ವೀರಾಜಪೇಟೆ, ಸೆ. 25: ಸುಮಾರು ಎರಡು ವರ್ಷದಿಂದ ನಿರಂತರವಾಗಿ ಬಿಟ್ಟಂಗಾಲ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಗೆ ಅನೇಕ ದೂರುಗಳನ್ನು ನೀಡಿದರೂ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇಲ್ಲಿನ ಗಡಿಯಾರ ಕಂಬದಿಂದ ಗಾಂಧಿನಗರದಲ್ಲಿರುವÀ ಅರಣ್ಯ ಭವನದವರಗೆ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಅರಣ್ಯ ವಲಯಾಧಿಕಾರಿಗೆ ಮನವಿ ಸಲ್ಲಿಸಿದರು.
ಅರಣ್ಯ ಕಚೇರಿಯ ಮುಂದೆ ಪ್ರತಿಭಟನೆ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಪುಡಿಯಂಡ ರಾಮಚ್ಚ ಅವರು, ಇಂದು ನಮ್ಮ ಗ್ರಾಮದಲ್ಲಿ ಐದಾರು ಕಾಡಾನೆಗಳು ಶಿಬಿರ ಹೂಡಿ ನಿರಂತರ ಹಾವಳಿ ಮಾಡುತ್ತಿದ್ದು ಭತ್ತ ಕೃಷಿ, ಕಾಫಿ ಅಡಿಕೆ, ಬಾಳೆ ಎಲ್ಲವೂ ನಾಶವಾಗುತ್ತಿದೆ. ಇತ್ತೀಚೆಗೆ ಶಾಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟಲು ಕಾಳಜಿ ತೋರುತ್ತಿಲ್ಲ ಎಂದು ದೂರಿದರು.
ಅರಣ್ಯ ವಲಯಧಿಕಾರಿ ಗೋಪಾಲ್ ಪ್ರತಿಕ್ರಿಯಿಸಿ, ಆ ಕಾಡಾನೆಗಳನ್ನು ಓಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಅವುಗಳನ್ನು ಓಡಿಸುವಲ್ಲಿ ಅನೇಕ ಅಡೆ ತಡೆ ಎದುರಾಗುತ್ತಿದೆ. ಬಿಟ್ಟಂಗಾಲ, ಕೊಳತೋಡು, ನಲ್ವತ್ತೊಕ್ಲು ಕಡೆ ಓಡಾಡುವ ಐದಾರು ಆನೆಗಳನ್ನು ಸ್ಥಳಾಂತರ ಮಾಡುವ ವಿಚಾರದಲ್ಲಿ ಸರಕಾರ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಸರಕಾರದಿಂದ ಹಣ ಬಿಡುಗಡೆಯಾದ ಬಳಿಕ ಪರಿಹಾರ ವಿತರಣೆ ಮುಂದುವರೆಯಲಿದೆ. ಕಾಡಾನೆಗಳ ಸ್ಥಳಾಂತರಕ್ಕೆ ಅನುಮತಿ ದೊರೆಯುವ ತನಕ ಇಲಾಖೆಯೊಂದಿಗೆ ರೈತರು ಸಹಕಾರ ನೀಡಿ ಎಂದು ಮನವಿ ಮಾಡಿದರು.