ವೀರಾಜಪೇಟೆ, ಸೆ. 24: ಹಿಂದೂ ಮಲೆಯಾಳಿ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರೊಂದಿಗೆ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವದು ಪೋಷಕರ ಕರ್ತವ್ಯವಾಗಿದೆ ಎಂದು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು.

ವೀರಾಜಪೇಟೆ ಮೀನುಪೇಟೆ ಯಲ್ಲಿರುವ ಶ್ರೀ ಮುತ್ತಪ್ಪನ್ ಓಣಂ ಸಮಿತಿಯ ವತಿಯಿಂದ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 11ನೇ ವರ್ಷದ ಓಣಂ ಆಚರಣಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಮೇಶ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಘ ಪ್ರತಿವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಕಳೆದ 2018 ರಲ್ಲಿ ಪ್ರಕೃತಿ ವಿಕೋಪವಾದಾಗ ಮಡಿಕೇರಿಯಲ್ಲಿ ಮಲೆಯಾಳಿ ಸಂಘದಿಂದ ಸಂತ್ರಸ್ತರಿಗೆ ಸಹಕಾರ ನೀಡಲಾಗಿತ್ತು. ಈ ವರ್ಷ ವಿಷು ಹಬ್ಬದ ಪ್ರಯುಕ್ತ ಮಡಿಕೇರಿಯಲ್ಲಿ ಜಿಲ್ಲಾ ಮಲೆಯಾಳಿ ಫೆಡರೇಷನ್ ವತಿಯಿಂದ 2019 ನವೆಂಬರ್ ತಿಂಗಳಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆಯೋಜಿಸ ಲಾಗುವದು. ಈ ಸಂದರ್ಭ ಮಲೆಯಾಳಿ ಬಾಂಧವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗವದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷ, ಓಣಂ ಸಮಿತಿ ಅಧ್ಯಕ್ಷ ಇ.ಸಿ. ಜೀವನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಮಿತಿಯು ಕಳೆದ 11 ವರ್ಷಗ ಳಿಂದಲೂ ಓಣಂ ಆಚರಿಸಿಕೊಂಡು ಬರುತ್ತಿದ್ದು, ಮೊದಲು ಮಲೆಯಾಳಿ ಜನಾಂಗದ ಬಾಂಧವರು ಎಲ್ಲಿದ್ದಾರೆ ಎಂಬದು ಕಷ್ಟವಾಗಿತ್ತು. ಈಗ 11ನೇ ವರ್ಷದ ಕಾರ್ಯಕ್ರಮದಲ್ಲಿ ಅವರೇ ಬಂದು ಸದಸ್ಯತ್ವ ಪಡೆದಿದ್ದಾರೆ. ಈ ವರ್ಷ ವೀರಾಜಪೇಟೆ ವಿಭಾಗದಲ್ಲಿ ಅತಿ ಹೆಚ್ಚು ಮಳೆಯಿಂದ ಜಲ ಪ್ರಳಯ ಉಂಟಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಆಸ್ತಿ-ಪಾಸ್ತಿ, ಮನೆ-ಮಠ ಕಳೆದುಕೊಂಡಿರುವದರಿಂದ ಸರಳ ರೀತಿಯಲ್ಲಿ ಓಣಂ ಆಚರಣೆ ಮಾಡಲಾಗಿದೆ ಎಂದರು.

ಪ್ರಕೃತಿ ವಿಕೋಪದಿಂದ ಮನೆ ಜಖಂಗೊಂಡ 8 ಕುಟುಂಬದವರಿಗೆ ಸಮಿತಿ ವತಿಯಿಂದ ಪರಿಹಾರ ಮೊತ್ತವನ್ನು ನೀಡಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಸಹಾಯಧನ ಮತ್ತು ಪ್ರಶಸ್ತಿ ಪತ್ರವನ್ನು ಅತಿಥಿಗಳು ನೀಡಿದರು. ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿದರು. ಗೋಣಿಕೊಪ್ಪಲು, ಹೊಸಕೋಟೆ, ಕಡಂಗ, ಪೆರುಂಬಾಡಿ, ಹೆಗ್ಗಳ, ಬಿಟ್ಟಂಗಾಲ, ಚೋಕಂಡಳ್ಳಿ ಸೇರಿದಂತೆ ಇತರೆಡೆಗಳಿಂದಲೂ ಮಲೆಯಾಳಿ ಬಾಂಧವರು ಭಾಗವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಓಣಂ ಸಮಿತಿ ಅಧ್ಯಕ್ಷ ಇ.ಸಿ. ಜಿವನ್ ದೀಪ ಬೆಳಗಿಸಿ ಮಹಾಬಲಿಯನ್ನು ಮುತ್ತಪ್ಪ ಸನ್ನಿಧಿಯಲ್ಲಿ ಬರಮಾಡಿಕೊಂಡರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಸೋಮವಾರಪೇಟೆ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಕೆ.ಎನ್.ಎಸ್.ಎಸ್.ನ ಪವಿತ್ರನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಟಿ.ಎ. ನಾರಾಯಣ, ಕಿಗ್ಗಾಲಿ ಕಲರ್ ರೂಫೀಂಗ್ಸ್‍ನ ವಿನೋದ್ ಥರ್ಮಲ್, ಚೈತನ್ಯ ಮಠಪುರ ದೇವಸ್ಥಾನದ ಉಪಾಧ್ಯಕ್ಷ ಟಿ.ಎಸ್. ಗೋವಿಂದನ್, ಕಾರ್ಯದರ್ಶಿ ಸಿ.ಆರ್. ಬಾಬು, ಬಿಟ್ಟಂಗಾಲ ಮುತ್ತಪ್ಪ ದೇವಸ್ಥಾನದ ಕೆ.ವಿ. ವಾಸು, ಎಡಮಕ್ಕಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಪಿ.ಎಂ. ವಿಜಯನ್, ಓಣಂ ಸಮಿತಿಯ ಮಹಿಳಾ ಘಟಕದ ಸಿ.ಕೆ. ಭಾಗ್ಯ ಶಶಿಧರನ್ ಉಪಸ್ಥಿತರಿದ್ದರು. ಎಂ.ಎಂ. ಶಶಿಧರನ್ ಸ್ವಾಗತಿಸಿ, ನಿರೂಪಿಸಿದರು.