ಮಡಿಕೇರಿ, ಸೆ. 26: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಬೆಟ್ಟಗೇರಿ ಗ್ರಾ.ಪಂ. ಮತ್ತು ಉದಯ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಬೆಟ್ಟಗೇರಿ ಗ್ರಾ.ಪಂ. ಸದಸ್ಯರಾದ ತೀರ್ಥ ಪ್ರಸಾದ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಮೇಲ್ವಿಚಾರಕ ಎಂ. ಮಹದೇವಪ್ಪ, ಕ್ಷಯರೋಗವು ಮೈಕ್ರೋ ಬ್ಯಾಕ್ಟೀರಿಯಂ ಟ್ಯುಬರ್‍ಕ್ಯುಲೊಸಿಕ್ ಎಂಬ ಕ್ರಿಮಿಯಿಂದ ಬರುತ್ತದೆ. ರೋಗಿಯು ಕೆಮ್ಮಿದಾಗ ಈ ಕ್ರಿಮಿಗಳು ಕಫದ ತುಂತುರು ಹನಿಗಳ ರೂಪದಲ್ಲಿ ವಾತಾವರಣವನ್ನು ಸೇರಿ ರೋಗ ಹರಡಲು ಕಾರಣವಾಗುತ್ತದೆ ಎಂದು ಮಾಹಿತಿ ನೀಡಿದರು.

ಎರಡು ವಾರಕ್ಕಿಂತಲೂ ಹೆಚ್ಚಿನ ಅವಧಿಯ ಕೆಮ್ಮು, ಕಫ ಮತ್ತು ಕಫದಲ್ಲಿ ರಕ್ತ ಕಾಣಿಸಿಕೊಳ್ಳುವದು, ಉಸಿರಾಟದ ತೊಂದರೆ, ಹಸಿವು ಮತ್ತು ತೂಕ ಕಡಿಮೆಯಾಗುವದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಪರಿಹಾರ ಮಾರ್ಗವಾಗಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆಯನ್ನು ಮಾಡಿ ಕ್ಷಯರೋಗವೆಂದು ದೃಢಪಟ್ಟಲ್ಲಿ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ, ಸಲಹೆ ಸೂಚನೆಗಳನ್ನು ಅನುಸರಿಸುವದು ಅತೀ ಅವಶ್ಯಕ ಎಂದು ಸಲಹೆ ನೀಡಿದರು.

ಕ್ಷಯ ರೋಗಿಗಳಿಗೆ ತಿಂಗಳಿಗೆ ರೂ. 500 ಗಳನ್ನು ಪೌಷ್ಟಿಕ ಆಹಾರಕ್ಕಾಗಿ, ಡಿ.ಬಿ.ಟಿ. ಮುಖಾಂತರ ಚಿಕಿತ್ಸೆ ಮುಗಿಯುವವರೆಗೂ ನೇರವಾಗಿ ರೋಗಿಯ ಖಾತೆಗೆ ಜಮವಾಗುವದು ಎಂದರು. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಸೌಮ್ಯ, ನಾಗವೇಣಿ, ಹರ್ಷ, ಆಯಿಷಾ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.

ಶಾಲೆಯ ಮುಖ್ಯೋಪಾ ಧ್ಯಾಯಿನಿ ಎಂ.ಪಿ. ಕವಿತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಎಸ್. ಶಾಂತಿ, ರೇಣುಕ ಹಾಗೂ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.