ಮಡಿಕೇರಿ, ಸೆ. 25: ಕೊಡಗು ಜಿಲ್ಲಾ ಕೇಂದ್ರ ಸಹಕಾರ (ಡಿ.ಸಿ.ಸಿ.) ಬ್ಯಾಂಕ್‍ನ ಮಹಾಸಭೆ ನಿನ್ನೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸದಸ್ಯ ಸಹಕಾರಿ ಸಂಘಗಳಿಗೆ ಶೇ. 11 ರಷ್ಟು ಡಿವಿಡೆಂಡ್ ನೀಡುವದು ಸೇರಿದಂತೆ ಹಲವು ನಿರ್ಣಯಗಳನ್ನು ಈ ಸಂದರ್ಭದಲ್ಲಿ ಅಂಗೀಕರಿಸಲಾಯಿತು.

ಶೇ. 8.50 ಬಡ್ಡಿ ದರದಲ್ಲಿ ರೈತರಿಗೆ ಆಭರಣ ಈಡಿನ ಸಾಲ ನೀಡುವದು, ಎಕರೆವಾರು ರೂ. 1 ಲಕ್ಷಗಳವರೆಗೆ ರೈತರಿಗೆ ಮಧ್ಯಮಾವಧಿ ಕೃಷಿ ಉದ್ದೇಶಿತ ಸಾಲ ನೀಡುವದು. ಎಕರೆವಾರು ರೂ. 2 ಲಕ್ಷಗಳವರೆಗೆ ರೈತರಿಗೆ ಇತರ ಉದ್ದೇಶಿತ ಸಾಲಗಳನ್ನು ನೀಡುವ ಬಗ್ಗೆ ತೀರ್ಮಾನಿಸಲಾಯಿತು.

ರೈತರು ಬೆಳೆಯುತ್ತಿರುವ ನೈಜವಾದ ಬೆಳೆಗೆ ಕಂದಾಯಾಧಿಕಾರಿಗಳ ದೃಢೀಕರಣ ಆಧಾರದಲ್ಲಿ ಫಸಲು ಎತ್ತಾವಳಿ ಸಾಲದ ಮಿತಿ ಮಂಜೂರಾತಿ ಮಾಡಿಕೊಡವ ಬಗ್ಗೆ, ಒಂದೇ ಗಂಟಿನಲ್ಲಿ ರೂ. 50 ಲಕ್ಷ ಹಾಗೂ ಮೇಲ್ಪಟ್ಟು ಮೊತ್ತದ ಠೇವಣಿಕರಿಸುವ ವ್ಯಕ್ತಿಗತ ಗ್ರಾಹಕರಿಗೆ ಶೇ. 0.50 ರಷ್ಟು ಹೆಚ್ಚುವರಿ ಬಡ್ಡಿ ನೀಡುವ ಬಗ್ಗೆ. ಸಂಪಾಜೆ, ಕೊಂಡಂಗೇರಿ ಮತ್ತು ಮಾದಾಪುರದಲ್ಲಿ ನೂತನ ಶಾಖೆಗಳನ್ನನು ತೆರೆಯುವದು, ಸಹಕಾರ ಸಂಘಗಳಿಗೆ ಬ್ಯಾಂಕಿನ ವತಿಯಿಂದ ತರಬೇತಿಯನ್ನು ಆಯೋಜನೆ ಮಾಡುವ ಬಗ್ಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು 2020ರ ಮಾರ್ಚ್ ಅಂತ್ಯದೊಳಗೆ ಕಾಮನ್ ಸಾಫ್ಟ್‍ವೇರ್ ಅಳವಡಿಸಿಕೊಳ್ಳುವ ಬಗ್ಗೆ ಹಾಗೂ 2021ರ ಶತಮಾನೋತ್ಸವ ಭವನ ನಿರ್ಮಾಣದ ಬಗ್ಗೆ ಚರ್ಚಿಸಲಾಗಿ ಅಂದಾಜು 8 ರಿಂದ 9 ಕೋಟಿ ವೆಚ್ಚದಲ್ಲಿ 5 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಮಹಾಸಭೆಯ ಅಂಗೀಕಾರ ಪಡೆಯಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಮತ್ತು ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಡಿ. ರವಿಕುಮಾರ್ ಹಾಗೂ ಪ್ರಧಾನ ವ್ಯವಸ್ಥಾಪಕ ಎನ್.ಕೆ. ಮೋಹನ್ ಉಪಸ್ಥಿತರಿದ್ದರು.

ಒಟ್ಟು 238 ಅರ್ಹ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳ ಪೈಕಿ 231 ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.