ಸಿದ್ದಾಪುರ, ಸೆ. 24: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕಾವೇರಿ ನದಿ ಪ್ರವಾಹಕ್ಕೆ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಬೆಂಗಳೂರಿನ ಕನ್ನಡ ಮನಸ್ಸುಗಳ ಪ್ರತಿಷ್ಠಾನ ವತಿಯಿಂದ ನಮ್ಮ ಕೊಡಗು ತಂಡದ ಮೂಲಕ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ನೆರೆಪೀಡಿತ ಪ್ರದೇಶಗಳಾದ ಕಟ್ಟೆಮಾಡು, ಪರಂಬುಪೈಸಾರಿ, ಬಲಮುರಿ ಮತ್ತು ವಾಲ್ನೂರು ಪ್ರದೇಶಗಳಲ್ಲಿ ಸುಮಾರು 220 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್ ಮಾತನಾಡಿ, ಪ್ರಕೃತಿ ವಿಕೋಪ ಹಾಗೂ ಮಹಾ ಮಳೆಗೆ ಹಲವು ಗ್ರಾಮದ ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹಲವು ಸಂಘ-ಸಂಸ್ಥೆಗಳು, ದಾನಿಗಳು ಸಂತ್ರಸ್ತರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ನಮ್ಮ ಕೊಡಗು ತಂಡ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿದೆ. ಇದುವರೆಗೂ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರ, ಬಟ್ಟೆ, ದಿನ ಬಳಕೆ ವಸ್ತುಗಳು ಸೇರಿದಂತೆ ಅಗತ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಂದರು. ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ದಾನಿಗಳು ಮುಂದೆ ಬರಬೇಕಾಗಿದೆ ಎಂದರು.

ನಮ್ಮ ಕೊಡಗು ತಂಡದ ನಿರ್ದೇಶಕ ಪವನ್ ಪೆಮ್ಮಯ್ಯ ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ದುರಂತ ಸಂದರ್ಭದಲ್ಲಿಯೂ ನಮ್ಮ ಕೊಡಗು ತಂಡ ಸದಾ ಜನರ ಸೇವೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದ್ದು. ಈ ಬಾರಿಯ ಪ್ರವಾಹ ಪೀಡಿತ ಗ್ರಾಮ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ.

ನಮ್ಮ ಕೊಡಗು ತಂಡದ ಸೇವೆಯನ್ನು ದೇಶ ವಿದೇಶಗಳಲ್ಲಿರುವ ಕನ್ನಡಿಗರು ಬೆಂಬಲ ಸೂಚಿಸುತ್ತಿದ್ದು ರಾಜ್ಯದ ವಿವಿಧ ಭಾಗಗಳಿಂದ ಸಂತ್ರಸ್ತರ ನೆರವಿಗೆ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಮುಂದೆ ತರುವ ಪ್ರಯತ್ನಕ್ಕೆ ಹಲವು ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದು, ದಾನಿಗಳು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು

ಕಾರ್ಯಕ್ರಮದಲ್ಲಿ ಕನ್ನಡ ಮನಸ್ಸುಗಳ ಪ್ರತಿಷ್ಠಾನದ ಅಧ್ಯಕ್ಷ ಪವನ್, ಉಪಾಧ್ಯಕ್ಷ ಚಿನ್ಮಯ್, ಸುಂಕಪ್ಪ, ಪ್ರಮುಖರಾದ ಅನು, ರಾಜು, ನಿತಿನ್, ಪ್ರಶಾಂತ್, ಶಿವು, ಕಾವ್ಯ, ಅರ್ಚನಾ, ರೇಖಾ, ನಮ್ಮ ಕೊಡಗು ತಂಡದ ಪದಾಧಿಕಾರಿಗಳಾದ ಅಜಿತ್ ಕೊಟ್ಟಕೇರಿಯನ, ಉಮೇಶ್ ಗೌಡ, ರೋಷನ್, ಲೋಹಿತ್ ಭಾಗವಹಿಸಿದ್ದರು.