅವರಿಂದ ಜಾನಪದ ಹಾಡು, ಸೋಮವಾರಪೇಟೆಯ ಪ್ರಗತಿ ಪರ ಮಹಿಳಾ ವೇದಿಕೆಯಿಂದ ವಾಲಗ ನೃತ್ಯ, ಕಡಗದಾಳು ಸರ್ಕಾರಿ ಶಾಲಾ ಮಕ್ಕಳಿಂದ ಕೊಡವ ಜಾನಪದ ನೃತ್ಯ, ಮಡಿಕೇರಿಯ ಹ್ಯಾರೀಸ್ ಮತ್ತು ತಂಡದಿಂದ ದಫ್ ನೃತ್ಯ, ಭಾಗಮಂಡಲದ ಮಿಲನ ಮತ್ತು ತಂಡದಿಂದ ಜಾನಪದ ವೈಭವ, ಮಡಿಕೇರಿಯ ಸೋನು ಪ್ರೀತಾ ತಂಡದಿಂದ ಜಾನಪದ ಗೀತಾ ಗಾಯನ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಮಕ್ಕಳಿಂದ ಸುಗ್ಗಿ ನೃತ್ಯ, ಭಾಗಮಂಡಲದ ಜ್ಞಾನೋದಯ ಶಾಲಾ ತಂಡದಿಂದ ಸೋಲಿಗರ ನೃತ್ಯ, ಮಾಲ್ದಾರೆಯ ಮುತ್ತಪ್ಪ ತಂಡದಿಂದ ಚಂಡೆವಾದ್ಯ, ಸೇರಿದಂತೆ ಮತ್ತಷ್ಟು ತಂಡಗಳಿಂದ ಅ. 3 ರಂದು ಮಧ್ಯಾಹ್ನ 12.30 ರಿಂದ ಸುಮಾರು 4 ಗಂಟೆಗಳ ಜಾನಪದ ವೈಭವ ಪ್ರದರ್ಶಿತಗೊಳ್ಳಲಿದೆ ಎಂದು ಕೊಡಗು ಜಾನಪದ ಉತ್ಸವ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್, ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು.