(ವಿಶೇಷ ವರದಿ. ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಸೆ. 26: ಜಿಲ್ಲೆಯಲ್ಲಿಯೇ ಅತ್ಯಧಿಕ ವರಮಾನವಿರುವ ವಾಣಿಜ್ಯ ಕೇಂದ್ರ ಎಂದೇ ಕರೆಯಲ್ಪಡುವ ಗೋಣಿಕೊಪ್ಪ ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣದಲ್ಲಿ ಕುಡುಕರ, ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.

ಪಂಚಾಯಿತಿಯ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿದ್ದು ಅಭಿವೃದ್ದಿ ಕಾರ್ಯಗಳೆಲ್ಲ ಮಣ್ಣು ಪಾಲಾಗಿವೆ. ಯಾವೊಬ್ಬ ಸದಸ್ಯನು ಅಭಿವೃದ್ದಿ ಕಡೆಗೆ ಗಮನ ನೀಡದೇ ಇರುವದು ಇಲ್ಲಿಯ ಜನತೆಯ ಆಕ್ರೋಶಕ್ಕೆ ಕಾರಣವಾಗಿವೆ.

ದಿನದಿಂದ ದಿನಕ್ಕೆ ಗೋಣಿಕೊಪ್ಪ ಮಾರ್ಗ ಖಾಸಗಿ, ರಾಜ್ಯ ರಸ್ತೆ ಸಾರಿಗೆ, ಅಂತರರಾಜ್ಯ ರಸ್ತೆ ಒತ್ತಡದಿಂದಾಗಿ ಸಮಸ್ಯೆಯಾಗುತ್ತಿದೆ. ಇರುವ ತಾತ್ಕಾಲಿಕ ಬಸ್ ನಿಲ್ದಾಣ ಶುಚಿತ್ವವಿಲ್ಲದೆ. ಧೂಮಪಾನಿಗಳ, ಮದ್ಯವ್ಯಸನಿಗಳ ತಾಣವಾಗಿದೆ. ಈ ನಿಲ್ದಾಣದಲ್ಲಿ ರಾತ್ರಿಯಂತೂ ವಿದ್ಯುತ್ ದೀಪವಿಲ್ಲದೆ ಪುಂಡ ಪೋಕರಿಗಳು ನಿದ್ರೆ ಮಾಡುವ ಸ್ಥಳವಾಗಿದೆ. ಸುಸಂಕೃತರು, ಮಹಿಳೆಯರು ನಿಲ್ದಾಣದ ಒಳಗೆ ಕಾಲಿಡುವಂತಿಲ್ಲ. ಕುಡಿಯುವ ನೀರಿಗಂತೂ ಅವಕಾಶವೇ ಇಲ್ಲ. ಬಾಯಾರಿಕೆಯಾದವರು ಸಮೀಪದ ಬೇಕರಿ ಹೋಟೆಲ್‍ಗೆ ತೆರಳಬೇಕಾದ ಅನಿವಾರ್ಯತೆ. ಸಾರ್ವಜನಿಕ ಅನುಕೂಲಕ್ಕಾಗಿ ಕುಡಿಯುವ ನೀರು ಕಲ್ಪಿಸಬೇಕಾದ ಪಂಚಾಯ್ತಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಿಲ್ದಾಣದ ಒಳಗೆ ಬೀದಿ ನಾಯಿಗಳು ನಿದ್ರಿಸುತ್ತಿದ್ದು ಭಯದ ವಾತಾವರಣ ನಿರ್ಮಿಸಿದೆ. ಶುಚಿತ್ವದ ಬಗ್ಗೆ ಕಾಳಜಿ ವಹಿಸದ ಪಂಚಾಯ್ತಿ ಮುಂಜಾನೆ ಒಂದು ಬಾರಿ ಪೌರ ಕಾರ್ಮಿಕರಿಂದ ಗುಡಿಸಿ ಸುಮ್ಮನಾಗುತ್ತಿದ್ದಾರೆ. ಕುಡುಕರಿಗೆ ಹೇಳಿ ಮಾಡಿಸಿದ ಜಾಗ ಇದಾಗಿದ್ದು, ಪ್ರಯಾಣಿಕರು ಕುಳಿತುಕೊಳ್ಳುವ ಕುರ್ಚಿಯಲ್ಲಿ ಆರಾಮವಾಗಿ ನಿದ್ರಿಸುತ್ತಿದ್ದಾರೆ. ನಿಲ್ದಾಣದ ಸಮಸ್ಯೆ ಬಗ್ಗೆ ಗ್ರಾಮ ಸಭೆಗಳಲ್ಲಿ ವ್ಯಾಪಕ ಚರ್ಚೆಯಾದರೂ ಈ ಬಗ್ಗೆ ಇನ್ನೂ ಕೂಡ ಕ್ರಮ ವಹಿಸಿಲ್ಲ.

