ಸೋಮವಾರಪೇಟೆ,ಸೆ.24: ಸಾರ್ವಜನಿಕರು ಮೂಢನಂಬಿಕೆ ಗಳನ್ನು ಬದಿಗಿಟ್ಟು ಅಂಗಾಂಗ ದಾನ ಮಾಡಲು ಹೆಸರು ನೋಂದಾಯಿಸಿ ಕೊಳ್ಳುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಕಾರ್ಯಕ್ಕೆ ಮುಂದಾಗಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ಮಹಿಳಾ ಸಮಾಜದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಮತ್ತು ಯುವ ಮೋರ್ಚಾದ ವತಿಯಿಂದ, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ಸೇವಾ ಸಪ್ತಾಹ-ನೇತ್ರ ಪರೀಕ್ಷೆ, ನೇತ್ರದಾನ, ಅಂಗಾಂಗ ದಾನ ನೋಂದಣಿ, ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಷ್ಟು ಮಂದಿ ಮರಣಾನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಿದರೆ ಆತ್ಮಕ್ಕೆ ಮುಕ್ತಿ ದೊರೆಯುವದಿಲ್ಲ ಎಂಬ ಮೂಢನಂಬಿಕೆಗೆ ಒಳಗಾಗಿ, ಅಂಗಾಂಗ ದಾನಕ್ಕೆ ಮುಂದಾಗುತ್ತಿಲ್ಲ. ಇಂತಹ ಮೌಢ್ಯತೆಗಳಿಂದ ಹೊರ ಬಂದು, ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಮರಣಾ ನಂತರ ಮಣ್ಣಾಗುವ ದೇಹದ ಭಾಗಗಳು ಇತರರಿಗೆ ಉಪಯೋಗ ವಾಗುವ ನಿಟ್ಟಿನಲ್ಲಿ ಅಂಗಾಂಗ ದಾನಕ್ಕೆ ಹೆಸರು ನೋಂದಾವಣೆ ಮಾಡಿಕೊಳ್ಳ ಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ. ಬಿ.ಸಿ. ನವೀನ್ಕುಮಾರ್, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲಪಿದಾಗ ಮಾತ್ರ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಆಚರಣೆಗೆ ಅರ್ಥ ಬರುತ್ತದೆ ಎಂದರು.
ವಾರ್ಷಿಕ 5ಲಕ್ಷ ಮಂದಿ ಅಂಗಾಂಗ ಊನದಿಂದಾಗಿ ಸಾವನ್ನಪ್ಪುತ್ತಿದ್ದಾರೆ. 1.50 ಲಕ್ಷ ಕಿಡ್ನಿ ಅವಶ್ಯವಿದ್ದರೆ, 5 ಸಾವಿರ ಮಂದಿ ಮಾತ್ರ ಕಿಡ್ನಿ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ ಮಾನವನ ಅಂಗಾಂಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸತ್ತನಂತರ ಮಣ್ಣಾಗುವ ದೇಹದ ಭಾಗಗಳು ಇತರರ ಜೀವನಕ್ಕೆ ಉಪಯೋಗವಾಗ ಲೆಂದು ಪ್ರಕೋಷ್ಟದ ವತಿಯಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾ ಸಪ್ತಾಹ ಅಭಿಯಾನದ ಜಿಲ್ಲಾ ಸಂಚಾಲಕ ಮಹೇಶ್ ಜೈನಿ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಸೇವಾ ಸಪ್ತಾಹದ ಸಹ ಸಂಚಾಲಕಿ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ತಾಲೂಕು ಅಧ್ಯಕ್ಷ ಗೌಡಳ್ಳಿ ಸುನಿಲ್, ವೈದ್ಯರುಗಳಾದ ಗೀತಾ, ಫರೀನಾ ಉಪಸ್ಥಿತರಿದ್ದರು.
25 ಮಂದಿಗೆ ಉಚಿತ ಕನ್ನಡಕ
ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಮತ್ತು ಯುವ ಮೋರ್ಚಾದಿಂದ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ತಪಾಸಣೆಗೆ ಒಳಗಾದ 25 ಮಂದಿಗೆ, ವೈದ್ಯರ ಶಿಫಾರಸ್ಸಿನ ಮೇರೆ 25 ಕನ್ನಡಕಗಳನ್ನು ಉಚಿತವಾಗಿ ನೀಡುವದಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಘೋಷಿಸಿದರು.