ಮಡಿಕೇರಿ, ಸೆ. 28: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಕ್ಕೆ ತಾ. 29ರಂದು (ಇಂದು) ಕರಗ ಪೂಜೆಯೊಂದಿಗೆ ಚಾಲನೆ ದೊರೆಯಲಿದೆ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದರು.ನಗರಸಭೆ ಸಂಕೀರ್ಣದ ಸಮಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾ. 29ರಂದು ಸಂಜೆ 5.30ಕ್ಕೆ ನಗರದ ಪಂಪ್‍ಕೆರೆ ಬಳಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕರಗ ಮಹೋತ್ಸವ ಆರಂಭಗೊಳ್ಳಲಿದೆ ಎಂದು ವಿವರಿಸಿದರು.ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸೇರಿದಂತೆ ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮಹಾ ಪೋಷಕರುಗಳಾದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರೀಯ ಸೇರಿದಂತೆ ಜಿಲ್ಲೆಯ ಇತರ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ತಿಳಿಸಿದರು.ತಾ. 30ರಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ತಾ. 8 ವಿಜಯದಶಮಿ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ, ಪ್ರತಿ ದಿನ ಸಂಜೆ 6 ಗಂಟೆಯಿಂದ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿರುವದಾಗಿ ತಿಳಿಸಿದರು. ತಾ. 2ರಂದು ಮಕ್ಕಳ ದಸರಾ, ತಾ. 3ರಂದು ಜಾನಪದ ಉತ್ಸವ, ತಾ. 4ರಂದು ದಸರಾ ಕವಿಗೋಷ್ಠಿ ಹಾಗೂ ತಾ. 5ರಂದು ಯುವ ದಸರಾದೊಂದಿಗೆ ತಾ. 6ರಂದು ವಿವಿಧ ಸ್ಪರ್ಧೆಗಳು ಜರುಗಲಿದೆ ಎಂದು ರಾಬಿನ್ ಮಾಹಿತಿ ನೀಡಿದರು. ತಾ. 7ರಂದು ಆಯುಧ ಪೂಜೆ ಮತ್ತು ತಾ. 8ರಂದು ವಿಜಯದಶಮಿಯೊಂದಿಗೆ ದಶ ಮಂಟಪೋತ್ಸವ ಹಾಗೂ ರಸಮಂಜರಿ ಏರ್ಪಡಿಸಲಾಗಿದೆ ಎಂದರು.

ಅಂದಿನ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ರಾಜ್ಯ ಕನ್ನಡ ಸಂಸ್ಕøತಿ ಸಚಿವ ಸಿ.ಟಿ. ರವಿ ಸೇರಿದಂತೆ ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುತ್ತಿರುವದಾಗಿ ವಿವರಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ನೆರವಂಡ ಜೀವನ್, ಅರುಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ, ಗೌರವ ಸಲಹೆಗಾರ ಮಧುರಯ್ಯ ಉಪಸ್ಥಿತರಿದ್ದರು.