ಮೈಸೂರಿನತ್ತ ತೆರಳುವ ಬಸ್‍ಗಳು ಇಲ್ಲಿನ ರಿಫಾರ್‍ಮರ್ಸ್ ಕ್ಲಬ್ ಮುಂಭಾಗವೇ ನಿಲ್ಲುವಂತಾಗಿರುವದರಿಂದಾಗಿ ಮುಖ್ಯ ರಸ್ತೆಯ ಮೇಲೆ ಅಧಿಕ ಒತ್ತಡ ಉಂಟಾಗಿ ಇತರ ಲಘು ವಾಹನಗಳು, ಸರಕು ಸಾಗಾಟ ವಾಹನಗಳು, ಪಾದಚಾರಿಗಳು, ಶಾಲಾ-ಕಾಲೇಜು, ವಿದ್ಯಾರ್ಥಿಗಳು, ಪ್ರಯಾಣಿಕರು ನಿರಂತರ ಬವಣೆ ಎದುರಿಸಬೇಕಾಗಿದೆ. ಕೋಟಿಗಟ್ಟಲೆ ಬಂಡವಾಳ ಕ್ರೋಢೀಕರಣವಾಗುವ ಪಂಚಾಯ್ತಿಯಲ್ಲಿ ಮೂಲ ಸೌಕರ್ಯಗಳು ನಾಗರಿಕರಿಗೆ ಮರೀಚಿಕೆಯಾಗಿದೆ. ಶೌಚಾಲಯ ಸೇರಿದಂತೆ ಮಾಂಸ, ಮೀನು ಮಾರುಕಟ್ಟೆಯಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಗೋಣಿಕೊಪ್ಪಲಿನ ಕಾರು ನಿಲ್ದಾಣ, ಜೀಪು ನಿಲ್ದಾಣ, ಮಿನಿ ಲಾರಿ, ಆಟೋ, ಗೂಡ್ಸ್ ಆಟೋ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದಟ್ಟಣೆ ವಿಪರೀತವಾಗಿದೆ.

ಗಬ್ಬು ನಾರುತ್ತಿರುವ ಪಬ್ಲಿಕ್ ಟಾಯ್ಲೆಟ್.!

ಕಳೆದ ಒಂದು ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದಿಂದ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶೌಚಾಲಯ ಪ್ರವೇಶಕ್ಕೆ ಇಲ್ಲಿನ ಗುತ್ತಿಗೆದಾರ ಸಾರ್ವಜನಿಕರಿಂದ 5 ರೂ. ಸಂಗ್ರಹಿಸುತ್ತಿದ್ದಾರೆ. ಆದರೆ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಪೈಪ್‍ಗಳು ಹೊಡೆದು ತೂರಾಡುತ್ತಿವೆ. ಎಲ್ಲೆಂದರಲ್ಲಿ ಬಾಟಲಿಗಳು, ರಾರಾಜಿಸುತ್ತಿವೆ. ಬೀಡಿ-ಸಿಗರೇಟುಗಳ ತುಂಡುಗಳು ಗುಡ್ಡೆ ಗುಡ್ಡೆಗಳಾಗಿವೆ. ಗೋಡೆಗಳೆಲ್ಲವು ಬಣ್ಣ ಕಳೆದುಕೊಂಡಿವೆ. ರಾತ್ರಿ ವೇಳೆಯಲ್ಲಿ ವಿದ್ಯುಚ್ಛಕ್ತಿ ಇಲ್ಲದಿದ್ದಲ್ಲಿ ಇದರ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಂದ ದುಬಾರಿ ಹಣ ಸಂಗ್ರಹಿಸಿ ಪಂಚಾಯ್ತಿ ಇದರಿಂದ ಆದಾಯ ಮಾಡಿಕೊಂಡಿದ್ದರೂ ಇದರ ನಿರ್ವಹಣೆಯ ಬಗ್ಗೆ ಕ್ರಮ ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.