ಶನಿವಾರಸಂತೆ, ಸೆ. 26: ಮದ್ಯಪಾನ ಇತ್ಯಾದಿ ದುಶ್ಚಟಗಳಿಂದ ವೈಯಕ್ತಿಕ ಬದುಕು ಹಾಳಾಗುವದರ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸಂಸ್ಥಾಪಕ ಅಧ್ಯಕ್ಷ ಅಭಿಮನ್ಯು ಕುಮಾರ್ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕೊಡ್ಲಿಪೇಟೆಯ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಅ. 17 ರಿಂದ 24 ರವರೆಗೆ ನಡೆಯಲಿರುವ 1417ನೇ ಮದ್ಯವರ್ಜನ ಶಿಬಿರದ ರೂಪುರೇಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮದ್ಯವ್ಯಸನದಿಂದ ಜನತೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದುಶ್ಚಟಮುಕ್ತ ಸಮಾಜ ಪರಿಕಲ್ಪನೆಯ ಯಶಸ್ಸಿಗೆ ಸರ್ವರ ಸಹಕಾರ ಮುಖ್ಯವಾಗಿದೆ ಎಂದರು. ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಡಾ. ವೀರೇಂದ್ರ ಹೆಗಡೆ ಅವರ ಪರಿಕಲ್ಪನೆಯಡಿ ಸ್ಥಾಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದಾದ್ಯಂತ ಸ್ವಸಹಾಯ ಸಂಘಗಳ ಮೂಲಕ ಜನಪರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಯೋಜನೆಯ ಹತ್ತುಹಲವು ಕಾರ್ಯಕ್ರಮಗಳಲ್ಲಿ ಸಮಾಜ ಜಾಗೃತಿಯು ಒಂದಾಗಿದ್ದು, ದುಶ್ಚಟಗಳಲ್ಲಿ ಒಂದಾದ ಮದ್ಯ ವ್ಯಸನವನ್ನು ಹೋಗಲಾಡಿಸುವ ಉದ್ದೇಶದಿಂದ ಮದ್ಯವರ್ಜನ ಶಿಬಿರ ನಡೆಸಲಾಗುತ್ತಿದೆ. ರಾಜ್ಯದಾದ್ಯಂತ 1416 ಶಿಬಿರಗಳು ನಡೆದಿದ್ದು, ಲಕ್ಷ ಜನರು ವ್ಯಸನದಿಂದ ಮುಕ್ತರಾಗಿ ನೆಮ್ಮದಿಯ ಬದುಕು ಬಾಳುತ್ತಿದ್ದಾರೆ ಎಂದರು.
ವೇದಿಕೆಯ ಉಪಾಧ್ಯಕ್ಷ ಚಂದ್ರಮೋಹನ್ ಮಾತನಾಡಿದರು. ಸದಸ್ಯ ಲೋಕೇಶ್ ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದರು. ಮದ್ಯವರ್ಜನ ಶಿಬಿರದ ಉಪಸಮಿತಿಯ ಗೌರವ ಅಧ್ಯಕ್ಷರಾಗಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಸ್ಥಾಪನಾ ಸಮಿತಿ ಅಧ್ಯಕ್ಷೆ ಶಿಲ್ಪ, ಎಸ್.ಎಸ್. ವರಪ್ರಸಾದ್, 4 ಮಂದಿ ಉಪಾಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಯೋಜನೆಯ ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಮೇಶ್, ವೇದಿಕೆ ಜಿಲ್ಲಾ ಸದಸ್ಯ ಭಗವಾನ್ ಗೌಡ, ಜಾಮೀಯ ಮಸೀದಿ ಅಧ್ಯಕ್ಷ ಜಮೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.