ಹೆಬ್ಬಾಲೆ, ಸೆ. 24: ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 2022 ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ರಾಮನಾಥಪುರ ತಂಬಾಕು ಮಂಡಳಿ ಹರಾಜು ಅಧೀಕ್ಷಕ ಅಮಲ್ ಡಿ. ಸಾಮ್ ಹೇಳಿದರು.

ಮಂಡಳಿ ಭಾರತ ಸರ್ಕಾರ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ವಾಣಿಜ್ಯ ಇಲಾಖೆ ಹಾಗೂ ರಾಮನಾಥಪುರ ತಂಬಾಕು ಮಾರುಕಟ್ಟೆ ವತಿಯಿಂದ ತೊರೆನೂರು ಬಸವೇಶ್ವರ ಸಮುದಾಯ ಭವನದಲ್ಲಿ ರೈತರಿಗೆ ಏರ್ಪಡಿಸಿದ್ದ ಕೃಷಿ ತಾಂತ್ರಿಕ ಪ್ರಾತ್ಯಕ್ಷತೆ ಹಾಗೂ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಭೂಮಿಯ ಸತ್ವ ಕಾಪಾಡುವದರೊಂದಿಗೆ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವಳಿ ಪಡೆಯುವ ಮೂಲಕ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿರಿಯಾಪಟ್ಟಣ ಆರ್.ಎಂ.ಒ. ಕ್ಷೇತ್ರಾಧಿಕಾರಿ ಸಂದೀಪ್ ಮಾತನಾಡಿ, ಸಾವಯವ ಕೃಷಿ ಅಳವಡಿಸಿಕೊಂಡರೆ ಚಿನ್ನದಂತಹ ಬೆಳೆ ತೆಗೆಯಬಹುದು. ನೈಸರ್ಗಿಕ ಪದ್ಧತಿಯಿಂದ ಮಲೆನಾಡ ಸೊಬಗನ್ನು ಮೀರಿಸಬಹುದು ಶೂನ್ಯ ಬಂಡವಾಳದಲ್ಲಿ ಉತ್ತಮ ಇಳುವರಿ ತೆಗೆದು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂದರು.

ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ಎನ್. ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಐಟಿಸಿ ವ್ಯವಸ್ಥಾಪಕ ಲೋಕೇಶ್ ವೇಣುಪ್ರವೀಣ್, ಹೆಬ್ಬಾಲೆ ಗ್ರಾ.ಪಂ. ಸದಸ್ಯ ಹೆಚ್.ಟಿ. ದಿನೇಶ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ, ಬೆಳೆಗಾರರಾದ ಹೆಚ್.ಕೆ. ಶಿವರಾಮ್, ಟಿ.ಎಲ್. ಪುಟ್ಟಸ್ವಾಮಿ, ಎಪಿಸಿಎಂಎಸ್ ನಿರ್ದೇಶಕ ಟಿ.ಬಿ. ಜಗದಿಶ್, ಮಂಡಳಿಯ ಕ್ಷೇತ್ರ ಸಹಾಯಕರು ಹಾಗೂ ಕ್ಷೇತ್ರಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯ ಪ್ರಗತಿಪರ ರೈತ ಶೇಷಪ್ಪ ಅವರನ್ನು ಸನ್ಮಾನಿಸಲಾಯಿತು.