ಮಡಿಕೇರಿ, ಸೆ. 24: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ; ಈ ಬಾರಿ ದಶಮಂಟಪ ಸಮಿತಿ ಜವಬ್ದಾರಿ ಹೊಂದಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 89ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ನರಸಿಂಹನಿಂದ ಹಿರಣ್ಯ ಕಶಿಪು ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಅಧ್ಯಕ್ಷ ಕೆ.ಕೆ. ಮೋಹನ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‍ನ ಎಂ.ಪಿ. ಲೈಟಿಂಗ್ಸ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಎಂಟು ಕಲಾಕೃತಿಗಳನ್ನು ಬಳಸಲಾಗುತಿದ್ದು, ಹುದುಬೂರಿನ ಕಲಾವಿದ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಧ್ವನಿವರ್ಧಕ ಫೈರ್ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆಯನ್ನು ಮಡಿಕೇರಿ ಸ್ಕಂದ ಡೆಕೋರೇಟರ್ಸ್‍ನ ಅನಿಲ್ ಮಾಡಲಿದ್ದಾರೆ. ಪ್ಲಾಟ್‍ಫಾರಂನ್ನು ಸುಬ್ರಮಣಿ ತಂಡ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಮಡಿಕೇರಿ ಆರಾಧನ ಆಟ್ರ್ಸ್‍ನ ಆನಂದ್ ತಂಡ ಮಾಡಲಿದೆ. ದಿನೇಶ್ ನಾಯರ್ ಮತ್ತು ತಂಡ ಕಲಾಕೃತಿಗಳಿಗೆ ಚಲನ-ವಲನವನ್ನು ಒದಗಿಸಲಿದೆ. ಪೂಕೋಡ್‍ನ ಜಾಲಿ ತಂಡದ ವಾದ್ಯಗೋಷ್ಟಿ ಮಂಟಪವನ್ನು ಮುನ್ನಡೆಸಲಿದೆ ಎಂದು ಮೋಹನ್ ವಿವರಿಸಿದರು.

ಒಟ್ಟು 12 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಬಹುಮಾನಕ್ಕಾಗಿ ಪೈಪೋಟಿ ನೀಡಲಾಗುವದು. ಉತ್ಸವದ ಯಶಸ್ಸಿಗಾಗಿ 120 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ಮೋಹನ್ ಮಾಹಿತಿಯಿತ್ತರು.

- ಉಜ್ವಲ್ ರಂಜಿತ್