ನಾಪೋಕ್ಲು, ಸೆ. 24: ಪಂಚಾಯಿತಿ ವತಿಯಿಂದ ಕಾವೇರಿ ನದಿತಟದಲ್ಲಿ ಮಾಡಲಾಗುತ್ತಿರುವ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತ ಗೊಳಿಸುವದು ಹಾಗೂ ವಾಹನಗಳನ್ನು ತೊಳೆಯುವದನ್ನು ನಿಷೇಧಿಸುವದು ಮತ್ತು ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕುವ ಕುರಿತು ನಾಪೋಕ್ಲು ಗ್ರಾಮಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಕೊಡವ ಸಮಾಜದ ಕಟ್ಟಡದಲ್ಲಿ ನಡೆದ ಗ್ರಾಮಸಭೆಯಲ್ಲಿ ಪಂಚಾಯಿತಿ ವತಿಯಿಂದ ಕಾವೇರಿ ನದಿದಡದಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿರುವದರಿಂದ ಪರಿಸರ ದುರ್ನಾತ ಬೀರುತ್ತಿದೆ ಅಲ್ಲದೇ ನದಿನೀರಿನಲ್ಲಿ ವಾಹನಗಳನ್ನು ತೊಳೆಯುತ್ತಿರುವದರಿಂದ ನದಿ ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತು.
ಪ್ರಸಕ್ತ ಸಾಲಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚೆರಿಯಪರಂಬುವಿನ ನದಿತಟದಲ್ಲಿ ರುವ ಮನೆಗಳಿಗೆ ಹಾನಿಯಾಗಿದ್ದು, ಇಂತಹ ಮನೆಗಳಿಗೆ ಪರಿಹಾರ ನೀಡುವದರೊಂದಿಗೆ ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು. ಇದಕ್ಕುತ್ತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ನದಿದಡದ ಪ್ರವಾಹ ಪೀಡಿತ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸದಂತೆ ಈ ಹಿಂದೆಯೇ ಪಂಚಾಯಿತಿಯಿಂದ ತಿಳುವಳಿಕೆ ನೀಡಲಾಗಿತ್ತಾದರೂ ಇದನ್ನೆಲ್ಲಾ ಬದಿಗೊತ್ತಿ ಅಲ್ಲಿ ಮನೆಗಳನ್ನು ನಿರ್ಮಿಸಿರುವದೇ ಅಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ದಾಖಲೆಗಳನ್ನಾಗಲೀ, ಮೂಲಸೌಲಭ್ಯಗಳನ್ನಾಗಲೀ ಒದಗಿಸಲು ಸಾಧ್ಯವಿಲ್ಲವೆಂದು ಕಡಾಖಂಡಿತವಾಗಿ ನುಡಿದರಲ್ಲದೇ, ಸೂಕ್ತ ನಿವೇಶನ ಲಭಿಸಿದಲ್ಲಿ ಮನೆಗಳನ್ನು ನಿರ್ಮಿಸಿಕೊಡ ಲಾಗುವದೆಂದು ಭರವಸೆ ನೀಡಿದರು.
ಪಟ್ಟಣದ ಮಾಂಸ ಮತ್ತು ಮೀನಿನ ಅಂಗಡಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.
ನಾಪೋಕ್ಲುವಿನ ಹಿಂದೂ ರುದ್ರಭೂಮಿ ಮಳೆಗಾಲದ ಸಂದರ್ಭ ಮುಳುಗಡೆಯಾಗುತ್ತಿದ್ದು, ಇದರಿಂದ ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶವಸಂಸ್ಕಾರ ಘಟಕವನ್ನು ನಿರ್ಮಿಸುವಂತೆ ಬಿ.ಎಂ. ಪ್ರದೀಪ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪಂಚಾಯ್ತಿ ಘಟಕವನ್ನು ನಿರ್ಮಿಸುವ ಭರವಸೆ ನೀಡಿತು.
ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು. ನಿರ್ಲಕ್ಷ್ಯ ತೋರುವದು ಸರಿಯಲ್ಲ. ನೂರಂಬಾಡ ಉದಯ ಶಂಕರ್ ಹಾಗೂ ಬಿದ್ದಾಟಂಡ ಜಿನ್ನು ನಾಣಯ್ಯ ಹೇಳಿದರು.
ನಿವೃತ್ತ ಸೇನಾಧಿಕಾರಿ ಕೊಂಡೀರ ನಾಣಯ್ಯ ಮಾತನಾಡಿ, ರೆವಿನ್ಯೂ ಇಲಾಖೆಯಿಂದ ನಮ್ಮ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ನಾಪೋಕ್ಲುವಿನ ರೆವಿನ್ಯೂ ಇಲಾಖೆಯ ಸಿಬ್ಬಂದಿ ಕರ್ತವ್ಯ ಲೋಪವೆಸಗುತ್ತಿದ್ದು, ಭ್ರಷ್ಟರಾಗಿದ್ದಾರೆ. ಅವರನ್ನು ಕೂಡಲೇ ವರ್ಗಾಯಿಸಿ ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗು ವದೆಂದು ಸಭೆಯಲ್ಲಿ ಎಚ್ಚರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕಂಗಾಂಡ ಜಾಲಿಪೂವಪ್ಪ, ಬಾಳೆಯಡ ಮೇದಪ್ಪ, ಕನ್ನಂಬೀರ ಸುಧಿ, ಕಂಗಾಂಡ ಭೀಮಯ್ಯ, ಅರೆಯಡ ಅಶೋಕ್, ಬಿದ್ದಾಟಂಡ ತಮ್ಮಯ್ಯ, ಕುಲ್ಲೇಟಿರ ಬೇಬ, ಬೊಳ್ಳಮ್ಮ ನಾಣಯ್ಯ, ಮನ್ಸೂರ್ ಆಲಿ, ಕನ್ನಂಭಿರ ಸುಧಿ ತಿಮ್ಮಯ್ಯ, ಪಾಡಿಯಮ್ಮಂಡ ಮನು ಮಹೇಶ್, ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ನೋಡಲ್ ಅಧಿಕಾರಿಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಮೇಲ್ವಿಚಾರಕಿ ಜಯಶೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಬ ತಿಮ್ಮಯ್ಯ, ಪಂಚಾಯಿತಿ ಸಿಬ್ಬಂದಿ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖೆಯಿಂದ ದೊರಕುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದ ಸಭೆಯಲ್ಲಿ ನಂದಿನಿ ವರದಿ ವಾಚಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಚೋಂದಕ್ಕಿ ಸ್ವಾಗತಿಸಿ ವಂದಿಸಿದರು.
-ದುಗ್ಗಳ ಸದಾನಂದ